8 ಲಕ್ಷ.. 5-ಸೀಟರ್, 18 ಕಿ.ಮೀ ಮೈಲೇಜ್.. ಈ ಜನಪ್ರಿಯ ಕಾರನ್ನು ಮನೆ ತರಲು ಕಾಯಲೇಬೇಕು!
ಸ್ಕೋಡಾ ಕೈಲಾಕ್ (Skoda Kylaq) ಪ್ರಮುಖ ಎಸ್‌ಯುವಿಯಾಗಿದೆ. ಈ ಕಾರನ್ನು 2024ರ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಅಂದಿನಿಂದಲೇ ನೂತನ 'ಕೈಲಾಕ್' ಭಾರೀ ಬೇಡಿಕೆ ಪಡೆದುಕೊಂಡಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಇದೇ ಜೂನ್‌ನಲ್ಲೂ ಸ್ವಲ್ಪ ಮಟ್ಟಿಗೆ ಹೆಚ್ಚಿನ ಕಾಯುವಿಕೆ ಅವಧಿ (Waiting Period) ಹೊಂದಿದೆ. ಬನ್ನಿ, ಆ ಬಗ್ಗೆ ಒಂದಷ್ಟು ವಿವರಗಳನ್ನು ತಿಳಿಯೋಣ.
ಸದ್ಯ, ಮುಂಬೈ, ಹೈದರಾಬಾದ್ ಹಾಗೂ ಪುಣೆಯಲ್ಲಿ 'ಸ್ಕೋಡಾ ಕೈಲಾಕ್' ಎಸ್‌ಯುವಿಯನ್ನು 2 ತಿಂಗಳಲ್ಲಿ ವಿತರಣೆ ಮಾಡಲಾಗುತ್ತದೆ. ಕೋಲ್ಕತ್ತಾ ಹಾಗೂ ಕೊಯಮತ್ತೂರುಗಳಲ್ಲಿ 1 ರಿಂದ 1.5 ತಿಂಗಳ ಕಾಯುವಿಕೆ ಅವಧಿಯನ್ನು ಪಡೆದಿದೆ. ಬೆಂಗಳೂರು ಹಾಗೂ ನವದೆಹಲಿಯಲ್ಲಿ ಈ ಕಾರು ಎಷ್ಟೋ ತಿಂಗಳೊಳಗೆ ವಿತರಣೆಯಾಗಲಿದೆ ಎಂಬುದರ ಕುರಿತಂತೆ ಸ್ಪಷ್ಟವಾದ ವಿವರಗಳು ಲಭ್ಯವಾಗಿಲ್ಲ. ಇಲ್ಲಿಯೂ ಒಂದಷ್ಟು ಸಮಯ ಕಾಯುವಿಕೆ ಅವಧಿಯು ಇರಲಿದೆ ಎನ್ನಲಾಗಿದೆ.

ಸ್ಕೋಡಾ ಕೈಲಾಕ್ ವಿಶೇಷತೆಗಳೇನು:
ಇದೊಂದು ಎಸ್‌ಯುವಿಯಾಗಿದೆ. ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಾಗುತ್ತದೆ. ಈ ಕಾರು ರೂ.8.25 ಲಕ್ಷದಿಂದ ರೂ.13.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹೊರಭಾಗವು ತುಂಬಾ ಅದ್ಭುತವಾದ ವಿನ್ಯಾಸವನ್ನು ಒಳಗೊಂಡಿದೆ. ಬ್ರಿಲಿಯಂಟ್ ಸಿಲ್ವರ್, ಆಲಿವ್ ಗೋಲ್ಡ್, ಕಾರ್ಬನ್ ಸ್ಟೀಲ್ ಹಾಗೂ ಟೊರ್ನಾಡೊ ರೆಡ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ನೂತನ ಕೈಲಾಕ್ ಕಾರು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. ಏಕೈಕ 1.0-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಜೊತೆಗೆ ಈ ಎಸ್‌ಯುವಿಯ ಇಂಧನ ದಕ್ಷತೆ ವಿಚಾರದಲ್ಲೂ ಕಂಪನಿಯು ಯಾವುದೇ ರಾಜಿ ಮಾಡಿಕೊಂಡಿಲ್ಲ. ಬರೋಬ್ಬರಿ 15 ರಿಂದ 18 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಬಲ್ಲದು.

ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು 446 ಲೀಟರ್ ಬೂಟ್ ಸ್ಪೇಸ್‌ನ್ನು ಒಳಗೊಂಡಿದ್ದು, 45 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಈ ಕಾರು 3995 ಎಂಎಂ ಉದ್ದ, 1783 ಎಂಎಂ ಅಗಲ ಹಾಗೂ 1619 ಎಂಎಂ ಎತ್ತರವು ಇದೆ.
ಹೊಸ ಕೈಲಾಕ್ ಎಸ್‌ಯುವಿಯ ಕ್ಯಾಬಿನ್ ವಿನ್ಯಾಸವು ತುಂಬಾ ಚೆನ್ನಾಗಿದೆ. ಈ ಕಾರು 10-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 8-ಇಂಚಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಟು ಸ್ಪೋಕ್ ಸ್ಟೀರಿಂಗ್ ವೀಲ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಎಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ - ಸ್ಟೆಬಿಲಿಟಿ ಕಂಟ್ರೋಲ್), ಚೈಲ್ಡ್ ಸೀಟ್ ಮೌಂಟ್‌ಗಳು, ಡಿಸ್ಕ್ & ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಸ್ಕೋಡಾ ಕೈಲಾಕ್ ಮಾರಾಟ ಹೇಗಿದೆ:
ಈ ಎಸ್‌ಯುವಿ ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿದೆ. ಮೇನಲ್ಲಿ 4,949 ಯುನಿಟ್, ಏಪ್ರಿಲ್‌ನಲ್ಲಿ 5,364 ಯುನಿಟ್, ಮಾರ್ಚ್‌ನಲ್ಲಿ 5,327 ಯುನಿಟ್, ಫೆಬ್ರವರಿಯಲ್ಲಿ 3,636 ಯುನಿಟ್ ಹಾಗೂ ಜನವರಿಯಲ್ಲಿ 1,242 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ವಿಶೇಷವಾಗಿ ಇದೇ ಕಾರಿಗೆ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ವೆನ್ಯೂಗಳು ಕೂಡ ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








