Tata Harrier EV vs Hyundai Creta Electric: ಗುರು.. ಇವೆರೆಡು ಜಬರ್ದಸ್ತ್ ಕಾರುಗಳು, ಯಾವುದೇ ಬೆಸ್ಟ್, ನೀವೇ ಹೇಳಿ?
ಇತ್ತೀಚೆಗೆ ನೂತನ 'ಟಾಟಾ ಹ್ಯಾರಿಯರ್ ಇವಿ'ಯನ್ನು ಮಾರಾಟಕ್ಕೆ ತರಲಾಯಿತು. ಈ ಎಲೆಕ್ಟ್ರಿಕ್ ಎಸ್‌ಯುವಿಗೆ 'ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್' ಪ್ರಬಲವಾದ ಸ್ಪರ್ಧೆಯೊಡ್ಡಬಲ್ಲದು. ಇವೆರೆಡು ಕಾರುಗಳು ಒಂದಕ್ಕಿಂತ ಒಂದು ಅದ್ಬುತವಾಗಿವೆ. ನೀವು ಹ್ಯಾರಿಯರ್ ಇವಿ ಅಥವಾ ಕ್ರೆಟಾ ಇವಿಯನ್ನು ಖರೀದಿ ಮಾಡಲು ಬಯಸುತ್ತಿದ್ದೀರಾ.. ನಾವಿಲ್ಲಿ ಈ ಎಲೆಕ್ಟ್ರಿಕ್ ಎಸ್‌ಯುವಿಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳನ್ನು ಕುರಿತಂತೆ ಸಂಕ್ಷಿಪ್ತವಾಗಿ ಹೋಲಿಕೆ ಮಾಡಿದ್ದೇವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಬೆಲೆ (Price): ಟಾಟಾ ಹ್ಯಾರಿಯರ್ ಇವಿ (Tata Harrier EV) ರೂ.21.49 ಲಕ್ಷ ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಅದೇ ರೀತಿಯಲ್ಲಿ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ (Hyundai Creta Electric) ರೂ.17.99 ಲಕ್ಷದಿಂದ ರೂ.24.38 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬೆಲೆಯ ವಿಚಾರದಲ್ಲಿ ಕ್ರೆಟಾ ಎಲೆಕ್ಟ್ರಿಕ್ ಕಾರಿಗಿಂತ ಹ್ಯಾರಿಯರ್ ಇವಿಯೇ ದುಬಾರಿಯಾಗಿದೆ.

ಕಾರ್ಯಕ್ಷಮತೆ (Performance): ಇವೆರೆಡು ಎಲೆಕ್ಟ್ರಿಕ್ ಕಾರುಗಳು ಸಾಕಷ್ಟು ಬಲವಾಗಿರುವ ಪವರ್‌ಟ್ರೇನ್‌ನ್ನು ಹೊಂದಿವೆ. ಅದರಲ್ಲೂ ಮಂಗಳವಾರ ಬಿಡುಗಡೆಯಾದ ಹ್ಯಾರಿಯರ್ ಇವಿ 65 ಕೆಡಬ್ಲ್ಯೂಹೆಚ್ & 75 ಕೆಡಬ್ಲ್ಯೂಹೆಚ್ ಸಾಮರ್ಥ್ಯವಿರುವ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 627 ಕಿಲೋಮೀಟರ್‌ವರೆಗೆ ಓಡುತ್ತದೆ.
ಹಾಗೆಯೇ ಕ್ರೆಟಾ ಎಲೆಕ್ಟ್ರಿಕ್ 42 ಕೆಡಬ್ಲ್ಯೂಹೆಚ್ ಮತ್ತು 51.4 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 390 ರಿಂದ 473 ಕಿಲೋಮೀಟರ್ ಕ್ರಮಿಸುತ್ತದೆ. ಈ ಕಾರುಗಳಲ್ಲಿ ಬೆಲೆ ಹೆಚ್ಚಿದ್ದರೂ ಟಾಟಾ ಹ್ಯಾರಿಯರ್ ಇವಿ ಗರಿಷ್ಠ ದೂರ ಸಂಚರಿಸಬಲ್ಲದು.

ಆಸನ ಆಯ್ಕೆ & ವೈಶಿಷ್ಟ್ಯಗಳು (Seating Capacity & Features): ಇವೆರೆಡು ಕಾರುಗಳು ಒಂದೇ ರೀತಿಯ 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿವೆ. ಟಾಟಾ ಹ್ಯಾರಿಯರ್ ಇವಿ 14.5-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, ಜೆಬಿಎಲ್ ಬ್ಲ್ಯಾಕ್ 10-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕೂಡ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿರುವ ಡುಯಲ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡುಯಲ್ ಜೋನ್ ಆಟೋ ಎಸಿ, ಸನ್‌ರೂಫ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯನ್ನು ಪಡೆದಿದೆ. ಈ ಕಾರುಗಳು ವೈಶಿಷ್ಟ್ಯಗಳನ್ನು ಹೊಂದುವುದರಲ್ಲಿ ಸೇರಿಗೆ ಸವ್ವಾಸೇರು ಎಂಬಂತೆ ಉತ್ತಮವಾಗಿವೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features): ಇವೆರೆಡು ಕಾರುಗಳು ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿವೆ. ಟಾಟಾ ಹ್ಯಾರಿಯರ್ ಇವಿಯು 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಲ್ ವೀಲ್ ಡಿಸ್ಕ್ ಬ್ರೇಕ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‌ಯುವಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ. ಸುರಕ್ಷತೆಯ ವಿಚಾರದಲ್ಲಿ ಈ ಕಾರುಗಳಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು.
ಒಟ್ಟಾರೆಯಾಗಿ ಈ ಟಾಟಾ ಹ್ಯಾರಿಯರ್ ಇವಿ ಮತ್ತು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳಲ್ಲೂ ತುಂಬಾ ಚೆನ್ನಾಗಿವೆ. ಇದರೊಂದಿಗೆ ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಹೊಂದಿವೆ. ಇವೆರಡರಲ್ಲಿ ನಿಮಗೆ ಯಾವ ಕಾರು ಇಷ್ಟವಾಗುತ್ತದೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications