ಇನ್ನು ಮೂಗು ಮುರಿಯುವಂತಿಲ್ಲ.. 29 ಕಿ.ಮೀ ಮೈಲೇಜ್, ಹೊಸ ಮಾರುತಿ ಕಾರಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್
ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ನೂತನ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರನ್ನು ಪರಿಚಯಿಸಲಾಗಿತ್ತು. ಇದೊಂದು ಎಸ್‌ಯುವಿಯಾಗಿದೆ. ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸಲಾಗುತ್ತದೆ. ಸದ್ಯ, ಜಾಗತಿಕವಾಗಿ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿ (Global NCAP) ಇದೇ 'ವಿಕ್ಟೋರಿಸ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ತೀರ್ಮಾನ ಮಾಡಿದೆ. ಬನ್ನಿ ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಹೊಚ್ಚ ಹೊಸ 'ಮಾರುತಿ ಸುಜುಕಿ ವಿಕ್ಟೋರಿಸ್' ಎಸ್‌ಯುವಿಯನ್ನು ಗ್ಲೋಬಲ್ ಎನ್‌ಸಿಎಪಿಯ ವಿವಿಧ ಸುರಕ್ಷತಾ ಮಾನದಂಡಗಳ ಅನ್ವಯ ಪರೀಕ್ಷಿಸಲಾಯಿತು. ವಿಶೇಷವಾಗಿ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 33.72 ಅಂಕಗಳನ್ನು ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 41 ಅಂಕಗಳನ್ನು ಗಳಿಸಿದೆ. ಇದರೊಂದಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ತನ್ನದಾಗಿಸಿಕೊಂಡಿದೆ. ಈ ಮೊದಲು ಗ್ಲೋಬಲ್ ಎನ್‌ಸಿಎಪಿಯಿಂದ 'ಮಾರುತಿ ಸುಜುಕಿ ಡಿಜೈರ್' ಕೂಡ 5-ಸ್ಟಾರ್ ರೇಟಿಂಗ್‌ನ್ನು ಪಡೆದಿತ್ತು.

ಇದೇ 'ವಿಕ್ಟೋರಿಸ್'ಗೆ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಭಾರತ್ ಎನ್‌ಸಿಎಪಿಯೂ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 31.66 ಅಂಕಗಳನ್ನು ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 43 ಅಂಕಗಳನ್ನು ಗಳಿಸಿದೆ.
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೂಂಡಿದೆ.

ನೂತನ ಮಾರುತಿ ಸುಜುಕಿ ವಿಕ್ಟೋರಿಸ್ ಎಸ್‌ಯುವಿಯು ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಾಗುವ ನಿರೀಕ್ಷೆಯಿದೆ. ಕನಿಷ್ಠ ರೂ.9.70 ಲಕ್ಷ ಹಾಗೂ ಗರಿಷ್ಠ ರೂ.15 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಜಡ್ಎಕ್ಸ್ಐ ಮತ್ತು ಜಡ್ಎಕ್ಸ್ಐ (ಒ) ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಇದು ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು 18 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಆರ್ಕ್ಟಿಕ್ ವೈಟ್, ಸಿಜ್ಲಿಂಗ್ ರೆಡ್, ಮ್ಯಾಗ್ಮಾ ಗ್ರೇ ಹಾಗೂ ಮಿಸ್ಟಿಕ್ ಗ್ರೀನ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 373 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. 2,600 ಎಂಎಂ ವೀಲ್‌ಬೇಸ್‌ನ್ನು ತನ್ನದಾಗಿಸಿಕೊಂಡಿದೆ.
ಹೊಸ ಮಾರುತಿ ವಿಕ್ಟೋರಿಸ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 1.5-ಲೀ. ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀ. ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) & 1.5-ಲೀ. ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 19 ರಿಂದ 28.65 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.
ಇದು ಒಳಭಾಗದಲ್ಲಿ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, 64 ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ಆಟೋ ಎಸಿ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








