ಬಡವರ ಅಂಬಾರಿ: 33 ಕಿ.ಮೀ ಮೈಲೇಜ್.. 6 ಲಕ್ಷದ ಈ ಕಾರು ಬಿಸಿ ಜಾಮೂನಿನಂತೆ ಸೇಲ್ಸ್!
ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಜಗಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಹೊಂದಿದ್ದು, ಹಲವು ಆಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಆಗಸ್ಟ್ ತಿಂಗಳು 'ಸ್ವಿಫ್ಟ್' ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 12,385 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 12,844 ಯುನಿಟ್‌ಗಳನ್ನು ಮಾರಲಾಗಿತ್ತು. ಆದರೂ ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಸ್ವಲ್ಪ ಮಟ್ಟಿಗೆ ಅಂದರೆ ಶೇಕಡ -3.57% ಕುಸಿತವಾಗಿದೆ.
ಮಾರುತಿ ಸುಜುಕಿ ಸ್ವಿಫ್ಟ್ ವಿಶೇಷತೆಗಳೇನು:
ಈ ಹ್ಯಾಚ್‌ಬ್ಯಾಕ್ ಕನಿಷ್ಠ ರೂ.6.50 ಲಕ್ಷ ಹಾಗೂ ಗರಿಷ್ಠ ರೂ.9.60 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಕೇಂದ್ರ ಸರ್ಕಾರವು ಹೊಸ ಕಾರುಗಳ ಖರೀದಿ ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ಕಡಿತಗೊಳಿಸಿದೆ. ನೂತನ ತೆರಿಗೆ ದರಗಳು ಸೆಪ್ಟೆಂಬರ್ 22 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ನಂತರದಲ್ಲಿ 'ಸ್ವಿಫ್ಟ್' ಕಾರಿನ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.

ಇದು ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ (ಒ), ಝಡ್ಎಕ್ಸ್ಐ ಹಾಗೂ ಝಡ್ಎಕ್ಸ್ಐ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲೈಟ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು ಹಾಗೂ 15 ಇಂಚಿನ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ.
ನೂತನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಪರ್ಲ್ ಆರ್ಕ್ಟಿಕ್ ವೈಟ್, ಸಿಜ್ಲಿಂಗ್ ರೆಡ್ ಮೆಟಾಲಿಕ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಲಸ್ಟರ್ ಬ್ಲೂ, ನಾವೆಲ್ ಆರೆಂಜ್ ಮತ್ತು ಬ್ಲೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 3,860 ಎಂಎಂ ಉದ್ದ, 1,735 ಎಂಎಂ ಅಗಲ ಮತ್ತು 1,520 ಎಂಎಂ ಎತ್ತರವು ಇದೆ. 163 ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2450 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 990 ಕೆಜಿ ತೂಕವು ಇದೆ.

ಈ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ಮಾಡಬಹದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 265 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.
ಹೊಸ ಮಾರುತಿ ಸ್ವಿಫ್ಟ್ ಕಾರು ಶಕ್ತಿಯುತವಾಗಿರುವ ಪವರ್‌ಟ್ರೇನ್‌ನ್ನು ಪಡೆದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಜಡ್-ಸೀರೀಸ್ ಪೆಟ್ರೋಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. ರೂಪಾಂತರಗಳಿಗೆ ತಕ್ಕಂತೆ 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 24 ರಿಂದ 32.85 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 37 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.

ಇದು 170 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 12 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಕ್ಲೇಮೇಟ್ ಕಂಟ್ರೋಲ್, ಯುಎಸ್‌ಬಿ ಟೈಪ್ ಸಿ ಪೋರ್ಟ್, ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್ ಹಾಗೂ ವೈರ್‌ಲೆಸ್ ಚಾರ್ಜರ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಸೀಟ್ ಬೆಲ್ಟ್ ರಿಮೈಂಡರ್ ಮತ್ತು 3 ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ತನ್ನದಾಗಿಸಿಕೊಂಡಿದೆ.
ಒಟ್ಟಾರೆಯಾಗಿ 'ಮಾರುತಿ ಸುಜುಕಿ ಸ್ವಿಫ್ಟ್' ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಆದರೂ ಆಗಸ್ಟ್‌ನಲ್ಲಿ ಈ ಕಾರಿನ ಮಾರಾಟ ಸಂಖ್ಯೆ ಬೆರಳೆಣಿಕೆಯಷ್ಟು ಇಳಿಕೆಯಾಗಲು ಒಂದಷ್ಟು ಕಾರಣಗಳಿವೆ. ಕಳೆದ ತಿಂಗಳೇ ನೂತನ ಕಾರುಗಳ ಮೇಲಿನ ಜಿಎಸ್‌ಟಿ ಪ್ರಮಾಣವು ಕಡಿಮೆಯಾಗಲಿದೆ ಎಂಬ ಸುಳಿವು ಗ್ರಾಹಕರಿಗೆ ಲಭ್ಯವಿತ್ತು. ಇದರೊಂದಿಗೆ ಎಸ್‌ಯುವಿಗಳ ಪ್ರಭಾವವು ತುಸು ಹೆಚ್ಚಿದೆ. ಹೀಗಾಗಿ, ಮಾರಾಟ ಸಂಖ್ಯೆಯು ಇಳಿಮುಖವಾಗಿದೆ ಎನ್ನಲಾಗಿದೆ.


Click it and Unblock the Notifications








