Maruti: ಎರಡು ಹೊಸ ಮಾರುತಿ ಕಾರುಗಳ ಮಾಹಿತಿ ಸೋರಿಕೆ... ಅಗ್ಗದ ಬೆಲೆಯ 7-ಸೀಟರ್?
ಮಾರುತಿ ಸುಜುಕಿ ಕಂಪನಿಯು ಕೊನೆಗೂ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಭಾರತದಲ್ಲಿ ಮಾರುತಿಯ ಮೊದಲ ಇವಿ ಕಾರಾಗಿದ್ದು, ಇದರ ನಂತರ ಕಂಪನಿಯು ಇನ್ನೂ ಎರಡು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ಕಂಪನಿಯು ಮುಂಬರುವ ವರ್ಷಗಳಲ್ಲಿ ಹೊಸ ಕೈಗೆಟುಕುವ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಸದ್ಯ ಕೆಲಸ ಮಾಡುತ್ತಿದೆ.
ಅದಕ್ಕೂ ಮುನ್ನ ಈ ಎಲ್ಲಾ ಎಲೆಕ್ಟ್ರಿಕ್ ಕಾರುಗಳಿಗೆ ಮೂಲವಾಗಿರುವ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ ಮೊದಲು ಭಾರತದಲ್ಲಿ ಯಶಸ್ಸು ಕಾಣಬೇಕಿದೆ. ಮುಂದಿನ ತಿಂಗಳು ಮಾರಾಟಕ್ಕೆ ಬರಲಿರುವ ಕಂಪನಿಯ ಮೊದಲ ಇವಿ ಕಾರು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀಗಿಂತ ಹೆಚ್ಚು ರೇಂಜ್ ನೀಡಲಿದೆ. ಹಲವಾರು ಆಧುನಿಕ ಫೀಚರ್ಸ್ ಹಾಗೂ ಆಕರ್ಷಕ ಡಿಸೈನ್‌ನೊಂದಿಗೆ ಬರಲಿದೆ.

ಈಗಾಗಲೇ ಮಾರುತಿ ಹೊಸ ಎಲೆಕ್ಟ್ರಿಕ್ ಕಾರು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಡೀಲರ್‌ಶಿಪ್‌ಗಳಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹ್ಯಾಚ್‌ಬ್ಯಾಕ್ ಹಾಗೂ 7-ಸೀಟರ್ ಎಂಪಿವಿ ಕಾರುಗಳನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಮುಂಬರಲಿರುವ ಎರಡೂ ಕಾರುಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
1. ಮಾರುತಿ ಸುಜುಕಿ ಎಲೆಕ್ಟ್ರಿಕ್ ಎಂಪಿವಿ: ಮಾರುತಿ ಸುಜುಕಿ ದೇಶಿಯ ಮಾರುಕಟ್ಟೆಗಾಗಿ ಹೊಸ ಎಲೆಕ್ಟ್ರಿಕ್ ಎಂಪಿವಿಯನ್ನು ಅಭಿವೃದ್ಧಿಪಡಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದು ಸೆಪ್ಟೆಂಬರ್ 2026 ರ ವೇಳೆಗೆ ಮಾರಾಟವಾಗಲಿದೆ ಎಂದು ಹೇಳಲಾಗುತ್ತಿದೆ. ಇದು ಇ-ವಿಟಾರಾದ ಅದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದೆ. ಇದರ ಬಿಡುಗಡೆ ಬಳಿಕ ಟೊಯೊಟಾ ಕೂಡ ಬಿಡುಗಡೆ ಮಾಡಲಿದೆ.

ಇದು 7-ಸೀಟರ್ ಎಂಪಿವಿ ಆಗಿರಲಿದ್ದು, ವಾರ್ಷಿಕ 50,000 ದಿಂದ 1 ಲಕ್ಷ ಯುನಿಟ್ ಕಾರುಗಳ ಮಾರಾಟ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಬಿಡುಗಡೆಯಾದ ನಂತರ, ಮಾರುತಿ ಸುಜುಕಿ ಎಲೆಕ್ಟ್ರಿಕ್ 7-ಸೀಟರ್ ಎಂಪಿವಿ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ಕಿಯಾ ಕ್ಯಾರೆನ್ಸ್ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ.
2. ಮಾರುತಿ ಸುಜುಕಿ ಹ್ಯಾಚ್ ಬ್ಯಾಕ್: ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್‌ಗಳು ಯಾವಾಗಲೂ ಮಾರುತಿ ಸುಜುಕಿಯ ಪ್ರಮುಖ ಆಕರ್ಷಣೆಯಾಗಿದೆ. ಈ ಮುಂಬರುವ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್‌ನ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿವೆ. ಇದು 2028 ರ ವೇಳೆಗೆ ಉತ್ಪಾದನೆಗೆ ಹೋಗುವ ನಿರೀಕ್ಷೆಯಿದೆ. ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ 35 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ.

ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಇವಿ ಮತ್ತು ಎಂಜಿ ಕಾಮೆಟ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಇದು ಭಾರತದಲ್ಲಿ ಸ್ಥಳೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರಾಗಲಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಈ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಬಿಡುಗಡೆಯಾದಲಿದೆ ಎಂದು ಹೇಳಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications