Tata: ಮುನ್ನುಗ್ಗುತ್ತಿದೆ ಟಾಟಾ: ಮತ್ತೆರಡು ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳ ಉದ್ಘಾಟನೆ: ವಿಶೇಷತೆಗಳೇನು?
ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (Tata Motors), ಸುಸ್ಥಿರ ಸಾರಿಗೆ ವ್ಯವವಸ್ಥೆಯನ್ನು ಕಲ್ಪಿಸುವ ಮೂಲ ಉದ್ದೇಶದಿಂದ ಇಂದು ಉತ್ತರ ಪ್ರದೇಶದ ಲಕ್ನೋ ಮತ್ತು ಛತ್ತೀಸಗಡದ ರಾಯಪುರದಲ್ಲಿ ಎರಡು ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕಗಳಾದ Re.Wi.Re (ರೀಸೈಕಲ್ ವಿತ್ ರೆಸ್ಪೆಕ್ಟ್) ಅನ್ನು ಉದ್ಘಾಟಿಸಿದೆ. ಈ ಎರಡು ಘಟಕಗಳ ಉದ್ಘಾಟನೆಯನ್ನು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ವರ್ಚುವಲ್ ಆಗಿ ನೆರವೇರಿಸಿದರು.
ಈ ಎರಡು ಘಟಕಗಳು ಜೀವಿತಾವಧಿ ಮುಗಿದ ವಾಹನಗಳನ್ನು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಸ್ಕ್ರ್ಯಾಪಿಂಗ್ ಮಾಡಲೆಂದೇ ವಿನ್ಯಾಸಗೊಂಡಿವೆ. ಈ ಘಟಕಗಳು ಎರಡು ಮತ್ತು ಮೂರು ಚಕ್ರದ ವಾಹನಗಳು ಸೇರಿದಂತೆ ಎಲ್ಲಾ ಬ್ರಾಂಡ್ ಗಳ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಸ್ಕ್ರಾಪ್ ಮಾಡುವ ಸೌಲಭ್ಯ ಹೊಂದಿವೆ.

ರಾಯಪುರದ Re.Wi.Re ಘಟಕವನ್ನು ಟಾಟಾ ಮೋಟಾರ್ಸ್‌ನ ಪಾಲುದಾರ ಸಂಸ್ಥೆಯಾದ ರಾಯಪುರ ಗ್ರೀನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ನಿರ್ವಹಿಸಲಿದೆ. ಈ ಘಟಕವು ವರ್ಷಕ್ಕೆ 25,000 ವಾಹನಗಳನ್ನು ಸುರಕ್ಷಿತವಾಗಿ ಡಿಸ್ಮ್ಯಾಂಟಲ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಲಕ್ನೋ ಘಟಕವು ವರ್ಷಕ್ಕೆ 15,000 ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಈ ಘಟಕವನ್ನು ಮೋಟೋ ಸ್ಕ್ರಾಪ್‌ಲ್ಯಾಂಡ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತದೆ.
ಈ ಹೊಸ ಘಟಕಗಳ ಮೂಲಕ ಟಾಟಾ ಮೋಟಾರ್ಸ್ ಸಂಸ್ಥೆಯು ಇದೀಗ ಜೈಪುರ, ಭುವನೇಶ್ವರ, ಸೂರತ್, ಚಂಡೀಗಢ, ದೆಹಲಿ ಎನ್‌ಸಿಆರ್, ಪುಣೆ, ಗುವಾಹಟಿ, ರಾಯಪುರ, ಲಕ್ನೋ ಮತ್ತು ಕೋಲ್ಕತ್ತಾದಲ್ಲಿ 10 ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ಹೊಂದಿದಂತಾಗಿದೆ. ಪ್ರತಿಯೊಂದು ರೀ.ವೈ.ರ್ ಘಟಕವು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದ್ದು, ಎಲ್ಲಾ ಕಾರ್ಯಾಚರಣೆಗಳು ನಿರಾಳವಾಗಿ ಮತ್ತು ಕಾಗದರಹಿತವಾಗಿ ನಡೆಯುತ್ತವೆ.

