29 ಕಿ.ಮೀ ಮೈಲೇಜ್.. ಹೊಸ ಮಾರುತಿ ಎಸ್‌ಯುವಿಗೆ ಫುಲ್ ಡಿಮ್ಯಾಂಡ್, ಪ್ರತಿದಿನ 1,000 ಕಾರುಗಳು ಬುಕ್ಕಿಂಗ್!
ನೂತನ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಎಸ್‌ಯುವಿಯನ್ನು ಸೋಮವಾರವಷ್ಟೇ ಬಿಡುಗಡೆಗೊಳಿಸಲಾಗಿತ್ತು. ಅದಕ್ಕೂ ಮೊದಲೇ ಅಂದರೆ ಸೆ.3ರಿಂದ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಗ್ರಾಹಕರು ರೂ.11,000 ಮುಂಗಡ ಮೊತ್ತವನ್ನು ಪಾವತಿಸುವ ಮೂಲಕ ಆರ್ಡರ್ ಮಾಡಬಹುದು. ಸೆ.22ಕ್ಕೆ ವಿತರಣೆಗಳು ಶುರುವಾಗಲಿದೆ. ಸದ್ಯ, ಇದೇ 'ವಿಕ್ಟೋರಿಸ್' ದಿನವೊಂದಕ್ಕೆ ಸರಾಸರಿ 1,000 ಬುಕ್ಕಿಂಗ್‌ಗಳನ್ನು ಪಡೆದುಕೊಳ್ಳುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಮಾರುತಿ ಸುಜುಕಿಯು ಮಾರಾಟಗೊಳಿಸುವ ಪ್ರಯಾಣಿಕ ವಾಹನಗಳ ಪಟ್ಟಿಯಲ್ಲಿ 'ಗ್ರ್ಯಾಂಡ್ ವಿಟಾರಾ' ಬಳಿಕ, ವಿಕ್ಟೋರಿಸ್ ಎರಡನೇ ಮಿಡ್-ಸೈಜ್ ಎಸ್‌ಯುವಿಯಾಗಿದೆ. ಈ ವಿಭಾಗದಲ್ಲಿ 2025ರ ಆರ್ಥಿಕ ವರ್ಷದಲ್ಲಿ (FY25) ಗ್ರ್ಯಾಂಡ್ ವಿಟಾರಾ ಕಾರೊಂದರ ಮುಖಂತರವೇ ಕಂಪನಿಯು 20.3% ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿತ್ತು.

ಇದೇ 2025ರ ಹಣಕಾಸು ವರ್ಷದಲ್ಲಿ ದೇಶೀಯವಾಗಿ ವಿವಿಧ ಕಂಪನಿಗಳಿಗೆ ಸೇರಿದ ಒಟ್ಟು 23,66,272 ಎಸ್‌ಯುವಿಗಳು ಮಾರಾಟಗೊಂಡಿದ್ದವು. ಈ ಮೂಲಕ ಪ್ರಯಾಣಿಕ ವಾಹನ ವಿಭಾಗದಲ್ಲಿ ಪಾರುಪತ್ಯ ಸಾಧಿಸಲಾಗಿದ್ದು, ಶೇಕಡ 54.3% ಜಾಗವನ್ನು ಆಕ್ರಮಿಸಿಕೊಂಡಿದ್ದವು. ಹಾಗೆಯೇ ಒಟ್ಟಾರೆ ಎಸ್‌ಯುವಿ ಮಾರುಕಟ್ಟೆಯಲ್ಲಿ ಮಿಡ್-ಸೈಜ್ ಎಸ್‌ಯುವಿಗಳು ಶೇಕಡ 25.8% ಪಾಲನ್ನು ಹೊಂದಿದ್ದವು.
ವಿಶೇಷವಾಗಿ 'ಹ್ಯುಂಡೈ ಕ್ರೆಟಾ' ಮಿಡ್-ಸೈಜ್ ಎಸ್‌ಯುವಿ ವಿಭಾಗದಲ್ಲಿ ಅಗ್ರಪಂಕ್ತಿಯಲ್ಲಿದೆ. 2025ರ ಆರ್ಥಿಕ ವರ್ಷದಲ್ಲಿ 1,94,871 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ನಂತರದ ಸ್ಥಾನದಲ್ಲಿ ಮಾರುತಿ ಗ್ರ್ಯಾಂಡ್ ವಿಟಾರಾ (1,23,946 ಯುನಿಟ್), ಕಿಯಾ ಸೆಲ್ಟೋಸ್ (72,618 ಯುನಿಟ್) ಹಾಗೂ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (60,388 ಯುನಿಟ್) ಕಾರುಗಳಿವೆ.
ಈ ಮಿಡ್-ಸೈಜ್ ಎಸ್‌ಯುವಿಗಳನ್ನು ಮಾರಾಟದಿಂದ ಮಣಿಸಿ, ನಂಬರ್ 1 ಆಗುವ ಉದ್ದೇಶದಿಂದ 'ವಿಕ್ಟೋರಿಸ್' ಕಾರನ್ನು ಮಾರಾಟಕ್ಕೆ ತರಲಾಗಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಜಡ್ಎಕ್ಸ್ಐ, ಜಡ್ಎಕ್ಸ್ಐ (ಒ), ಜಡ್ಎಕ್ಸ್ಐ ಪ್ಲಸ್ ಮತ್ತು ಜಡ್ಎಕ್ಸ್ಐ (ಒ) ಪ್ಲಸ್ ಎಂಬ ರೂಪಾಂತರಗಳೊಂದಿಗೂ ಸಿಗುತ್ತದೆ.
ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರನ್ನು ಸೆಳೆಯುತ್ತದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಸ್ಕ್ವೇರ್ಡ್ ಆಫ್ ವೀಲ್ ಆರ್ಚ್‌ಗಳು, ಶಾರ್ಕ್ ಫಿನ್ ಆಂಟೆನಾ, ಕನೆಕ್ಟ್ಡ್ ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ 18 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಸ್ಪ್ಲೆಂಡಿಡ್ ಸಿಲ್ವರ್, ಸಿಜ್ಲಿಂಗ್ ರೆಡ್, ಬ್ಲೂಯಿಶ್ ಬ್ಲ್ಯಾಕ್, ಆರ್ಕ್ಟಿಕ್ ವೈಟ್ ಮತ್ತು ಮಿಸ್ಟಿಕ್ ಗ್ರೀನ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ನೂತನ ವಿಕ್ಟೋರಿಸ್ 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು 373 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,600 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 45 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದೆ.
ಈ ಕಾರಿನ ಕ್ಯಾಬಿನ್ ವಿನ್ಯಾಸವು ತುಂಬಾ ಚೆನ್ನಾಗಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸನ್‌ರೂಫ್, 64 ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.


Click it and Unblock the Notifications








