Maruti: ಕಳಪೆ ಎಂದೆಲ್ಲ ಜರಿಯುವಂತಿಲ್ಲ! ಬಿಡುಗಡೆಗೂ ಮೊದಲೇ ಹೊಸ ಮಾರುತಿ ಕಾರಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್ ಸಿಕ್ತು!
ನವದೆಹಲಿಯಲ್ಲಿಂದು ಹೊಚ್ಚ ಹೊಸ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮತ್ತೊಮ್ಮೆ ಪ್ರದರ್ಶಿಸಲಾಗಿದೆ. ಶೀಘ್ರದಲ್ಲೇ ಅದ್ದೂರಿಯೂ ಬಿಡುಗಡೆಗೊಳ್ಳಲಿದೆ. ಆ ಬಳಿಕ, ಬೆಲೆ ಕುರಿತ ವಿವರಗಳನ್ನು ಘೋಷಣೆ ಮಾಡಲಾಗುತ್ತದೆ. 2026ರಲ್ಲಿ ವಿತರಣೆಗಳು ಶುರುವಾಗಲಿದೆ. ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) 'ಇ-ವಿಟಾರಾ'ವನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ.
ನೂತನ 'ಮಾರುತಿ ಇ-ವಿಟಾರಾ' ಭಾರತ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 32ಕ್ಕೆ 31.49 ಅಂಕಗಳನ್ನು ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 43 ಅಂಕಗಳನ್ನು ಗಳಿಸಿದೆ. ಈ ಮೂಲಕ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿ ಯಶಸ್ವಿಯಾಗಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. 7 ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ, ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.
'ಮಾರುತಿ ಇ-ವಿಟಾರಾ' ವಿಶೇಷತೆಗಳೇನು:
ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ರೂ.17 ಲಕ್ಷದಿಂದ ರೂ.22.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಡೆಲ್ಟಾ (Delta), ಜಿಟಾ (Zeta) ಮತ್ತು ಆಲ್ಫಾ (Alpha) ಎಂಬ ಆಕರ್ಷಕ ರೂಪಾಂತರಗಳೊಂದಿಗೂ ದೊರೆಯುತ್ತದೆ.
ನೂತನ 'ಇ-ವಿಟಾರಾ' ನೋಡುಗರ ಕಣ್ಣು ಕುಕ್ಕುವಂತಿದೆ. ಉತ್ತಮವಾದ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲೈಟ್ ಮತ್ತು 19-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ನೆಕ್ಸಾ ಬ್ಲೂ, ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಗ್ರ್ಯಾಂಡಿಯರ್ ಗ್ರೇ, ಬ್ಲ್ಯೂಯಿಶ್ ಬ್ಲ್ಯಾಕ್ ಹಾಗೂ ಆಪ್ಯುಲೆಂಟ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,700 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

ಈ ಕಾರು ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 49 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, 144 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 192.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಮತ್ತೊಂದು 61 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದುರುವ ಮಾಡೆಲ್, 174 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 192.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 543 ಕಿ.ಮೀವರೆಗೆ (ಎಆರ್‌ಎಐ) ರೇಂಜ್ ನೀಡಲಿದೆ ಎಂದು ಕಂಪನಿಯು ಹೇಳಿಕೊಂಡಿದೆ.
ಇದರ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದು. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 ಇಂಚಿನ ಆಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಫಿಕ್ಸೆಡ್ ಗ್ಲಾಸ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಎಸಿಗಳನ್ನು ಪಡೆದಿದೆ.
ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಮಹೀಂದ್ರಾ ಬಿಇ 6, ವಿನ್‌ಫಾಸ್ಟ್ ವಿಎಫ್6, ಟಾಟಾ ಹ್ಯಾರಿಯರ್ ಇವಿ, ಟಾಟಾ ನೆಕ್ಸಾನ್ ಇವಿ, ಎಂಜಿ ವಿಂಡ್ಸರ್ ಇವಿ, ಟಾಟಾ ಪಂಚ್ ಇವಿ ಹಾಗೂ ಟಾಟಾ ಕರ್ವ್ ಇವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








