2-seater car: ಬೈಕ್ ಬೆಲೆಯ ಹೊಸ 2-ಸೀಟರ್ ಕಾರು ಖರೀದಿಸಬೇಕೆ? ವೆರಿಯೆಂಟ್ ವಾರು ವಿವರಗಳು...
ಭಾರತ್ ಮೊಬಿಲಿಟಿ ಎಕ್ಸ್‌ಪೋ 2025 (Bharat Mobility Expo 2025) ರಲ್ಲಿ ಕೆಲವು ಆಸಕ್ತಿದಾಯಕ ವಾಹನಗಳು ಕಾಣಿಸಿಕೊಂಡಿವೆ. ಇದರಲ್ಲಿ ಭಾರತದ ಮೊದಲ ಸೋಲಾರ್ ಕಾರಾಗಿರುವ ವೇವ್ ಇವಾ ಕೂಡ ಒಂದಾಗಿದ್ದು, ಎಲ್ಲರ ಗಮನ ಸೆಳೆದಿದೆ. ಈ ಕಾರು ಸಂಪೂರ್ಣ ಎಲೆಕ್ಟ್ರಿಕ್ ಪವರ್‌ನಲ್ಲಿ ಚಲಿಸಲಿದ್ದು, ಹೆಚ್ಚುವರಿಯಾಗಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿರುವುದರಿಂದಾಗಿ ಚಾರ್ಜ್ ಖಾಲಿಯಾದಾಗ ಸೋಲಾರ್ ಎನರ್ಜಿಯನ್ನು ಬಳಸಿಕೊಂಡು ಚಲಿಸುವಂತೆ ನಿರ್ಮಿಸಲಾಗಿದೆ. ಈ 2-ಸೀಟರ್ (2-seater car) ಕಾರನ್ನು ಆಟೋ ಎಕ್ಸ್‌ಪೋದಲ್ಲಿ 3.25 ಲಕ್ಷ ರೂ.ಗಳ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
ವೇವ್ ಎಲೆಕ್ಟ್ರಿಕ್ ಇವಾ ಕಾರು, ಭಾರತದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರಾಗಿದ್ದು, ಮೂರು ವೇರಿಯೆಂಟ್‌ಗಳನ್ನು ಒಳಗೊಂಡಿದೆ. ಅವುಗಳನ್ನು ನೋಡುವುದಾದ್ರೆ, ವೇವ್ ಇವಾ ನೋವಾ (Vayve Eva Nova), ವೇವ್ ಇವಾ ಸ್ಟೆಲ್ಲಾ (Vayve Eva Stella) ಮತ್ತು ವೇವ್ ಇವಾ ವೆಗಾ (Vayve Eva Vega) ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಪ್ರತಿ ವೇರಿಯೆಂಟ್ ಏನೆಲ್ಲಾ ಫೀಚರ್‌ಗಳನ್ನು ಒಳಗೊಂಡಿದೆ ಎಂಬುದು ಇಲ್ಲಿದೆ.

ವೇವ್ ಇವಾ ನೋವಾ: ವೇವ್ ಇವಾ ನೋವಾ ವೇರಿಯೆಂಟ್‌ನಲ್ಲಿ 9 ಕಿಲೋವ್ಯಾಟ್ (ಏರ್ ಕೂಲ್ಡ್) ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 125 ಕಿ.ಮೀ ಓಡಿಸಬಹುದು. 5 ಗಂಟೆಗಳಲ್ಲಿ ಶೇ10 ರಿಂದ 90 ರಷ್ಟು ಚಾರ್ಜ್ (ಹೋಮ್ ಚಾರ್ಜರ್) ಮಾಡಬಹುದು. ಸ್ಥಿರ ಪುನರುತ್ಪಾದಕ (ರೀಜೆನ್) ಬ್ರೇಕಿಂಗ್ ಕೂಡ ಇದೆ.
ಕೀ ಸ್ಟಾರ್ಟ್ & ಸ್ಟಾಪ್, ಸಿಂಗಲ್ ಡ್ರೈವ್ ಮೋಡ್ (ಇಕೋ), 12 - ಇಂಚಿನ ಸ್ಟೀಲ್ ವೀಲ್‌ಗಳು, ಗಂಟೆಗೆ 60 ಕಿ.ಮೀ ಟಾಪ್ ಸ್ಪೀಡ್, ಹ್ಯಾಲೋಜೆನ್ ಹೆಡ್‌ಲೈಟ್‌ಗಳು, ಮ್ಯಾನುವಲ್ ಡೇ ಅಂಡ್ ನೈಟ್ IRVM ಅನ್ನು ಒಳಗೊಂಡಿದೆ. ಇವೆಲ್ಲಾ ಫೀಚರ್ಸ್ ವೇವ್ ಇವಾ ನೋವಾ ವೇರಿಯೆಂಟ್‌ನಲ್ಲಿ ಸಿಗಲಿವೆ.

