ಟಾಟಾ ಗತ್ತೇ ಬೇರೆ... ಪೈಪೋಟಿ ಕೊಟ್ಟರೆ ಮಕಾಡೆ ಮಲಗಿಸುತ್ತೆ! ಈ ಟಾಟಾ ಕಾರೀಗ ನಂ.1
ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳ ಆಫರ್‌ಗಳು ಹಾಗೂ ಜಿಎಸ್‌ಟಿ ಕಡಿತದಿಂದಾಗಿ ಜನ ಮುಗಿಬಿದ್ದು ಕಾರುಗಳು ಖರೀದಿಸಿದ್ದು, ಆಟೋ ಉದ್ಯಮವು ಭಾರೀ ಲಾಭ ಪಡೆದುಕೊಂಡಿತ್ತು. ಇದೀಗ ಹಬ್ಬದ ನಂತರದ ನಿರೀಕ್ಷಿತ ಮಾರಾಟ ಇಳಿಕೆಯ ಹೊರತಾಗಿಯೂ ನವೆಂಬರ್‌ನಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಸ್ಥಿರವಾಗಿದೆ. ಒಟ್ಟು ಎಲೆಕ್ಟ್ರಿಕ್ ವಾಹನ ಮಾರಾಟವು 14,850 ಯುನಿಟ್‌ಗಳಿಗೆ ತಲುಪಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಕೇವಲ ಶೇ17.75 ರಷ್ಟು ಕುಸಿತವಾಗಿದೆ. ಆದರೆ ಕಳೆದ ವರ್ಷ (ನವೆಂಬರ್ 2024) ಮಾರಾಟವಾದ 9,174 ಯುನಿಟ್‌ಗಳಿಗೆ ಹೋಲಿಸಿದರೆ ಭಾರೀ ಏರಿಕೆಯಾಗಿದೆ.
ನಂ.1 ಸ್ಥಾನದಲ್ಲಿ ಟಾಟಾ: ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವಾಹನ ಮಾರಾಟವು ತನ್ನ ಆಂತರಿಕ ಮಾರಾಟ ಶ್ರೇಣಿಯಲ್ಲಿ ಗಮನಾರ್ಹ ಬದಲಾವಣೆಯೊಂದಿಗೆ ಹೊಸ ಹಂತವನ್ನು ಪ್ರವೇಶಿಸಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಹ್ಯಾರಿಯರ್.ಇವಿ, ಬ್ರ್ಯಾಂಡ್‌ನ ಅತ್ಯುತ್ತಮ ಮಾರಾಟವಾದ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ದೀರ್ಘಾವಧಿಯ ಪ್ರಾಬಲ್ಯ ಹೊಂದಿದ್ದ ನೆಕ್ಸಾನ್.ಇವಿಯನ್ನು ಮೊದಲ ಬಾರಿಗೆ ಹಿಂದಿಕ್ಕಿದೆ.

ನವೆಂಬರ್ 2025 ರಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಅಗ್ರ ಸ್ಥಾನ ಪಡೆದುಕೊಂಡಿದೆ. ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (FADA) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಂಪನಿಯು ಈ ತಿಂಗಳಲ್ಲಿ 6,153 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ. ಇದು ನವೆಂಬರ್ 2024 ರಲ್ಲಿ ಮಾರಾಟವಾದ 4,449 ಯೂನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ38.30 ರಷ್ಟು ಬೆಳವಣಿಗೆಯಾಗಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಒಂದೇ ತಿಂಗಳಲ್ಲಿ 2,458 ಯೂನಿಟ್ ಹ್ಯಾರಿಯರ್.ಇವಿ ವಾಹನಗಳು ಮಾರಾಟವಾಗಿವೆ. ನೆಕ್ಸಾನ್.ಇವಿನ 2,230 ಯೂನಿಟ್ ವಾಹನಗಳು ಮಾರಾಟವಾಗಿವೆ. ಉಳಿದಂತೆ ಪಂಚ್ ಇವಿ ಹಾಗೂ ಟಿಯಾಗೋ ಇವಿ ಮಾರಾಟವಾಗಿವೆ. 2025 ರ ಮಧ್ಯಭಾಗದಿಂದ ಟಾಟಾ' ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ತಿಂಗಳಿನಿಂದ ತಿಂಗಳಿಗೆ ಲಾಭವನ್ನು ವರದಿ ಮಾಡುತ್ತಲೇ ಇದೆ. ನವೆಂಬರ್‌ನಲ್ಲಿ ಬ್ರ್ಯಾಂಡ್ ಶೇ42 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ EV ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದೆ.