ವಾಣಿಜ್ಯ ವಾಹನಗಳು, ಎರಡು ಚಕ್ರ ಮತ್ತು ಮೂರು ಚಕ್ರದ ವಾಹನಗಳಿಗೆ ಸೆಲ್- ಟೈಪ್ ಡಿಸ್ಮ್ಯಾಂಟಲಿಂಗ್ ಮತ್ತು ಪ್ರಯಾಣಿಕ ವಾಹನಗಳಿಗೆ ಲೈನ್-ಟೈಪ್ ಡಿಸ್ಮ್ಯಾಂಟಲಿಂಗ್ ವ್ಯವಸ್ಥೆ ಇದ್ದು, ಟೈರ್ ಗಳು, ಬ್ಯಾಟರಿಗಳು, ಇಂಧನ, ಆಯಿಲ್‌ಗಳು, ದ್ರವಗಳು ಮತ್ತು ಅನಿಲಗಳ ಸುರಕ್ಷಿತ ಡಿಸ್ಮ್ಯಾಂಟಲಿಂಗ್ ಗಾಗಿ ವಿಶೇಷ ಸ್ಟೇಷನ್‌ಗಳನ್ನು ಹೊಂದಿದೆ.
ಪ್ರತೀ ವಾಹನವು ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಜವಾಬ್ದಾರಿಯುತ ಸ್ಕ್ರ್ಯಾಪಿಂಗ್ ಅಗತ್ಯತೆಗಳನ್ನು ಪೂರೈಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ನಿಖರವಾದ ದಾಖಲಾತಿ ಮತ್ತು ಡಿಸ್ಮ್ಯಾಂಟಲಿಂಗ್ ಪ್ರಕ್ರಿಯೆಗೆ ಒಳಗಾಗುತ್ತದೆ. ರಾಷ್ಟ್ರದ ವಾಹನ ಸ್ಕ್ರ್ಯಾಪೇಜ್ ನೀತಿಯ ಪ್ರಕಾರ ಎಲ್ಲಾ ಘಟಕಗಳು ಸುರಕ್ಷಿತ ವಿಲೇವಾರಿಯನ್ನು ಮಾಡುತ್ತವೆ. ರೀ.ವೈ.ರ್ ಸೌಲಭ್ಯವು ಆಟೋಮೋಟಿವ್ ಉದ್ಯಮದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಪಾಲಿಸುವ ವಿಚಾರದಲ್ಲಿ ಒಂದು ಗಮನಾರ್ಹ ಹೆಜ್ಜೆಯಾಗಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮಾತನಾಡಿ, "ಲಕ್ನೋ ಮತ್ತು ರಾಯಪುರದಲ್ಲಿ ಎರಡು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ಉದ್ಘಾಟಿಸುತ್ತಿರುವುದು ನನಗೆ ಸಂತೋಷ ತಂದಿದೆ. ಈ ಆಧುನಿಕ ಘಟಕಗಳು ರಾಷ್ಟ್ರೀಯ ವಾಹನ ಸ್ಕ್ರ್ಯಾಪೇಜ್ ನೀತಿಯಡಿ ರೂಪುಗೊಂಡಿದ್ದು, ಇದು ಸಂಸ್ಥೆಯ ಮಹತ್ವದ ಹೆಜ್ಜೆಯಾಗಿದೆ.
ರಾಷ್ಟ್ರೀಯ ವಾಹನ ಸ್ಕ್ರ್ಯಾಪೇಜ್ ನೀತಿಯು ನಾಗರಿಕರಿಗೆ ಸ್ವಚ್ಛ ಮತ್ತು ಹೆಚ್ಚು ಇಂಧನ-ಸಮರ್ಥ ವಾಹನಗಳಿಗೆ ಪರಿವರ್ತನೆ ಹೊಂದಲು ನೆರವಾಗುತ್ತದೆ. ಈ ಘಟಕಗಳು ಅನರ್ಹ ವಾಹನಗಳನ್ನು ಸುರಕ್ಷಿತವಾಗಿ ಸ್ಕ್ರಾಪ್ ಮಾಡಲು ನೆರವಾಗುತ್ತವೆ. ಅದರಲ್ಲಿನ ಅತ್ಯುತ್ತಮ ವಸ್ತುಗಳನ್ನು ವೈಜ್ಞಾನಿಕ ರೀತಿಯಲ್ಲಿ ಮರುಬಳಕೆ ಮಾಡಲು ಮರುಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಲಿವೆ.
ಸುಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ಸದಾ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್‌ನ ದೃಢ ಸಂಕಲ್ಪ ಮತ್ತು ಅವರು ಜಾಗತಿಕ ಮಾನದಂಡಗಳಿಗೆ ಹೊಂದಿಕೊಳ್ಳುವ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ರಾಷ್ಟ್ರಾದ್ಯಂತ ಸ್ಥಾಪಿಸಿರುವುದಕ್ಕಾಗಿ ಅವರನ್ನು ಶ್ಲಾಘಿಸುತ್ತೇನೆ. ಇಂತಹ ಪ್ರಗತಿಪರ ಯೋಜನೆಗಳು ವಾಹನ ಸ್ಕ್ರ್ಯಾಪೇಜ್ ಅನ್ನು ಸುಲಭಗೊಳಿಸುವ, ಸಮರ್ಥ ಗೊಳಿಸುವ ಮತ್ತು ಪರಿಣಾಮಕಾರಿಯಾಗಿಸುವ ವ್ಯವಸ್ಥೆಯನ್ನು ನಿರ್ಮಿಸಲು ಅತ್ಯಗತ್ಯವಾಗಿವೆ" ಎಂದು ಹೇಳಿದರು.
ಟಾಟಾ ಮೋಟಾರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಮಾತನಾಡಿ, ನಾವು ಈಗಾಗಲೇ ರಾಷ್ಟ್ರಾದ್ಯಂತ ಹಲವು ರೀ.ವೈ.ರ್ ಘಟಕಗಳನ್ನು ಹೊಂದಿದ್ದು, ಟಾಟಾ ಮೋಟಾರ್ಸ್ ಈಗ ವರ್ಷಕ್ಕೆ 1.75 ಲಕ್ಷಕ್ಕಿಂತ ಹೆಚ್ಚು ಜೀವನಾವಧಿ ಮುಗಿದ ವಾಹನಗಳನ್ನು ಜವಾಬ್ದಾರಿಯುತವಾಗಿ ಡಿಸ್ಮ್ಯಾಂಟಲ್ ಮಾಡಲು ಸಜ್ಜಾಗಿದೆ. ಭಾರತದಲ್ಲಿ ಸುಸ್ಥಿರ ಸಾರಿಗೆ ಮತ್ತು ವಾಹನ ಮರುಬಳಕೆ ವಿಚಾರದಲ್ಲಿ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವ ನಿತಿನ್ ಗಡ್ಕರಿಯವರಿಗೆ ಧನ್ಯವಾದಗಳು ಎಂದರು.


Click it and Unblock the Notifications








