ಜಿಎಸ್‌ಟಿ ಕಡಿತ: ಈ ಜನಪ್ರಿಯ Skoda ಕಾರುಗಳ ಬೆಲೆ ರೂ.1.19 ಲಕ್ಷವರೆಗೆ ಇಳಿಕೆ..! ನೂತನ ದರ ಎಷ್ಟಾಗಲಿದೆ?
ಸ್ಕೋಡಾ ಆಟೋ ಇಂಡಿಯಾ (Skoda Auto India), ತನ್ನ ಗ್ರಾಹಕರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಲು ಸಿದ್ಧವಾಗಿದೆ. ಕೇಂದ್ರ ಸರ್ಕಾರವು ಕಾರುಗಳ ಮೇಲಿನ ಜಿಎಸ್‌ಟಿ (GST) ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಇಳಿಸಿದೆ. ಇದರ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಯು ನಿರ್ಧರಿಸಿದೆ ಎಂದು ವರದಿಯಾಗಿದೆ. ನೂತನ ದರಗಳು ಸೆಪ್ಟೆಂಬರ್ 22 ರಿಂದ ಅನ್ವಯವಾಗಲಿದೆ ಎಂಬ ವಿವರಗಳು ಲಭ್ಯವಾಗಿದ್ದು, ಜನಪ್ರಿಯ ಕೈಲಾಕ್ (Kylaq) ಹಾಗೂ ಸ್ಲಾವಿಯಾ (Slavia) ಕಾರುಗಳ ಬೆಲೆಯೂ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಸ್ಕೋಡಾ ಕೈಲಾಕ್ (Skoda Kylaq):
ಇದೊಂದು ಪ್ರಮುಖ ಎಸ್‌ಯುವಿಯಾಗಿದೆ. ಜಿಎಸ್‌ಟಿ ಕಡಿತದ ಪರಿಣಾಮ ಈ ಕಾರಿನ ದರವು ರೂಪಾಂತರಗಳಿಗೆ ತಕ್ಕಂತೆ ರೂ.70,000 ರಿಂದ ರೂ.1.19 ಲಕ್ಷವರೆಗೆ ಇಳಿಕೆಯಾಗಳಿದ್ದು, ಪರಿಷ್ಕೃತ ಎಕ್ಸ್-ಶೋರೂಂ ಬೆಲೆಯು ರೂ.7.54 ಲಕ್ಷದಿಂದ ರೂ.12.79 ಲಕ್ಷ ಆಗಿರಲಿದೆ ಎನ್ನಲಾಗಿದೆ. ಸದ್ಯ ರೂ.8.25 ಲಕ್ಷದಿಂದ ರೂ.13.99 ಲಕ್ಷ ದರವನ್ನು ಪಡೆದಿದೆ.

ಈ ಕಾರು ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್ ಪ್ಲಸ್ ಮತ್ತು ಪ್ರೆಸ್ಟೀಜ್ ಸೇರಿದಂತೆ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಸ್ಪ್ಲಿಟ್ ಎಲ್ಇಡಿ ಹೆಡ್‌ಲೈಟ್‌ಗಳು, ಸ್ಲಿಮ್ಡ್ ಡೌನ್ ಗ್ರಿಲ್, ಬ್ಲ್ಯಾಕ್ ಕ್ಲಾಡಿಂಗ್ ಹಾಗೂ ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ.
ಹೊಸ ಕೈಲಾಕ್ ಎಸ್‌ಯುವಿಯು 1.0-ಲೀಟರ್ ಟಿಎಸ್‌ಟಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 115 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 178 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 18 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 45 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ.

ಇದು 5 ಆಸನಗಳನ್ನು ಪಡೆದುಕೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 446 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. ಬ್ರಿಲಿಯಂಟ್ ಸಿಲ್ವರ್, ಲಾವಾ ಬ್ಲೂ, ಆಲಿವ್ ಗೋಲ್ಡ್, ಕಾರ್ಬನ್ ಸ್ಟೀಲ್ ಮತ್ತು ಟೊರ್ನಾಡೊ ರೆಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಈ ಕಾರಿನ ಕ್ಯಾಬಿನ್ ವಿನ್ಯಾಸವು ತುಂಬಾ ಚೆನ್ನಾಗಿದೆ. 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಟು-ಸ್ಪೋಕ್ ಸ್ಟೀರಿಂಗ್ ವೀಲ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಸ್ಕೋಡಾ ಸ್ಲಾವಿಯಾ (Skoda Slavia):
ಈ ಸೆಡಾನ್ ಹೆಚ್ಚು ವಿಶ್ವಾಸಾರ್ಹವಾಗಿದೆ. ಜಿಎಸ್‌ಟಿ ಇಳಿಕೆಯ ಬಳಿಕ ಈ ಕಾರಿನ ದರವು ರೂಪಾಂತರಗಳಿಗೆ ಅನುಗುಣವಾಗಿ ರೂ.46,000 ರಿಂದ ರೂ.63,000 ಕಡಿಮೆಯಾಗಲಿದ್ದು, ಹೊಸ ಎಕ್ಸ್-ಶೋರೂಂ ಬೆಲೆಯು ರೂ.9.99 ಲಕ್ಷ 17.69 ಲಕ್ಷ ಆಗಲಿದೆ ಎಂದು ಹೇಳಲಾಗಿದೆ. ಪ್ರಸ್ತುತ ರೂ.10.49 ಲಕ್ಷದಿಂದ ರೂ.18.33 ಲಕ್ಷ ದರವನ್ನು ಪಡೆದಿದೆ.
ಇದು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 7-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 18.73 ರಿಂದ 20.32 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ನೂತನ ಸ್ಲಾವಿಯಾ 10 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, ಕೀಲೆಸ್ ಎಂಟ್ರಿ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ ಹಿಲ್ ಹೋಲ್ಡ್ ಕಂಟ್ರೋಲ್‌ನ್ನು ಹೊಂದಿದೆ.


Click it and Unblock the Notifications








