25 ಕಿ.ಮೀಗಿಂತ ಅಧಿಕ ಮೈಲೇಜ್... ಭಾರತದ ಅತ್ಯಂತ ಅಗ್ಗದ ಸಿಎನ್‌ಜಿ ಎಸ್‌ಯುವಿಗಳ ಪಟ್ಟಿ!
ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಭಾರತದಲ್ಲಿ ಸಿಎನ್‌ಜಿ ಕಾರುಗಳ ಬೇಡಿಕೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಕಾರ್ಖಾನೆಯಲ್ಲಿ ಅಳವಡಿಸಿದ ಕಿಟ್ ಹೊಂದಿರುವ ಅತ್ಯಂತ ಕೈಗೆಟುಕುವ ಸಿಎನ್‌ಜಿ ಎಸ್‌ಯುವಿಗಳ ಆಗಮನ ಹೆಚ್ಚಾಗಿದೆ. ಖರೀದಿದಾರರ ಬೇಡಿಕೆಗೆ ತಕ್ಕಂತೆ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ ಮತ್ತು ಟೊಯೊಟಾದಂತಹ ಪ್ರಮುಖ ಕಾರು ತಯಾರಕರು ತಮ್ಮ ಸಿಎನ್‌ಜಿ ಕಾರುಗಳನ್ನು ಹೆಚ್ಚಿಸಿದ್ದಾರೆ. ಇದು ಗ್ರಾಹಕರಿಂದಲೂ ಹೆಚ್ಚಿನ ಪ್ರತಿಕ್ರಿಯೆಗೆ ಕಾರಣವಾಗದ್ದು, ವೈಶಿಷ್ಟ್ಯ-ಸಮೃದ್ಧ ಸಿಎನ್‌ಜಿ ಎಸ್‌ಯುವಿಗಳನ್ನು ಹೆಚ್ಚು ಖರೀದಿಸುವಂತೆ ಮಾಡಿದೆ. ಭಾರತದಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ ಸಿಎನ್‌ಜಿ ಎಸ್‌ಯುವಿಗಳ ಪಟ್ಟಿ ಇಲ್ಲಿದೆ.
ಟಾಟಾ ಪಂಚ್: ಟಾಟಾ ಪಂಚ್ ಭಾರತದ ಅತ್ಯಂತ ಕೈಗೆಟುಕುವ ಸಿಎನ್‌ಜಿ ಎಸ್‌ಯುವಿಯಾಗಿದೆ. ಇದರ ಬೆಲೆಯು 7.3 ಲಕ್ಷದಿಂದ 10.17 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಟಾಟಾದ ಟ್ವಿನ್ ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿರುವ ಈ ಕಾರು, 60-ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಹೊಂದಿದೆ. ಟಾಪ್ ವೇರಿಯೆಂಟ್‌ಗಳು ಸನ್‌ರೂಫ್ ಮತ್ತು ನಾನ್ ಸನ್‌ರೂಫ್ ಆಯ್ಕೆಗಳನ್ನು ಹೊಂದಿವೆ.

ಟಾಟಾ ಪಂಚ್ ಎಸ್‌ಯುವಿಯ 1.2-ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಂಟಿ) ನೊಂದಿಗೆ ಜೋಡಿಸಲಾಗಿದೆ. ಇದನ್ನು ಇತ್ತೀಚೆಗೆ ಬಹಿರಂಗಪಡಿಸಿದ ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್ ನಲ್ಲಿಯೂ ಬಳಸಲಾಗಿದೆ. ಇದರ ಮೈಲೇಜ್ ಪ್ರತಿ ಕೆಜಿಗೆ 26.99 ಕಿ.ಮೀ (ಎಆರ್ಎಐ), ಮತ್ತು ಇದರ ಮತ್ತೊಂದು ವಿಶೇಷತೆಯೆಂದರೆ ನೇರವಾಗಿ ಸಿಎನ್‌ಜಿ ಮೋಡ್‌ನಲ್ಲಿ ಪ್ರಾರಂಭಿಸಬಹುದು.
ಹ್ಯುಂಡೈ ಎಕ್ಸ್‌ಟರ್: ಪ್ರಸ್ತುತ ಹ್ಯುಂಡೈನ ಅತ್ಯಂತ ಚಿಕ್ಕ ಎಸ್‌ಯುವಿಯಾದ ಎಕ್ಸ್‌ಟರ್, ಸಿಂಗಲ್ ಮತ್ತು ಡ್ಯುಯಲ್ ಸಿಲಿಂಡರ್ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಸಿಂಗಲ್ ಮತ್ತು ಡ್ಯುಯಲ್ ಸಿಲಿಂಡರ್ ಆಯ್ಕೆಗಳ ಸಾಮರ್ಥ್ಯವು 60 ಲೀಟರ್ ಆಗಿದೆ. ಇದರ ಬೆಲೆಯು 7.51 ಲಕ್ಷದಿಂದ 9.53 ಲಕ್ಷ ರೂ. (ಎಕ್ಸ್ ಶೋರೂಂ) ಇದೆ.

ಹ್ಯುಂಡೈ ಕಂಪನಿಯು ಫ್ಯಾಕ್ಟರಿ ಅಳವಡಿಸಿದ ಸಿಎನ್‌ಜಿ ಕಿಟ್ ನೊಂದಿಗೆ, ಎಕ್ಸ್‌ಟರ್ ಎಸ್‌ಯುವಿ 1.2 - ಲೀಟರ್ 4 - ಸಿಲಿಂಡರ್ ಎಂಜಿನ್ ಹೊಂದಿದ್ದು, 69 ಬಿಹೆಚ್ ಪವರ್ ಮತ್ತು 95.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಎಂಟಿ ಗೇರ್ ಬಾಕ್ಸ್ ಹೊಂದಿದೆ. ಇದು ಪ್ರತಿ ಕೆ.ಜಿ.ಗೆ ಬರೋಬ್ಬರಿ 27.1 ಕಿ.ಮೀ ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಫ್ರಾಂಕ್ಸ್: ಮಾರುತಿ ಫ್ರಾಂಕ್ಸ್ ಸಬ್ -4 ಮೀಟರ್ ಎಸ್‌ಯುವಿ ಫ್ರಾಂಕ್ಸ್ ಬೆಲೆಯು 8.49 ಲಕ್ಷದಿಂದ 9.35 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಇದು ವೈಶಿಷ್ಟ್ಯಗಳ ವಿಷಯದಲ್ಲೂ ವಿಸ್ತೃತ ಪಟ್ಟಿಯೊಂದಿಗೆ ಬರುತ್ತದೆ. ಬೇಸ್ ಸಿಗ್ಮಾ ಮತ್ತು ಟಾಪ್ ವೇರಿಯೆಂಟ್ ಡೆಲ್ಟಾದಲ್ಲಿ ಸಿಎನ್‌ಜಿ ಕಿಟ್ ಅನ್ನು ನೀಡಲಾಗುತ್ತದೆ. ಫ್ರಾಂಕ್ಸ್ ಸಿಎನ್‌ಜಿ 1.2-ಲೀಟರ್ ಎಂಜಿನ್ ಹೊಂದಿದ್ದು, 28.51 ಕಿ.ಮೀ / ಕೆ.ಜಿ ಮೈಲೇಜ್ ನೀಡುತ್ತದೆ.

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್: ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಎಸ್‌ಯುವಿಯನ್ನು ರೇಂಜ್-ಸ್ಟಾರ್ಟಿಂಗ್ ಇ ರೂಪಾಂತರದಲ್ಲಿ ಮಾತ್ರ ಸಿಎನ್‌ಜಿ ಕಿಟ್‌ನೊಂದಿಗೆ ಬರುತ್ತದೆ. ಇದರ ಆರಂಭಿಕ ಬೆಲೆಯು 8.72 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಟೊಯೊಟಾ ಎಸ್‌ಯುವಿಯ ಸಿಎನ್‌ಜಿ ಕಾರು, ಮಾರುತಿ ಫ್ರಾಂಕ್ಸ್ ಸಿಎನ್‌ಜಿಗೆ ಹೋಲಿಸಿದರೆ 23,000 ರೂ.ಗಳಷ್ಟು ದುಬಾರಿಯಾಗಿದೆ.