ವೇವ್ ಇವಾ ಸ್ಟೆಲ್ಲಾ: ವೇವ್ ಇವಾ ಸ್ಟೆಲ್ಲಾ ವೇರಿಯೆಂಟ್‌ನಲ್ಲಿ 12.6 ಕಿಲೋವ್ಯಾಟ್ ಏರ್ ಕೂಲ್ಡ್ ಬ್ಯಾಟರಿ ನೀಡಲಾಗಿದೆ. ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಿದ್ರೆ 175 ಕಿ.ಮೀ ಓಡಿಸಬಹುದು. ಕಾನ್ಫಿಗರ್ ಮಾಡಬಹುದಾದ ಪುನರುತ್ಪಾದಕ (ರೀಜೆನ್) ಬ್ರೇಕಿಂಗ್ ಹಾಗೂ 5 ಗಂಟೆಗಳಲ್ಲಿ ಶೇ10-90 ರಷ್ಟು ಚಾರ್ಜ್ (ಹೋಮ್ ಚಾರ್ಜರ್) ಮಾಡಬಹುದು.
ಹಾಗೆಯೇ ಈ ವೇರಿಯೆಂಟ್ 60 ಕಿ.ಮೀ/ಗಂ ಟಾಪ್ ಸ್ಪೀಡ್, ಎರಡು ಡ್ರೈವ್ ಮೋಡ್ ಗಳು (ಇಕೋ, ಸಿಟಿ), ಪನಾರಮಿಕ್ ಗ್ಲಾಸ್ ರೂಫ್, ಕ್ಲೈಮೆಟ್ ಕಂಟ್ರೋಲ್, ಸ್ಮಾರ್ಟ್ ಫೋನ್ ಸಂಪರ್ಕದೊಂದಿಗೆ 2-ಸ್ಪೀಕರ್ ಆಡಿಯೊ ಸಿಸ್ಟಮ್, ಸ್ಟಾರ್ಟ್-ಸ್ಟಾಪ್ ಬಟನ್, 13 ಇಂಚಿನ ಸ್ಟೀಲ್ ವೀಲ್‌ಗಳು, LED ಹೆಡ್ ಲೈಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಮತ್ತು ಕ್ಯಾಮೆರಾ, ಆಟೋ-ಡಿಮ್ಮಿಂಗ್ IRVM ಅನ್ನು ಒಳಗೊಂಡಿದೆ.

ವೇವ್ ಇವಾ ವೇಗಾ: ವೇವ್ ಇವಾ ವೇಗಾ ವೇರಿಯೆಂಟ್‌ನಲ್ಲಿ 18kWh ಲಿಕ್ವಿಡ್-ಕೂಲ್ಡ್ ಬ್ಯಾಟರಿ ನೀಡಲಾಗಿದ್ದು, ಇದನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದ್ರೆ 250 ಕಿ.ಮೀ ಓಡಿಸಬಹುದು. ಗಂಟೆಗೆ 70 ಕಿ.ಮೀ. ಟಾಪ್ ಸ್ಪೀಡ್ ಹೊಂದಿರುವ ಈ ಕಾರು, 5 ಗಂಟೆಗಳಲ್ಲಿ ಶೇ10-90 ರಷ್ಟು ಚಾರ್ಜ್ (ಹೋಮ್ ಚಾರ್ಜರ್) ಮಾಡಬಹುದು.
ಇನ್ನು ಇದನ್ನು ಡಿಸಿ ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 20 ನಿಮಿಷಗಳಲ್ಲಿ ಶೇ10-70 ರಷ್ಟು ಚಾರ್ಜ್ ಮಾಡಬಹುದು. ಇಕೋ, ಸಿಟಿ, ಸ್ಪೋರ್ಟ್ ಎಂಬ ಮೂರು ಡ್ರೈವ್ ಮೋಡ್‌ಗಳು, ಸ್ಮಾರ್ಟ್ ಫೋನ್ ಸಂಪರ್ಕದೊಂದಿಗೆ 4-ಸ್ಪೀಕರ್ ಆಡಿಯೊ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು, ಹೈಟ್-ಅಡ್ಜಸ್ಟಬಲ್ ಡ್ರೈವರ್ ಸೀಟ್, ಏರ್ ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಹೊಂದಿದೆ.


Click it and Unblock the Notifications