ಎರಡನೇ ಸ್ಥಾನದಲ್ಲಿ ಎಂಜಿ ಮೋಟಾರ್: ನವೆಂಬರ್ 2025 ರಲ್ಲಿ JSW MG ಮೋಟಾರ್ ಇಂಡಿಯಾ 3,693 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ. ಬ್ರ್ಯಾಂಡ್ ನವೆಂಬರ್ 2024 ರಲ್ಲಿ 3,347 ಯುನಿಟ್‌ಗಳ ಮಾರಾಟದೊಂದಿಗೆ ವರ್ಷದಿಂದ ವರ್ಷಕ್ಕೆ ಶೇ10.34 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ತಿಂಗಳಿಗೆ (ಅಕ್ಟೋಬರ್ 2025) ಹೋಲಿಸಿದರೆ, MG ಯ ಮಾರಾಟವು ಶೇ18.82 ರಷ್ಟು ಕಡಿಮೆಯಾಗಿದೆ.
ಮೂರನೇ ಸ್ಥಾನದಲ್ಲಿ ಮಹೀಂದ್ರಾ: ಈ ನವೆಂಬರ್ ತಿಂಗಳಿನಲ್ಲಿ 2,966 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಮೂಲಕ ಮಹೀಂದ್ರಾ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಅಕ್ಟೋಬರ್ 2025 ರಲ್ಲಿ ಬರೋಬ್ಬರಿ 3,911 ಯುನಿಟ್ ವಾಹನಗಳ ಮಾರಾಟವಾಗಿತ್ತು. ವರ್ಷದಿಂದ ವರ್ಷಕ್ಕೆ ಶೇ408.75 ರಷ್ಟು ಜಿಗಿತವನ್ನು ಕಂಡಿದೆ, ನವೆಂಬರ್ 2024 ರಲ್ಲಿ ಕೇವಲ 583 ವಾಹನಗಳು ಮಾರಾಟವಾಗಿದ್ದವು.

ಕಿಯಾ ಮತ್ತು ಹುಂಡೈ ಎರಡೂ ಈ ವರ್ಷ ತಮ್ಮ ಇವಿ ಪೋರ್ಟ್‌ಫೋಲಿಯೊಗಳನ್ನು ವಿಸ್ತರಿಸಿ, ಕ್ರಮವಾಗಿ 464 ಯುನಿಟ್ ವಾಹನಗಳು ಮತ್ತು 372 ಯುನಿಟ್ ವಾಹನಗಳ ಮಾರಾಟವನ್ನು ದಾಖಲಿಸಿವೆ. ಬಿವೈಡಿ ಇಂಡಿಯಾ 425 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಭಾರತಕ್ಕೆ ಹೊಸ ಪ್ರವೇಶ ಪಡೆದ ವಿನ್‌ಫಾಸ್ಟ್ 291 ವಾಹನಗಳನ್ನು ಮಾರಾಟ ಮಾಡಿದೆ.
ನವೆಂಬರ್‌ನಲ್ಲಿ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಪ್ರಯಾಣಿಕ ವಾಹನಗಳ ಕ್ಷೇತ್ರದಲ್ಲಿ ತನ್ನ ನಾಯಕತ್ವವನ್ನು ಉಳಿಸಿಕೊಂಡಿದೆ, ಸತತ ಕುಸಿತದ ಹೊರತಾಗಿಯೂ ಪ್ರತಿಸ್ಪರ್ಧಿಗಳಿಗಿಂತ ಆರಾಮವಾಗಿ ಮುಂದಿದೆ. ಒಟ್ಟಾರೆಯಾಗಿ, ಅಗ್ರ ಮೂರು ಕಂಪನಿಗಳು ಒಟ್ಟು ಇವಿ ಮಾರಾಟದಲ್ಲಿ ಶೇ85 ಕ್ಕಿಂತ ಹೆಚ್ಚು ಕೊಡುಗೆ ನೀಡಿವೆ. ಟಾಟಾ ಮೋಟಾರ್ಸ್ ಇವಿ ವಿಭಾಗದಲ್ಲಿ ಹೀಗೆ ಮುಂದುವರಿಯಲಿದೆಯೇ ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








