Nissan: ಕಡಿಮೆ ಬೆಲೆ, ಜನ ಮುಗಿಬಿದ್ದು ಖರೀದಿ: ಫುಲ್ ಡಿಮ್ಯಾಂಡ್... ಈಗ ಬೆಲೆ ಏರಿಸಿದ ಕಂಪನಿ!
ನಿಸ್ಸಾನ್ (Nissan) ಕಂಪನಿಯು ಭಾರತದಲ್ಲಿ ಸ್ಥಿರ ಮತ್ತು ಸುಸ್ಥಿರ ಬೆಳವಣಿಗೆಯನ್ನು ಮುಂದುವರೆಸಿದ್ದು, ಹೊಸ ನಿಸ್ಸಾನ್ ಮ್ಯಾಗ್ನೈಟ್ (Nissan Magnite) ನ ನಿರಂತರ ಯಶಸ್ಸಿನಿಂದ ಈ ವರ್ಷ ಉತ್ತಮ ಮಾರಾಟವನ್ನು ಸಾಧಿಸಿದೆ. ಈ ಕಾರು ದೇಶದಲ್ಲಿ ಕಂಪನಿಯ ಪ್ರಮುಖ ಆಧಾರಸ್ತಂಭವಾಗಿದ್ದು, ಜಾಗತಿಕ ರಫ್ತು ಕಾರ್ಯಾಚರಣೆಗಳಲ್ಲಿಯೂ ಪ್ರಮುಖ ಭಾಗವಾಗಿದೆ. ಕಳೆದ ಏಳು ವರ್ಷಗಳಲ್ಲಿ ಹಿಂದೆಂದೂ ಕಾಣದ ಮಾರಾಟವನ್ನು 2024-25ನೇ ಹಣಕಾಸು ವರ್ಷದಲ್ಲಿ ಕಂಪನಿಗೆ ಉತ್ತಮ ಯಶಸ್ಸನ್ನು ತಂದುಕೊಟ್ಟಿದೆ. ಆದರೆ ಕಂಪನಿ ಇದೀಗ ಹೊಸ ನಿಸ್ಸಾನ್ ಮ್ಯಾಗ್ನೈಟ್ ಬೆಲೆ ಏರಿಕೆಯನ್ನು ಘೋಷಿಸಿ ಗ್ರಾಹಕರಿಗೆ ಆಘಾತ ನೀಡಿದೆ.
ಮಾರುತಿ ಸುಜುಕಿ ಹಾಗೂ ಟಾಟಾ ಮೋಟಾರ್ಸ್ ತಮ್ಮ ಕಾರುಗಳ ಬೆಲೆ ಏರಿಕೆ ಘೋಷಣೆ ಬೆನ್ನಲ್ಲೇ ಇದೀಗ ನಿಸ್ಸಾನ್ ಮೋಟಾರ್ ಇಂಡಿಯಾ ಕೂಡ ಏಪ್ರಿಲ್ 1, 2025 ರಿಂದ ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಸರಿದೂಗಿಸಲು ಈ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಸದ್ಯ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕಾರು ರೂ. 6.14 ಲಕ್ಷದಿಂದ ರೂ. 11.76 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಬೆಲೆಗಳ ಮೇಲೆ ಪ್ರತಿ ವೇರಿಯೆಂಟ್ ಅನ್ನು ಆಧರಿಸಿ ಶೇಕಡಾ 3 ರಷ್ಟು ಬೆಲೆ ಏರಿಕೆ ಇರಲಿದೆ. ವಿಸಿಯಾ, ವಿಸಿಯಾ ಪ್ಲಸ್, ಅಸೆಂಟಾ & ಎನ್-ಕನೆಕ್ಟಾ ಒಳಗೊಂಡಂತೆ ಹಲವು ವೇರಿಯೆಂಟ್ ಆಯ್ಕೆಯಲ್ಲಿ ಈ ಕಾರು ಖರೀದಿಗೆ ಲಭ್ಯವಿದೆ.
2024-25ನೇ ಹಣಕಾಸು ವರ್ಷದಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ 2024 ರ ಅಕ್ಟೋಬರ್‌ನಲ್ಲಿ ಪರಿಚಯಿಸಲಾದ ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ಒಟ್ಟು 28,000 ಕ್ಕೂ ಹೆಚ್ಚು ಯುನಿಟ್ ಕಾರುಗಳ ದೇಶೀಯ ಮಾರಾಟವನ್ನು ದಾಖಲಿಸಿದೆ. ಭಾರತದಲ್ಲಿ ಸಿಎನ್‌ಜಿ, ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಗ್ರಾಹಕರ ಆದ್ಯತೆ ಹೆಚ್ಚುತ್ತಿರುವ ಹೊರತಾಗಿಯೂ ಈ ಬಲವಾದ ಕಾರ್ಯಕ್ಷಮತೆಯನ್ನು ತೋರಿಸಿದೆ.

ನಿಸ್ಸಾನ್ ಮ್ಯಾಗ್ನೈಟ್ ವಿಶೇಷತೆಗಳು: ಈ ಎಸ್‌ಯುವಿ 5 ಆಸನಗಳನ್ನು ಒಳಗೊಂಡಿದ್ದು, ತನ್ನ ವಿಭಾಗದಲ್ಲಿ ಆರಾಮ ಪ್ರಯಾಣಕ್ಕೆ ಬೆಸ್ಟ್ ಆಯ್ಕೆಯಾಗಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ ನಿಸ್ಸಾನ್ ಮ್ಯಾಗ್ನೈಟ್ ಸುರಕ್ಷತೆ ವಿಚಾರಕ್ಕೆ ಬಂದರೆ ಇದರಲ್ಲಿ 6 - ಏರ್‌ಬ್ಯಾಗ್‌ಗಳು, ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು 360 - ಡಿಗ್ರಿ ಕ್ಯಾಮೆರಾ, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಿದೆ.

1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಈ ಎಸ್‌ಯುವಿಗೆ ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್ & ಮಾರುತಿ ಸುಜುಕಿ ಬ್ರೆಝಾ ಕಾರುಗಳು ಅತಿದೊಡ್ಡ ಎದುರಾಳಿಯಾಗಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








