TATA: ಹೊಸ ಕಾರು ಖರೀದಿಸಬೇಕೇ.. ಟಾಟಾದಿಂದ ಮತ್ತೆ ಬೆಲೆ ಏರಿಕೆ ಶಾಕ್!
ಟಾಟಾ ಮೋಟಾರ್ಸ್ (Tata Motors) ಅತಿ ದೊಡ್ಡ ಸ್ವದೇಶಿ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಾರು ಹಾಗೂ ಬಸ್‌ಗಳನ್ನು ಒಳಗೊಂಡಂತೆ ಹಲವು ವಾಹನಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಕೆಲವೇ ದಿನಗಳ ಹಿಂದೆ, ಏಪ್ರಿಲ್ 1, 2025 ರಿಂದ ಜಾರಿಗೆ ಬರುವಂತೆ ಎಲ್ಲ ವಾಣಿಜ್ಯ ವಾಹನಗಳ (Commercial Vehicles) ಬೆಲೆಯನ್ನು ಶೇಕಡ 2% ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿತ್ತು. ಅದರ ಬೆನ್ನಲ್ಲೇ ಕಾರು ಸೇರಿದಂತೆ ಪ್ರಯಾಣಿಕ ವಾಹನಗಳ (Passenger vehicles) ದರವನ್ನು ಅಧಿಕಗೊಳಿಸುವುದಾಗಿ ತಿಳಿಸಿದೆ.
ಸಣ್ಣ ಕಾರು ಹಾಗೂ ಎಸ್‌ಯುವಿಗಳ ತಯಾರಕ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದನ್ನು ಸರಿದೂಗಿಸಲು ಟಾಟಾ ಮೋಟಾರ್ಸ್ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಎಲ್ಲ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಆದರೆ, ಈ ದರ ಏರಿಕೆ ಪ್ರಮಾಣವನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಶೇಕಡ 4% ಅಧಿಕಗೊಳ್ಳಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.

ನೂತನ ಬೆಲೆ ಏರಿಕೆಯು ಕಾರುಗಳ ಮಾಡೆಲ್‌ಗಳನ್ನು ಅವಲಂಭಿಸಿ ಬೇರೆ-ಬೇರೆಯಾಗಿರಲಿದೆ. ಇದು ಈ ವರ್ಷದಲ್ಲಿ ಎರಡನೇ ಬಾರಿಯ ದರ ಹೆಚ್ಚಳವಾಗಿದೆ. ಜನವರಿಯಲ್ಲಿಯೂ ಶೇಕಡ 3% ಬೆಲೆ ಏರಿಕೆಯನ್ನು ಘೋಷಣೆ ಮಾಡಲಾಗಿತ್ತು. ಟಾಟಾ ಮಾತ್ರವಲ್ಲದೆ, ಮಾರುತಿ ಸುಜುಕಿ, ಹ್ಯುಂಡೈ ಹಾಗೂ ಕಿಯಾ ಕಂಪನಿಗಳು ಸಹ ಕಾರುಗಳ ಬೆಲೆಯನ್ನು ಅಧಿಕಗೊಳಿಸುವುದಾಗಿ ಘೋಷಣೆ ಮಾಡಿವೆ.
ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನ ವಿಭಾಗದಲ್ಲಿ ಹತ್ತಾರು ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಅವುಗಳಲ್ಲಿ 'ಟಿಯಾಗೊ' ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದ್ದು, ರೂ.5 ರಿಂದ ರೂ.8.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. 1.2-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದ್ದು, 19.43 ರಿಂದ 28.06 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಾಟಾ ನೆಕ್ಸಾನ್ (Tata Nexon) ಕೂಡ ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ರೂ.8 ಲಕ್ಷದಿಂದ ರೂ.15.60 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಸಿಗುತ್ತದೆ. 1.2-ಲೀ. ಟರ್ಬೊ ಪೆಟ್ರೋಲ್, 1.5-ಲೀ. ಡೀಸೆಲ್ ಹಾಗೂ 1.2-ಲೀ. ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಈ ಕಾರಿನಲ್ಲಿ 5 ಮಂದಿ ಪ್ರಯಾಣ ಮಾಡಬಹುದು.
ಟಾಟಾ ಕರ್ವ್ (Tata Curvv) ಪ್ರಖ್ಯಾತ ಕೂಪೆ ಎಸ್‌ಯುವಿಯಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಇದು ರೂ.10 ಲಕ್ಷದಿಂದ ರೂ.19 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. 1.2 ಲೀ. ಟರ್ಬೊ ಪೆಟ್ರೋಲ್, 1.2 ಲೀ. ಜಿಡಿಐ ಟರ್ಬೊ ಪೆಟ್ರೋಲ್ & 1.5 ಲೀ. ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಸಫಾರಿ (Tata Safari) ನಂಬಿಕಾರ್ಹ ಎಸ್‌ಯುವಿಯಾಗಿದೆ. ಇದು ರೂ.15.50 ಲಕ್ಷದಿಂದ ರೂ.27.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. ಈ ಕಾರು 2-ಲೀ. ಡೀಸೆಲ್ ಎಂಜಿನ್ ಪಡೆದಿದ್ದು, 16.3 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications