Kia Seltos: ಲಕ್ಷುರಿ ಫೀಚರ್ಸ್.. 5-ಸೀಟರ್! 2026ರ ಹೊಸ ಕಿಯಾ ಸೆಲ್ಟೋಸ್ ಕಾರು ಪರಿಚಯ, ಬೆಲೆ ಅಗ್ಗವೇ.. ವಿಶೇಷತೆಗಳೇನು?
ಹೈದರಾಬಾದ್‌ನಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ (Kia Seltos) ಕಾರನ್ನು ಅನಾವರಣಗೊಳಿಸಲಾಗಿದೆ. ಇದೊಂದು ಎಸ್‌ಯುವಿಯಾಗಿದೆ. ನೋಡಲು ತುಂಬಾ ಚೆನ್ನಾಗಿದ್ದು, ಹಲವು ನವೀನ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗದೆ. ಕೈಗೆಟುಕುವ ದರದಲ್ಲೂ ಗ್ರಾಹಕರ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ನಾಳೆಯಿಂದ (ಡಿ.11) ಇದೇ 'ಕಿಯಾ ಸೆಲ್ಟೋಸ್' ಎಸ್‌ಯುವಿಗಾಗಿ ಬುಕ್ಕಿಂಗ್‌ನ್ನು ತೆಗೆದುಕೊಳ್ಳುವ ಕಾರ್ಯಕ್ಕೆ ಕಂಪನಿಯು ಚಾಲನೆ ನೀಡಲಿದೆ. ಆಸಕ್ತ ಗ್ರಾಹಕರು ರೂ.25,000 ಮುಂಗಡ ಹಣವನ್ನು ಪಾವತಿಸಿ, ಆರ್ಡರ್ ಮಾಡಬಹುದು. ಜನವರಿ 2ರಂದು ಅಧಿಕೃತವಾಗಿ ಬೆಲೆಯನ್ನು ಘೋಷಣೆ ಮಾಡಲಾಗುತ್ತದೆ. ಈ ಕಾರು, ರೂ.10.99 ಲಕ್ಷದಿಂದ ರೂ.20.60 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ನೂತನ 'ಕಿಯಾ ಸೆಲ್ಟೋಸ್' ಕಾರು ಹೆಚ್‌ಟಿಇ, ಹೆಚ್‌ಟಿಇ (ಒ), ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ (ಎ), ಜಿಟಿಎಕ್ಸ್, ಜಿಟಿಎಕ್ಸ್ (ಎ) ಹಾಗೂ ಎಕ್ಸ್-ಲೈನ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. 5 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು 447 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ಹೊಚ್ಚ ಹೊಸ 'ಸೆಲ್ಟೋಸ್' ಎಸ್‌ಯುವಿಯು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ವಿನೂತನವಾಗಿರುವ ಬಂಪರ್, ಟೈಗರ್ ನೋಸ್ ಗ್ರಿಲ್, ಎಲ್ಇಡಿ ಪ್ರೊಜೆಕ್ಷನ್ ಹೆಡ್‌ಲ್ಯಾಂಪ್‌ಗಳು, ಸ್ಟಾರ್ ಮ್ಯಾಪ್ ಎಲ್ಇಡಿ ಡಿಆರ್‌ಎಲ್‌ಗಳು, ಕನೆಕ್ಟ್ಡ್ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಫ್ರಂಟ್ - ರೇರ್ ಸ್ಕಿಡ್ ಪ್ಲೇಟ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು, 16-ಇಂಚಿನ ಸ್ಟೀಲ್ ವೀಲ್‌ಗಳು, 17/18-ಇಂಚಿನ ಕ್ರಿಸ್ಟಲ್-ಕಟ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಈ ಕಾರು ಹೆಚ್ಚು ವಿಶಾಲ ಗಾತ್ರದಲ್ಲಿದೆ. 4,460 ಮಿ.ಮೀ ಉದ್ದ, 1,830 ಮಿ.ಮೀ ಅಗಲ ಮತ್ತು 1,635 ಮಿ.ಮೀ ಎತ್ತರವಿದೆ. ಹಾಗೆಯೇ 2,690 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಜೊತೆಗೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.
ಇದು ಬಲಿಷ್ಠವಾದ 3 ಪವರ್‌ಟ್ರೇನ್‌ನ್ನು ಪಡೆದಿದೆ. ಇದರ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 115 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 144 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಮತ್ತೊಂದು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್,160 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 253 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ.
ಇನ್ನೊಂದು 1.5-ಲೀಟರ್ ಡೀಸೆಲ್ ಎಂಜಿನ್, 116 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 250 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ.
ನೂತನ 'ಕಿಯಾ ಸೆಲ್ಟೋಸ್' ಎಸ್‌ಯುವಿಯ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ - ಡ್ರೈವರ್ಸ್ ಡಿಸ್‌ಪ್ಲೇಗಾಗಿ 12.3-ಇಂಚಿನ ಡುಯಲ್ ಸ್ಕ್ರೀನ್ ಸೆಟಪ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಡುಯಲ್-ಪೇನ್ ಪನೋರಮಿಕ್ ಸನ್‌ರೂಫ್, 64-ಕಲರ್ ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಡುಯಲ್-ಜೋನ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಟ್ರಾಕ್ಷನ್ ಮೋಡ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಫ್ರಂಟ್ - ರೇರ್ ಪಾರ್ಕಿಂಗ್ ಸೆನ್ಸಾರ್‌ಗಳು, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.


Click it and Unblock the Notifications