ಟೊಯೋಟಾ ಟೈಸರ್ ಸಿಎನ್‌ಜಿ 1.2-ಲೀಟರ್ 4-ಸಿಲಿಂಡರ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. ಈ ಎಂಜಿನ್ 77.5 ಬಿಹೆಚ್ ಪವರ್, 98.5 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಇದು 28.51 ಕಿ.ಮೀ / ಕೆ.ಜಿ ಮೈಲೇಜ್ ಕೊಡುತ್ತದೆ. ಇದು 55 - ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಹೊಂದಿದೆ.
ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ ಸಿಎನ್‌ಜಿ ಕಾರು ರೂ. 9 ಲಕ್ಷದಿಂದ ರೂ. 13.70 ಲಕ್ಷ (ಎಕ್ಸ್ ಶೋರೂಂ) ಬೆಲೆಯಿದೆ. ಇದು ಉದ್ಯಮದ ಮೊದಲ ಟರ್ಬೋಚಾರ್ಜ್ಡ್ ಸಿಎನ್‌ಜಿ ಎಸ್‌ಯುವಿಯಾಗಿದೆ. ಟಾಟಾ ಮೋಟಾರ್ಸ್‌ನ ಟ್ವಿನ್ ಸಿಲಿಂಡರ್ ತಂತ್ರಜ್ಞಾನ ಹೊಂದಿದೆ. ಈ ಪಟ್ಟಿಯಲ್ಲಿ ಬೇರೆ ಯಾವುದೇ ಸಿಎನ್‌ಜಿ ಕಾರು ನೀಡದ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.
ಇದರ 1.2-ಲೀಟರ್ 3-ಸಿಲಿಂಡರ್ ಟರ್ಬೊ ಎಂಜಿನ್ 6ಎಂಟಿಯೊಂದಿಗೆ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಈ ಎಂಜಿನ್ 100 ಬಿಹೆಚ್ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 24 ಕಿ.ಮೀ / ಕೆ.ಜಿ ಮೈಲೇಜ್ ನೀಡುತ್ತದೆ. ಈ ಟಾಟಾ ಎಸ್‌ಯುವಿಯನ್ನು ನೇರವಾಗಿ ಸಿಎನ್‌ಜಿ ಮೋಡ್ ನಲ್ಲಿ ಪ್ರಾರಂಭಿಸಬಹುದು, ಸ್ಟಾರ್ಟ್ ಅಪ್ ನಲ್ಲಿ ಇಂಧನವನ್ನು ಉಳಿಸಬಹುದು.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ: ಡೆಲ್ಟಾ ಮತ್ತು ಝೀಟಾ ಸೇರಿದಂತೆ ಮಾರುತಿ ಗ್ರ್ಯಾಂಡ್ ವಿಟಾರಾದ ಮಿಡ್-ಸ್ಪೆಕ್ ಟ್ರಿಮ್ ಗಳು ಸಿಎನ್‌ಜಿ ಆಯ್ಕೆಯೊಂದಿಗೆ ಬರುತ್ತವೆ. ಕೆ.ಜಿಗೆ 26.6 ಕಿ.ಮೀ ಮೈಲೇಜ್ ನೀಡುತ್ತದೆ. ಮಾರುತಿ ಎಸ್‌ಯುವಿ 55-ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಹೊಂದಿದೆ.
