ನೋಡಲು ಚಿಕ್ಕದು, ಆದ್ರೂ 408 Km ರೇಂಜ್.. ಹೊಸ 'Nissan Micra' ಎಲೆಕ್ಟ್ರಿಕ್ ಕಾರು ಬಂದಿದೆ.. ಹೇಗಿದೆ?
ಜಪಾನ್ ಮೂಲದ ನಿಸ್ಸಾನ್ (Nissan) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ 'ಮ್ಯಾಗ್ನೆಟ್' ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅಂತರರಾಷ್ಟ್ರೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಕೂಡ ಹೊಸ ಕ್ರಾಂತಿ ಮಾಡಲು ಕಂಪನಿಯು ಮುಂದಾಗಿದ್ದು, ಅದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯದೊಳಗೆ ನೂತನ ಎಲೆಕ್ಟ್ರಿಕ್ ಕಾರೊಂದನ್ನು ಅದ್ದೂರಿಯಾಗಿಯೂ ಬಿಡುಗಡೆಗೊಳಿಸಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಈಚೆಗೆ ನಿಸ್ಸಾನ್ ಕಂಪನಿಯು 6ನೇ ತಲೆಮಾರಿನ ಮೈಕ್ರಾ (6th Generation Micra) ಹ್ಯಾಚ್‌ಬ್ಯಾಕ್‌ನ್ನು ಪರಿಚಯಿಸಿದೆ. ಸುಮಾರು 40 ವರ್ಷಗಳಿಂದ ಈ ಕಾರನ್ನು ಪೆಟ್ರೋಲ್/ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾರಾಟಗೊಳಿಸಲಾಗುತ್ತಿತ್ತು. ಆದರೀಗ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಪವರ್‌ಟ್ರೇನ್‌ನ್ನು ಹೊಂದಿರುವ 'ಮೈಕ್ರಾ' ಹ್ಯಾಚ್‌ಬ್ಯಾಕ್‌ನ್ನು ಅನಾವರಣಗೊಳಿಸಲಾಗಿದೆ. ಈ ವರ್ಷಾಂತ್ಯದೊಳಗೆ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಆ ನಂತರ ವಿವಿಧ ದೇಶಗಳಲ್ಲೂ ಮಾರಾಟಕ್ಕೆ ತರಲಾಗುತ್ತದೆ.

ನೂತನ ನಿಸ್ಸಾನ್ ಮೈಕ್ರಾ ಇವಿ (Nissan Micra EV) ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಇದು ಅತ್ಯುತ್ತಮವಾದ ಹೆಡ್‌ಲೈಟ್‌ಗಳು, ಡಿಆರ್‌ಎಲ್‌ಗಳು, ಟೈಲ್ ಲ್ಯಾಂಪ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಪಡೆದಿದೆ. ರೇರ್ ಡೋರ್‌ಗಳಲ್ಲಿ ಕಾಲಮ್-ಮೌಂಟೆಡ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ. ಜೊತೆಗೆ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ 'ನಿಸ್ಸಾನ್ ಮೈಕ್ರಾ' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಎರಡು ಪವರ್‌ಟ್ರೇನ್‌ನ್ನು ಪಡೆದಿದೆ. ಇದರ 40 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 308 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಹಾಗೆಯೇ 120 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 225 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಮತ್ತೊಂದು ಹೆಚ್ಚು ಬಲಿಷ್ಠವಾದ 52 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಮಾಡೆಲ್, ಭರ್ತಿ ಚಾರ್ಜ್‌ನಲ್ಲಿ 408 ಕಿಲೋಮೀಟರ್ ಓಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 147.5 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 245 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ನೂತನ ನಿಸ್ಸಾನ್ ಮೈಕ್ರಾ ಇವಿ ಒಳಭಾಗವು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಇದರೊಟ್ಟಿಗೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ ಇನ್ಫೋಟೈನ್ಮೆಂಟ್ ಸಿಸ್ಟಮ್ & ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.1-ಇಂಚಿನ ಡುಯಲ್ ಡಿಸ್‌ಪ್ಲೇ, 3-ಸ್ಪೋಕ್ ಸ್ಟೀರಿಂಗ್ ವೀಲ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, 5 ಆಸನಗಳನ್ನು ಪಡೆದಿದೆ.
ಭಾರತದ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ 'ನಿಸ್ಸಾನ್ ಮೈಕ್ರಾ' ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸುವ ಕುರಿತಂತೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಆದರೂ ದೇಶೀಯವಾಗಿ ಮುಂಬರುವ ವರ್ಷಗಳಲ್ಲಿ ಈ ಕಾರು ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ಗ್ರಾಹಕರು ತಾಳ್ಮೆಯಿಂದ ಕಾಯಬೇಕು ಅಷ್ಟೇ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications