Nissan: ಹೊಸ ವರ್ಷಕ್ಕೆ 5 ದಿನ ಬಾಕಿ.. ದಿಢೀರನೇ ಬೆಲೆ ಏರಿಕೆ ಶಾಕ್ ಕೊಟ್ಟ ನಿಸ್ಸಾನ್, ಎಷ್ಟಾಗಿದೆ?
ನಿಸ್ಸಾನ್ ಇಂಡಿಯಾ (Nissan India) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಏಕೈಕ ಕಾರಾಗಿ 'ಮ್ಯಾಗ್ನೈಟ್'ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದೊಂದು ಎಸ್‌ಯುವಿಯಾಗಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದು, ಪ್ರತಿ ತಿಂಗಳು 2,000 ಯುನಿಟ್‌ಗಳನ್ನು ಮಾರಲಾಗುತ್ತಿದೆ. ಸದ್ಯ, ಇದೇ ಕಾರಿನ ದರವನ್ನು ಹೆಚ್ಚಿಸಿರುವುದಾಗಿ ಕಂಪನಿಯು ಘೋಷಣೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಎಸ್‌ಯುವಿ ಬೆಲೆಯೂ ಶೇಕಡ 3% ಅಧಿಕಗೊಂಡಿದೆ. ನೂತನ ದರವು ಜನವರಿ 1, 2026 ರಿಂದ ಅನ್ವಯವಾಗಲಿದೆ. ಬೆಲೆ ಏರಿಕೆಗೆ ಸ್ಪಷ್ಟವಾದ ಕಾರಣವನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಆದರೆ, ತಯಾರಿಕಾ ವೆಚ್ಚಗಳು ಹೆಚ್ಚಳವಾದ ಹಿನ್ನೆಲೆ, ದರ ಪರಿಷ್ಕರಣೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಸ್ತುತ, ಗ್ರಾಹಕರ ಖರೀದಿಗೆ ಲಭ್ಯವಿರುವ 'ನಿಸ್ಸಾನ್ ಮ್ಯಾಗ್ನೈಟ್' ಕನಿಷ್ಠ ರೂ.5.62 ಲಕ್ಷ ಹಾಗೂ ಗರಿಷ್ಠ ರೂ.10.90 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ದರ ಏರಿಕೆಯಿಂದಾಗಿ, ರೂಪಾಂತರಗಳಿಗೆ ಅನುಗುಣವಾಗಿ ರೂ.15,000 ರಿಂದ ರೂ.30,000 ವರೆಗೆ ಬೆಲೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ಮುಂದೆ ಈ ಕಾರು ರೂ.5.79 ಲಕ್ಷ ಆರಂಭಾಯಿಕ ದರವನ್ನು ಹೊಂದಿರುವ ನಿರೀಕ್ಷೆಯಿದೆ.
ಈ ಮೊದಲು ಸೆಪ್ಟೆಂಬರ್ 22 ರಂದು ಜಿಎಸ್‌ಟಿ ಪರಿಷ್ಕರಣೆ ಮಾಡಲಾಗಿತ್ತು. ಇದೇ 'ನಿಸ್ಸಾನ್ ಮ್ಯಾಗ್ನೈಟ್' ಕಾರಿನ ಬೆಲೆಯನ್ನು ಸರಿ ಸುಮಾರು ರೂ.52,000 ರಿಂದ ರೂ.1 ಲಕ್ಷವರೆಗೆ ಇಳಿಕೆ ಮಾಡಲಾಗಿತ್ತು. ಆಗ, ಈ ಎಸ್‌ಯುವಿಯು ರೂ.5.99 ಲಕ್ಷದಿಂದ ರೂ.11.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿತ್ತು.

'ನಿಸ್ಸಾನ್ ಮ್ಯಾಗ್ನೈಟ್' ವಿಶೇಷತೆಗಳೇನು:
ಇದು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರನ್ನು ಆಕರ್ಷಿಸುವಂತಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು 16-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಮೆಟಾಲಿಕ್ ಗ್ರೇ, ಸ್ಟಾರ್ಮ್ ವೈಟ್, ಬ್ಲೇಡ್ ಸಿಲ್ವರ್, ಸನ್‌ರೈಸ್ ಕಾಪರ್ ಆರೆಂಜ್ ಮತ್ತು ಫ್ಲೇರ್ ಗಾರ್ನೆಟ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 205 ಎಂಎಂ ಗ್ರೌಂಡ್ ಕಿಯರೆನ್ಸ್ ಹಾಗೂ 2,500 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.
ನೂತನ 'ಮ್ಯಾಗ್ನೈಟ್' ಸಾಕಷ್ಟು ಬಲಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿದೆ. 1-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1-ಲೀ. ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 17.9 ರಿಂದ 19.9 ಕಿಲೋಮೀಟರ್‌ವರೆಗೆ ಮೈಲೇಜ್‌ನ್ನು ನೀಡುತ್ತದೆ. 170 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

ಈ ಕಾರು 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚು ಲಗೇಜ್ ಕೊಂಡೊಯ್ಯಲು 336 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.
ಇದರ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. ಮನಮೋಹಕವಾದ ಡ್ಯಾಶ್‌ಬೋರ್ಡ್‌ನ್ನು ಒಳಗೊಂಡಿದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ರೇರ್ ಎಸಿ ವೆಂಟ್‌ಗಳು ಮತ್ತು ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೊಸ 'ನಿಸ್ಸಾನ್ ಮ್ಯಾಗ್ನೈಟ್' ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ - ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಮುಂಭಾಗ (ಫ್ರಂಟ್) ಮತ್ತು ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.


Click it and Unblock the Notifications