5-ಸೀಟರ್.. ವಿಶ್ವವೇ ತಿರುಗಿ ನೋಡುವಂತಹ SUV ಭಾರತದಲ್ಲಿ ಬಿಡುಗಡೆ, ಬೆಲೆ ಎಷ್ಟು, ವಿಶೇಷತೆಗಳೇನು?
ಜರ್ಮನಿ ಮೂಲದ ಮರ್ಸಿಡಿಸ್ ಬೆಂಜ್ (Mercedes Benz) ಐಷಾರಾಮಿ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿಯೂ ಹಲವು ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ವಿಶೇಷವಾಗಿ ಶ್ರೀಮಂತ ಗ್ರಾಹಕರು ಜನಪ್ರಿಯ ಜಿ-ಕ್ಲಾಸ್ (G-Class) ಎಸ್‌ಯುವಿಯನ್ನು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಇದು ಪೆಟ್ರೋಲ್ & ಎಲೆಕ್ಟ್ರಿಕ್ ರೂಪದಲ್ಲಿ ಸಿಗುತ್ತದೆ. ಸದ್ಯ, ಈ ಕಾರಿನ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಲಾಗಿದ್ದು, ಹೊಚ್ಚ ಹೊಸ ಡೀಸೆಲ್ ಚಾಲಿತ '450ಡಿ' ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಬನ್ನಿ, ನೂತನ ಎಸ್‌ಯುವಿಯ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
ನೂತನ ಮರ್ಸಿಡಿಸ್ ಬೆಂಜ್ ಜಿ 450 (Mercedes-Benz G 450d) ದುಬಾರಿ ಬೆಲೆಯನ್ನು ಹೊಂದಿದೆ. ರೂ.2.90 ಕೋಟಿ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿದೆ. ದೇಶೀಯವಾಗಿ ಈ ಕಾರನ್ನು ಉತ್ಪಾದನೆ ಮಾಡಲಾಗುವುದಿಲ್ಲ. ಜರ್ಮನಿಯಿಂದ ಮೊದಲ ಬ್ಯಾಚ್‌ನಲ್ಲಿ 50 ಯುನಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಇದು ತುಂಬಾ ಅಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಮರುವಿನ್ಯಾಸಗೊಳಿಸಲಾದ ಬಂಪರ್‌ಗಳನ್ನು ಪಡೆದಿದೆ. ಮಲ್ಟಿಬೀಮ್ ಎಲ್ಇಡಿ ಇಂಟೆಲಿಜೆಂಟ್ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು ಹಾಗೂ 20 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ.
ಈ ಕಾರು ಹೆಚ್ಚು ವಿಶಾಲ ಗಾತ್ರದಲ್ಲಿದೆ. 4,817 ಮಿ.ಮೀ ಉದ್ದ, 1,931 ಮಿ.ಮೀ ಅಗಲ ಹಾಗೂ 1,969 ಮಿ.ಮೀ ಎತ್ತರವಿದೆ. 241 ಗ್ರೌಂಡ್ ಕ್ಲಿಯರೆನ್ಸ್ ಮತ್ತು 2890 ಮಿಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಪೋಲಾರ್ ವೈಟ್, ಮ್ಯಾಗ್ನೆಟೈಟ್ ಬ್ಲ್ಯಾಕ್ ಮೆಟಾಲಿಕ್, ಅಬ್ಸಿಡಿಯನ್ ಬ್ಲ್ಯಾಕ್ ಮೆಟಾಲಿಕ್, ರುಬೆಲೈಟ್ ರೆಡ್ ಮೆಟಾಲಿಕ್, ಮೊಜಾವೆ ಸಿಲ್ವರ್ ಮೆಟಾಲಿಕ್, ಬ್ರಿಲಿಯಂಟ್ ಬ್ಲೂ ಮೆಟಾಲಿಕ್, ಎಮರಾಲ್ಡ್ ಗ್ರೀನ್, ಸೆಲೆನೈಟ್ ಗ್ರೇ, ಸೋಡಾಲೈಟ್ ಬ್ಲೂ & ಮ್ಯಾಗ್ನೆಟೈಟ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ಮರ್ಸಿಡಿಸ್ ಬೆಂಜ್ ಜಿ 450ಡಿ ಎಸ್‌ಯುವಿ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 3.0-ಲೀಟರ್ ಇನ್‌ಲೈನ್ 6-ಸಿಲಿಂಡರ್, 48-ವೋಲ್ಟ್ ಮೈಲ್ಡ್-ಹೈಬ್ರಿಡ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 362 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 750 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ. 9-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ.
ಇದು ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗದೆ. 9 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 100 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ಟೆಕ್ನಾಲಜಿ ಪಡೆದಿದೆ. 210 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 5.8 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಈ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 480 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ನೂತನ 'ಮರ್ಸಿಡಿಸ್ ಬೆಂಜ್ ಜಿ 450ಡಿ' ಕಾರಿನ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ & ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಡುಯಲ್ 12.3 ಇಂಚಿನ ಡಿಸ್‌ಪ್ಲೇಗಳು, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪ್ರೀಮಿಯಂ 18-ಸ್ಪೀಕರ್ ಬರ್ಮೆಸ್ಟರ್ 3ಡಿ ಸೌಂಡ್ ಸಿಸ್ಟಮ್ ಹಾಗೂ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇದು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ - ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ಜೀಪ್ ರಾಂಗ್ಲರ್ & ಲ್ಯಾಂಡ್ ರೋವರ್ ಡಿಫೆಂಡರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