ಗ್ರ್ಯಾಂಡ್ ವಿಟಾರಾ ಸಿಎನ್‌ಜಿ 1.5-ಲೀಟರ್ 4-ಸಿಲಿಂಡರ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಂಟಿ) ಗೆ ಜೋಡಿಸಲಾಗಿದೆ. ಇದು 88 ಬಿಹೆಚ್ ಪಿ ಮತ್ತು 121.5 ಎನ್ಎಂ ಅನ್ನು ಉತ್ಪಾದಿಸುತ್ತದೆ. ಮಾರುತಿ ಸದ್ಯಕ್ಕೆ ಗ್ರ್ಯಾಂಡ್ ವಿಟಾರಾ ಸಿಎನ್ ಜಿಗಾಗಿ ಬುಕಿಂಗ್ ಸ್ವೀಕರಿಸುತ್ತಿಲ್ಲ. ಇದರ ಅಪ್‌ಡೇಟೆಡ್ ಮಾದರಿ ಜೂನ್ ಅಂತ್ಯದ ವೇಳೆಗೆ ಬರುವ ನಿರೀಕ್ಷೆಯಿದೆ.
ಮಾರುತಿ ಸುಜುಕಿ ಬ್ರೆಝಾ: ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಕಾರಿನ ಬೆಲೆಯು ರೂ 9.64 ಲಕ್ಷದಿಂದ ರೂ. 12.21 ಲಕ್ಷ (ಎಕ್ಸ್ ಶೋರೂಂ) ಇದೆ. ಮಾರುತಿ ಬ್ರೆಝಾ ಸಿಎನ್‌ಜಿಯನ್ನು 55-ಲೀಟರ್ ಟ್ಯಾಂಕ್ ನೊಂದಿಗೆ ಅಳವಡಿಸಲಾಗಿದೆ. ಇದು ಕೆ.ಜಿಗೆ 25.51 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಟಾಪ್-ಸ್ಪೆಕ್ ಝಡ್ಎಕ್ಸ್ಐ + ಟ್ರಿಮ್ ಹೊರತುಪಡಿಸಿ, ಇತರ ಮಾರುತಿ ಬ್ರೆಝಾ ರೂಪಾಂತರಗಳಾದ ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಝಡ್ಎಕ್ಸ್ಐ ಅನ್ನು ಸಿಎನ್‌ಜಿ ಕಿಟ್‌ನೊಂದಿಗೆ ಪಡೆಯಬಹುದು. ಈ ಕಾರು 1.5-ಲೀಟರ್ 4-ಸಿಲಿಂಡರ್ ಎಂಜಿನ್ ಹೊಂದಿದ್ದು, 88 ಬಿಹೆಚ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ 5-ಸ್ಪೀಡ್ ಎಂಟಿಯೊಂದಿಗೆ ಬರುತ್ತದೆ.
ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್: ಮಾರುತಿ ಗ್ರ್ಯಾಂಡ್ ವಿಟಾರಾದ ರೀಬ್ಯಾಡ್ಜ್ ಆವೃತ್ತಿಯಾದ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್‌ಜಿ ಬೆಲೆಯು 13.81 ಲಕ್ಷದಿಂದ 15.84 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ವಿಶೇಷವೆಂದರೆ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಕಾರ್ಖಾನೆಯಲ್ಲಿ ಅಳವಡಿಸಿದ ಸಿಎನ್‌ಜಿ ಕಿಟ್ ನೊಂದಿಗೆ ಬರುವ ಮಧ್ಯಮ ಗಾತ್ರದ ಎಸ್‌ಯುವಿಗಳಾಗಿವೆ.
ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮಿಡ್-ಸ್ಪೆಕ್ ಇ ಮತ್ತು ಜಿ ವೇರಿಯೆಂಟ್‌ಗಳಲ್ಲಿ ಸಿಎನ್‌ಜಿ ಆಯ್ಕೆಗಳನ್ನು ನೀಡುತ್ತದೆ. ಹೈರೈಡರ್ ಸಿಎನ್‌ಜಿ 1.5-ಲೀಟರ್ ಎಂಜಿನ್ ಹೊಂದಿದ್ದು, 88 ಬಿಹೆಚ್ ಪವರ್ ಹೊರಹಾಕುತ್ತದೆ. ಇದು ಪ್ರತಿ ಕೆ.ಜಿಗೆ 26.6 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.


Click it and Unblock the Notifications