ಹೊಸ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಬಿಡುಗಡೆಗೆ ಸಜ್ಜು: ಏನೆಲ್ಲಾ ನಿರೀಕ್ಷೆಗಳಿವೆ?
ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ (Maruti Suzuki Brezza Facelift) ಕಾರನ್ನು ಹೊಸ ಅಪ್‌ಡೇಟ್‌ಗಳೊಂದಿಗೆ 2026 ರ ಆರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. 2026 ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಕಾರು ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ವಿಕ್ಟೋರಿಸ್‌ನಂತೆಯೇ ಅಂಡರ್‌ಬಾಡಿ ಸಿಎನ್‌ಜಿ ಟ್ಯಾಂಕ್ ಜೊತೆಗೆ ಹಲವಾರು ವಿನ್ಯಾಸ ಬದಲಾವಣೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಮುಂಬರುವ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್‌ನ ನಿರೀಕ್ಷಿತ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಎಂಜಿನ್ ವಿಶೇಷಣಗಳನ್ನು ನೋಡೋಣ ಬನ್ನಿ.
ಈ ಫೇಸ್‌ಲಿಫ್ಟ್ ಸಣ್ಣ ಸ್ಟೈಲಿಂಗ್ ಬದಲಾವಣೆಗಳು, ಇಂಟೀರಿಯರ್ ಸುಧಾರಣೆಗಳು ಮತ್ತು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿಡಲು ಬಹುಶಃ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ತರುವ ಸಾಧ್ಯತೆಯಿದೆ. 2026 ರಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಅನ್ನು ಈಗಾಗಲೇ ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಿಸುತ್ತಿರುವುದನ್ನು (ರೋಡ್ ಟೆಸ್ಟಿಂಗ್) ಗುರುತಿಸಲಾಗಿದೆ.

ಮೊದಲ ಬಾರಿಗೆ ಬ್ರೆಝಾವನ್ನು 2016 ರಲ್ಲಿ ಪರಿಚಯಿಸಲಾಯಿತು, ಅಂದಿನಿಂದ ಇದು ಜನಪ್ರಿಯ ಕಾಂಪ್ಯಾಕ್ಟ್ SUV ಆಗಿ ಭಾರತದಲ್ಲಿ ಗ್ರಾಹಕರಿಂದ ಉತ್ತಮ ಬೇಡಿಕೆ ಗಳಿಸಿದೆ. ಈಗ, ಬ್ರ್ಯಾಂಡ್ ಬ್ರೆಝಾದ ಹೊಸ ಫೇಸ್‌ಲಿಫ್ಟ್ ಮಾಡಲ್ ಅನ್ನು 2026 ರಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಗ್ರಾಹಕರನ್ನು ಸೆಳೆಯಲು ಹಾಗೂ ಪ್ರತಿಸ್ಪರ್ಧಿಗಳಿಂದ ಎದ್ದು ಕಾಣಲು ಈ ಬಾರಿ 2026 ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಹಲವಾರು ವಿನ್ಯಾಸ ಬದಲಾವಣೆಗಳನ್ನು ಒಳಗೊಂಡಿರುತ್ತದೆ.
ಎಸ್‌ಯುವಿಯ ಒಟ್ಟಾರೆ ಲುಕ್ ಒಂದೇ ಆಗಿದ್ದರೂ, ಮುಂಭಾಗ ಮತ್ತು ಹಿಂಭಾಗವು ತುಂಬಾ ಪ್ರೀಮಿಯಂ ಹಾಗೂ ರಗಡ್ ಆಗಿರಲಿದೆ. ಈಗಾಗಲೇ 2026 ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಮಾಡಲ್ ಅನ್ನು ರಸ್ತೆಯಲ್ಲಿ ಪರೀಕ್ಷಿಸುವ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್ ಸಹ ಹೊಂದಿದ್ದು, ಹಿಂಭಾಗದಲ್ಲಿ ನಾಲ್ಕು ಪಾರ್ಕಿಂಗ್ ಸೆನ್ಸಾರ್‌ಗಳು ಕಾಣಿಸಿಕೊಂಡಿವೆ. ಜೊತೆಗೆ ಮುಂಭಾಗದ ಗ್ರಿಲ್ ಹಾಗೂ ಹಿಂಭಾಗದಲ್ಲಿ ಹೊಸ ಡಿಸೈನ್ ಪಡೆದಿದೆ.

2026 ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಪ್ರಮುಖ ಬದಲಾವಣೆಗಳನ್ನು ಪಡೆಯುವ ನಿರೀಕ್ಷೆಯಿದ್ದರೂ, ಅದರ ಎಂಜಿನ್ ಮಾತ್ರ ಬದಲಾಗದೆ ಉಳಿಯುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ಬ್ರೆಝಾ 1.5 - ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರಲಿದ್ದು, ಹೈಬ್ರಿಡ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳನ್ನು ಸಹ ನೀಡಬಹುದು.
ಈ 1.5-ಲೀಟರ್ ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಜೊತೆಗೆ ಜೋಡಿಸಲಾಗಿದೆ. ಇನ್ನು ಸಿಎನ್‌ಜಿ ರೂಪಾಂತರವು ಇದೇ ಎಂಜಿನ್‌ನ್ನು ಒಳಗೊಂಡಿದ್ದು, 88 ಪಿಎಸ್ ಪವರ್ ಹಾಗೂ 121.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ಪೀಡ್ ಮ್ಯಾನುವಲ್ ಅಥವಾ 6 - ಸ್ಪೀಡ್ ಆಟೋಮ್ಯಾಟಿಕ್ ನೊಂದಿಗೆ ನೀಡಲಾಗುತ್ತದೆ.

ಮುಂಬರುವ 2026 ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಕಾರಿನಲ್ಲಿ ಲೆವೆಲ್ 2 ADAS ಸೂಟ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಪ್ರಯಾಣಿಕರಿಗೆ ವರ್ಧಿತ ಸುರಕ್ಷತೆಯನ್ನು ಒದಗಿಸುವ ನಿರೀಕ್ಷೆಯಿದೆ. ಏಕೆಂದರೆ ತನ್ನ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿರುವ ಕಾರಣ ಕಂಪನಿಗೆ ಅನಿವಾರ್ಯವಾಗಿದೆ.
ಮುಂಬರುವ ಬ್ರೆಝಾವು ಪ್ರೀಮಿಯಂ ಅಪ್ಹೋಲ್ಸ್ಟರಿಯೊಂದಿಗೆ ಮರುವಿನ್ಯಾಸಗೊಳಿಸಲಾದ ಕ್ಯಾಬಿನ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ದೊಡ್ಡ ಟಚ್‌ಸ್ಕ್ರೀನ್ ಆಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮುಂಭಾಗದಲ್ಲಿ ಪವರ್ಡ್ ಮತ್ತು ವೆಂಟಿಲೇಟೆಡ್ ಸೀಟುಗಳು, ಪನೋರಮಿಕ್ ಸನ್‌ರೂಫ್ ಮತ್ತು ಇನ್ನೂ ಹೆಚ್ಚಿನ ಪ್ರೀಮಿಯಂ ಫೀಚರ್ಸ್ ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications








