Maruti Suzuki: ಎಷ್ಟೇ ಆಫರ್ ಕೊಟ್ಟರು ಬೇಡ ಎನ್ನುತ್ತಿದ್ದಾರೆ ಭಾರತೀಯರು... ಆದರೆ ವಿದೇಶದಲ್ಲಿ ಫುಲ್ ಡಿಮ್ಯಾಂಡ್!
ಭಾರತದಲ್ಲಿ ಬಿಡುಗಡೆಯಾಗುವ ಮುನ್ನ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 3-ಡೋರ್ ಸುಜುಕಿ ಜಿಮ್ನಿ ಸಖತ್ ಡಿಮ್ಯಾಂಡ್ ಪಡೆದುಕೊಂಡಿತ್ತು. ನವೆಂಬರ್ 2020 ರಿಂದ ಮಾರುತಿ ಸುಜುಕಿ ಹರಿಯಾಣದ ಗುರ್ಗಾಂವ್ ಉತ್ಪಾದನಾ ಸ್ಥಾವರದಿಂದ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ದೇಶಗಳಿಗೆ ಎಡ ಮತ್ತು ಬಲಗೈ ಡ್ರೈವ್ ಮಾರುಕಟ್ಟೆಗಳಿಗೆ ರಫ್ತು ಮಾಡಲು ಪ್ರತ್ಯೇಕವಾಗಿ 3-ಡೋರ್ ಮಾಡಲ್‌ಗಳನ್ನು ಉತ್ಪಾದಿಸುತ್ತಿದೆ. ಆ ದೇಶಗಳಲ್ಲಿ ಮಾತ್ರ ಮಾರಟದಲ್ಲಿರುವ ಈ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡಲು ಹಲವರು ಕಾತುರದಿಂದ ಕಾಯುತ್ತಿದ್ದರು. ಆದರೆ ಒಂದೇ ಬಾರಿ ಮಾರುತಿ ಸುಜುಕಿ ಕಂಪನಿಯು ಬಹುನಿರೀಕ್ಷಿತ 5-ಡೋರ್ ಜಿಮ್ನಿಯನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿತ್ತು.
ಭಾರತದಲ್ಲಿ ಬಿಡುಗಡೆಯಾದ ಎರಡು ವರ್ಷಗಳ ನಂತರ, 5-ಡೋರ್ ಮಾರುತಿ ಜಿಮ್ನಿ 1 ಲಕ್ಷ ಮಾರಾಟದ ಗಡಿಯನ್ನು ದಾಟಿದೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ ಏನು ಗೊತ್ತಾ? ಮಾರಾಟ ಸಂಖ್ಯೆಗಳ ಪ್ರಕಾರ, ಜೂನ್ 2023 ರಲ್ಲಿ ಬಿಡುಗಡೆಯಾದಾಗಿನಿಂದ ಏಪ್ರಿಲ್ ಅಂತ್ಯದವರೆಗೆ ಜಿಮ್ನಿಯ 1,02,024 ಯುನಿಟ್ ಕಾರುಗಳು ಮಾರಾಟವಾಗಿವೆ. ಇದರಲ್ಲಿ ರಫ್ತಿನ ಸಂಖ್ಯೆ ಹೆಚ್ಚು, ದೇಶೀಯ ಮಾರಾಟ ತೀರಾ ಕಡಿಮೆಯಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 26,180 ಯುನಿಟ್ ಕಾರುಗಳು ಮಾತ್ರ ಮಾರಾಟವಾಗಿದ್ರೆ, ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ 75,844 ಯುನಿಟ್ ಕಾರುಗಳನ್ನು ರಫ್ತು ಮಾಡಲಾಗಿದೆ. ಈ ಕಾರಿಗೆ ಭಾರತದಲ್ಲಿ ಬೇಡಿಕೆ ಇಲ್ಲ ಎಂಬುದನ್ನು ಈ ಅಂಕಿಅಂಶಗಳು ತಿಳಿಸುತ್ತವೆ. ಕಾರು ಆರಂಭದಲ್ಲಿ ಭಾರತದಲ್ಲಿ ಸಖತ್ ಸದ್ದು ಮಾಡಿತ್ತು, ಗ್ರಾಹಕರ ಪ್ರತಿಕ್ರಿಯೆ ಕಂಡು ಕಂಪನಿಗೆ ಫುಲ್ ಜೋಷ್ ಬಂದಿತ್ತು.
ಭಾರತದಲ್ಲಿ ಜಿಮ್ನಿ ಅನಾವರಣಗೊಂಡಿದ್ದೇ ತಡ ಭಾರತದಲ್ಲಿ ಐದು ತಿಂಗಳಲ್ಲಿ 30,000 ಕ್ಕೂ ಹೆಚ್ಚು ಬುಕಿಂಗ್‌ಗಳು ಹರಿದು ಬಂದಿದ್ದವು. ಇದನ್ನು ಕಂಡು ಕಂಪನಿ ಕೂಡ ಭಾರತದಲ್ಲಿ ಜಿಮ್ನಿ ಹೊಸ ಅಲೆ ಎಬ್ಬಿಸಲಿದೆ ಎಂದು ಖುಷಿಯಲ್ಲಿತ್ತು. ಆದರೆ ಬರಬರುತ್ತಾ ದೇಶೀಯ ಮಾರಾಟವು 2025 ರ ಹಣಕಾಸು ವರ್ಷದಲ್ಲಿ ಶೇ49 ರಷ್ಟು ಕುಸಿದಿದೆ. ಭಾರತದಲ್ಲಿ ಈ ಕಾರನ್ನು ಖರೀದಿಸಲು ಹಿಂದೇಟು ಹಾಕುತ್ತಿರುವುದು ಕಂಪನಿಯನ್ನು ನಿರಾಸೆಗೊಳಿಸಿದೆ.

