7-ಸೀಟರ್! ಬಿಡುಗಡೆಗೂ ಮೊದಲೇ ಡಿ.15 ರಿಂದ ಹೊಸ ಮಹೀಂದ್ರಾ XUV 7XOಗೆ ಪ್ರಿ-ಬುಕ್ಕಿಂಗ್ ಶುರು.. ಬೆಲೆ ಎಷ್ಟಿರಲಿದೆ?
ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಪ್ರಮುಖ ಎಸ್‍ಯುವಿಯಾಗಿ ಹೊರಹೊಮ್ಮಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಈ ಕಾರಿನ ಫೇಸ್‌ಲಿಫ್ಟ್ ಮಾಡೆಲ್‌ನ್ನು 'ಎಕ್ಸ್‌ಯುವಿ 7ಎಕ್ಸ್ಒ' ಹೆಸರಿನಲ್ಲಿ ಪರಿಚಸಲು ಕಂಪನಿಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನೂತನ ಎಸ್‍ಯುವಿಯನ್ನು ಜನವರಿ 5 ರಂದು ಅದ್ದೂರಿಯಾಗಿಯೂ ಮಾರಾಟಕ್ಕೆ ತರಲಿದೆ.
ಸದ್ಯ ಇದೇ 'ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ'ಗಾಗಿ ಬಿಡುಗಡೆಗೂ ಮೊದಲೇ, ಪ್ರಿ-ಬುಕ್ಕಿಂಗ್ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಡಿಸೆಂಬರ್ 15 ರಂದು ಮಧ್ಯಾಹ್ನ 12 ಗಂಟೆಯಿಂದ ಆರ್ಡರ್ ತೆಗೆದುಕೊಳ್ಳುವ ಕಾರ್ಯಕ್ಕೆ ಕಂಪನಿಯು ಚಾಲನೆ ನೀಡಲಿದೆ. ಆಸಕ್ತರು, ಯಾವುದೇ ಅಧಿಕೃತ ಮಹೀಂದ್ರಾ ಡೀಲರ್‌ಶಿಪ್ ಅಥವಾ ವೆಬ್‌ಸೈಟ್‌ನಲ್ಲಿ ರೂ.21,000 ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಬಹುದು.

ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ (Mahindra XUV 7XO) ವಿಶೇಷತೆಗಳೇನು:
ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ಕನಿಷ್ಠ ರೂ.14 ಲಕ್ಷ ಹಾಗೂ ಗರಿಷ್ಠ ರೂ.26 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರುವ ಎಂದು ಅಂದಾಜಿಸಲಾಗಿದೆ. ಮೇಲ್ಮಧ್ಯಮ ಹಾಗೂ ಶ್ರೀಮಂತ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ.
ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿರಲಿದೆ. ಇತ್ತೀಚೆಗೆ ಬಿಡುಗಡೆಯಾದ 'ಮಹೀಂದ್ರಾ ಎಕ್ಸ್ಇವಿ 9ಎಸ್' ಎಲೆಕ್ಟ್ರಿಕ್ ಎಸ್‍ಯುವಿಗೂ ಹೆಚ್ಚು-ಕಮ್ಮಿ ಹೋಲಿಕೆಯಾಗಬಹುದು ಎನ್ನಲಾಗಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.

ನೂತನ 'ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ' ಹೆಚ್ಚು ವಿಶಾಲ ಗಾತ್ರದಲ್ಲಿರುವ ಸಂಭವವಿದೆ. 4,737 ಎಂಎಂ ಉದ್ದ, 1,900 ಎಂಎಂ ಅಗಲ ಮತ್ತು 1,747 ಎಂಎಂ ಎತ್ತರವಿರಲಿದೆ. 201 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,762 ಮಿ.ಮೀ ಒಳಗೊಂಡಿರುವ ನಿರೀಕ್ಷೆಯಿದೆ. ಜೊತೆಗೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಾಗಬಹುದು.
ಇದರ ಪವರ್‌ಟ್ರೇನ್‌ನಲ್ಲಿ ಪ್ರಮುಖವಾದ ಬದಲಾವಣೆಗಳಿರುವುದಿಲ್ಲ ಎನ್ನಲಾಗಿದೆ. ಈಗಿರುವ 'ಎಕ್ಸ್‌ಯುವಿ700'ನಂತೆ ಹೆಚ್ಚು ಬಲಿಷ್ಠವಾದ 2-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2-ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿರಲಿದೆ. ಹಾಗೆಯೇ 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿರುವ ಸಾಧ್ಯತೆಯಿದೆ. 17 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜು ಮಾಡಲಾಗಿದೆ.
ಈ ಕಾರು, 6/ 7 ಆಸನಗಳನ್ನು ಹೊಂದಿರಲಿದ್ದು, ಪ್ರಯಾಣಿಕರು ದೂರದ ಊರುಗಳಿಗೆ ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದು. ಟ್ರಿಪಲ್ ಸ್ಕ್ರೀನ್ ಸೆಟಪ್, ಮಲ್ಟಿ-ಝೋನ್ ಆಟೋ ಎಸಿ, ಸನ್‌ರೂಫ್, 16 ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಚಾರ್ಜರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ಹೇಳಲಾಗಿದೆ.
ಹೊಸ 'ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ' ಸುರಕ್ಷತೆಗೂ ಹೆಸರುವಾಸಿಯಾಗಿರಲಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಅದಕ್ಕಾಗಿ 7-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟ್ರಾಕ್ಷನ್ ಕಂಟ್ರೋಲ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಈಚೆಗೆ ಮಾರಾಟಕ್ಕೆ ಬಂದ 'ಮಹೀಂದ್ರಾ ಎಕ್ಸ್ಇವಿ 9ಎಸ್' ಹೇಗಿದೆ:
ಈ ಎಲೆಕ್ಟ್ರಿಕ್ ಎಸ್‍ಯುವಿಯು ರೂ.19.95 ರಿಂದ ರೂ.29.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 59 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 70 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 79 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 542 ರಿಂದ 656 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡಲಿದೆ. 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ.


Click it and Unblock the Notifications








