473 ಕಿ.ಮೀ ರೇಂಜ್.. 5-ಸೀಟರ್, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್ ಶುರು.. ಬೆಲೆ ಇಷ್ಟೇನಾ?
ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India), ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿದೆ. ಗುರುವಾರ ಬಹುನಿರೀಕ್ಷಿತ 'ಕ್ರೆಟಾ' ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿತ್ತು. ಈ ಕಾರು ಆಕರ್ಷಕ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ನೂತನ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಇದೇ 17ರಿಂದ ಏರ್ಪಡಿರುವ 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025'ದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ. ಸದ್ಯ, ಹೊಚ್ಚ ಹೊಸ 'ಹ್ಯುಂಡೈ ಕ್ರೆಟಾ ಇವಿ' ಬಗ್ಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳಲ್ಲಿ ನೂತನ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‌ಯುವಿ (Hyundai Creta Electric suv) ಬುಕ್ಕಿಂಗ್ ಶುರುವಾಗಿದೆ ಎಂದು ತಿಳಿದುಬಂದಿದೆ. ಆಸಕ್ತ ಗ್ರಾಹಕರು ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ಶೋರೂಂಗೆ ಭೇಟಿ ನೀಡಿ, ರೂ.25,000 ಮುಂಗಡವಾಗಿ ಪಾವತಿಸುವುದರೊಂದಿಗೆ ಈ ಕಾರನ್ನು ಆರ್ಡರ್ ಮಾಡಬಹುದು. ಹೊಸ ಹ್ಯುಂಡೈ ಕ್ರೆಟಾ ಇವಿ ರೂ.17 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.

ಈ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಎಕ್ಸಿಕ್ಯೂಟಿವ್, ಸ್ಮಾರ್ಟ್, ಪ್ರೀಮಿಯಂ ಹಾಗೂ ಎಕ್ಸಲೆನ್ಸ್ ಎಂಬ 4 ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಜೊತೆಗೆ ಅಟ್ಲಾಸ್ ವೈಟ್, ಸ್ಟಾರಿ ನೈಟ್, ಓಷನ್ ಬ್ಲೂ ಮ್ಯಾಟ್, ಟೈಟಾನ್ ಗ್ರೇ ಮ್ಯಾಟ್ ಮತ್ತು ಅಬಿಸ್ ಬ್ಲ್ಯಾಕ್ ಪರ್ಲ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ನೂತನ ಕ್ರೆಟಾ ಇವಿ ಹೊರಭಾಗದಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಅದು ಇಂಧನ ಚಾಲಿತ 'ಕ್ರೆಟಾ'ಗೂ ಹೋಲಿಕೆಯಾಗುತ್ತದೆ. ಮುಂಭಾಗ (ಫ್ರಂಟ್) ಸೆಂಟರ್ ಮೌಂಟೆಡ್ ಚಾರ್ಜಿಂಗ್ ಪೋರ್ಟ್, ನವೀನವಾದ ಬಂಪರ್, ಟೈಲ್ ಲೈಟ್‌ಗಳು ಮತ್ತು ಹೊಸದಾಗಿರುವ 17-ಇಂಚಿನ ಅಲಾಯ್ ವೀಲ್‌ಗಳು ಒಳಗೊಂಡಿದೆ. ಇದರಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.

ಹೊಸ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‌ಯುವಿ ಶಕ್ತಿಯುತವಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಇದರ 42 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿಯು ಸಂಪೂರ್ಣ ಚಾರ್ಜ್‌ನಲ್ಲಿ 390 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಮತ್ತೊಂದು 51.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಭರ್ತಿ ಚಾರ್ಜ್‌ನಲ್ಲಿ 473 ಕಿಲೋಮೀಟರ್ ಓಡುತ್ತದೆ.
ಈ ಕಾರಿನ ಬ್ಯಾಟರಿ ಪ್ಯಾಕ್, ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಕೇವಲ 58 ನಿಮಿಷಗಳಲ್ಲಿ ಶೇಕಡ 10 ರಿಂದ 80% ಚಾರ್ಜ್ ಆಗುತ್ತದೆ. ಮತ್ತೊಂದು ಎಸಿ ಹೋಮ್ ಚಾರ್ಜರ್ ಆಯ್ಕೆಯಲ್ಲಿ ಇದರ ಬ್ಯಾಟರಿ ಪ್ಯಾಕ್, 4 ಗಂಟೆಯಲ್ಲಿ 10 ರಿಂದ 100% ಚಾರ್ಜ್ ಆಗಿ ಬಿಡುತ್ತದೆ.

ನೂತನ ಹುಂಡೈ ಕ್ರೆಟಾ ಇವಿ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡುಯಲ್ ಸ್ಕ್ರೀನ್, ನವೀನವಾಗಿರುವ ಸ್ಟೀರಿಂಗ್ ವೀಲ್, ಪನೋರಮಿಕ್ ಸನ್‌ರೂಫ್, ವೆಹಿಕಲ್-ಟು-ಲೋಡ್ (ವಿ2ಎಲ್) ಟೆಕ್ನಾಲಜಿ, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ ಡಿಜಿಟಲ್ ಕೀಯನ್ನು ಒಳಗೊಂಡಿದೆ.
ಇನ್ನು, ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿಗೆ ಟಾಟಾ ಕರ್ವ್ ಇವಿ, ಎಂಜಿ ಝಡ್ಎಸ್ ಇವಿ ಹಾಗೂ ಮಾರುತಿ ಸುಜುಕಿ ಇ ವಿಟಾರಾ ಮಾಡೆಲ್‌ಗಳು ನೇರವಾದ ಎದುರಾಳಿಯಾಗಲಿವೆ. ನೂತನ ಕ್ರೆಟಾ ಇವಿ ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡು ಮಾರಾಟಕ್ಕೆ ಬರುವುದು ಬಹುತೇಕ ದೃಢಪಟ್ಟಿದೆ. ಈ ಕಾರು ಬಿಡುಗಡೆಯಾದ ಮೇಲೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