ವಿದೇಶಗಳಲ್ಲಿ ಸಖತ್ ಡಿಮ್ಯಾಂಡ್: ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ ಸುಜುಕಿ ಜಿಮ್ನಿ 5-ಡೋರ್ ಜಪಾನ್‌ನಲ್ಲಿ 'ನೋಮೇಡ್' ಎಂಬ ಹೆಸರಿನಲ್ಲಿ ಅನಾವರಣಗೊಂಡಿತು. ಅಲ್ಲಿನ ಜನರಿಗೆ ಈ ಕಾರು ತುಂಬಾ ಇಷ್ಟವಾಗಿತ್ತು, ಈ ಮೇಡ್ ಇನ್ ಇಂಡಿಯಾ ಜಿಮ್ನಿ 5-ಡೋರ್ ರಫ್ತುಗಳು ದಾಖಲೆಯಲ್ಲಿ ನಡೆದವು. ಬುಕಿಂಗ್ ತೆರೆದ ಕೇವಲ ನಾಲ್ಕು ದಿನಗಳಲ್ಲಿ ಕಂಪನಿಯು 50,000 ಕ್ಕೂ ಹೆಚ್ಚು ಪ್ರೀ-ಆರ್ಡರ್‌ಗಳನ್ನು ಸ್ವೀಕರಿಸಿತ್ತು.
ಅಕ್ಟೋಬರ್ 2023 ರಲ್ಲಿ, ಭಾರತದಲ್ಲಿ 5 ಡೋರ್ ಎಸ್‌ಯುವಿಯನ್ನು ಪ್ರಾರಂಭಿಸಿದ ಐದು ತಿಂಗಳ ನಂತರ, ಮಾರುತಿ ಜಿಮ್ನಿಯ ರಫ್ತುಗಳು ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಸೇರಿದಂತೆ ಪ್ರಮುಖ ಸಾಗರೋತ್ತರ ಮಾರುಕಟ್ಟೆಗಳಿಗೆ ರಫ್ತು ಮಾಡಲು ಪ್ರಾರಂಭಿಸಿತು. ಮೆಕ್ಸಿಕೊ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಬಲವಾದ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಪಡೆಯಿತು.

ಮಾರುತಿ ಜಿಮ್ನಿ ವಿಶೇಷತೆಗಳು: ಮಾರುತಿ ಜಿಮ್ನಿ ರೂ.12.76 ಲಕ್ಷದಿಂದ ಗರಿಷ್ಠ ರೂ.14.96 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.5-ಲೀ. ಪೆಟ್ರೋಲ್ ಎಂಜಿನ್ ಹೊಂದಿದ್ದು, 105 ಪಿಎಸ್ ಪವರ್ ಮತ್ತು 134.2 ಎನ್ಎಂ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 16 ರಿಂದ 17 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ.
9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋ ಎಸಿ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್)ಗಳನ್ನು ಹೊಂದಿದೆ.


Click it and Unblock the Notifications