ಇದೇ ಟಾಟಾದ ತಾಕತ್ತು.. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ 45 kWh ಮಾಡೆಲ್‌ಗೂ ಸಿಕ್ತು 5-ಸ್ಟಾರ್ ಸೇಫ್ಟಿ ರೇಟಿಂಗ್!
ಟಾಟಾ ಮೋಟಾರ್ಸ್ (Tata Motors), ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ಕೆಲವೇ ವಾರಗಳ ಹಿಂದೆ, ನೆಕ್ಸಾನ್ ಇವಿಯನ್ನು ದೊಡ್ಡ ಗಾತ್ರದ 45 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ನವೀಕರಿಸಿಯೂ ಮಾರಾಟಕ್ಕೆ ತಂದಿತ್ತು. ಸದ್ಯ, ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP), ಈ ನೆಕ್ಸಾನ್ ಮಾಡೆಲ್‌ನ್ನು ಅತ್ಯಂತ ಸೇಫ್ಟಿ ಕಾರೆಂದು ನಿರ್ಣಯಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹಳೆಯ ಮಾಡೆಲ್‌ನಂತೆಯೇ ನೂತನ ಟಾಟಾ ನೆಕ್ಸಾನ್ (Tata Nexon) 45 ಕೆಡಬ್ಲ್ಯೂಹೆಚ್ ಮಾಡೆಲ್ ಕೂಡ ಭಾರತ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 32ಕ್ಕೆ 29.86 ಅಂಕಗಳನ್ನು ಪಡೆದಿದೆ. ಅದೇ ರೀತಿಯಲ್ಲಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 44.95 ಅಂಕಗಳನ್ನು ಗಳಿಸಿದೆ.

ಇದು ಮಾತ್ರವಲ್ಲದೆ, ಈ ಕಾರಿನ ಮುಂಭಾಗವನ್ನು ತಡೆಗೋಡೆಯೊಂದಕ್ಕೆ ಗುದ್ದಿಸಿ ಸಹ ಪರೀಕ್ಷಿಸಲಾಯಿತು. ಅದರಲ್ಲಿ 16ಕ್ಕೆ 14.26 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲದೆ, ಕಾರಿನ ಎರಡು ಬದಿಗಳನ್ನು ಕೂಡ ಬೃಹದಾಕಾರದ ಗೋಡೆಗೆ ಡಿಕ್ಕಿಯೊಡೆಸಲಾಯಿತು. ಆ ಪರೀಕ್ಷೆಯಲ್ಲಿ 16ಕ್ಕೆ 15.60 ಅಂಕಗಳನ್ನು ಗಳಿಸಿತು.
ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳು: ಈ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು (30 ಕೆಡಬ್ಲ್ಯೂಹೆಚ್ & 45 ಕೆಡಬ್ಲ್ಯೂಹೆಚ್ ಮಾಡೆಲ್) ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಐಎಸ್ಒಎಫ್ಐಎಕ್ಸ್ ಚೈಲ್ಡ್ ಸೀಟ್ ಆಂಕಾರೇಜ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ರೇರ್ ಪಾಕಿಂಗ್ ಸೆನ್ಸರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಅತ್ಯುತ್ತಮ ಕಾರ್ಯಕ್ಷಮತೆ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯ 30 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 275 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 129 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 215 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಈ ಕಾರಿನ 45 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಪಡೆದಿರುವ ಮಾಡೆಲ್, ಭರ್ತಿ ಚಾರ್ಜ್‌ನಲ್ಲಿ 489 ಕಿಲೋಮೀಟರ್ ಓಡುತ್ತದೆ. ಇದರಲ್ಲಿ ಉಪಯೋಗಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್, 145 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 215 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಭರ್ಜರಿ ವೈಶಿಷ್ಟ್ಯಗಳು: ನೂತನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋ ಎಸಿ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಇದರಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.
ಬೆಲೆ ಎಷ್ಟಿದೆ: ಟಾಟಾ ನೆಕ್ಸಾನ್ ಇವಿ ಕೊಂಚ ಮಟ್ಟಿಗೆ ಬಜೆಟ್ ಬೆಲೆಯಲ್ಲಿಯೇ ಖರೀದಿಗೆ ದೊರೆಯುತ್ತದೆ ಎಂದು ಹೇಳಬಹುದು. ಇದು ಕನಿಷ್ಠ ರೂ.12.49 ಲಕ್ಷ ಹಾಗೂ ಗರಿಷ್ಠ ರೂ.17.19 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಈ ಕಾರಿಗೆ ಎಂಜಿ ವಿಂಡ್ಸರ್ ಇವಿ (MG Windsor EV) ನೇರವಾದ ಪ್ರತಿಸ್ಪರ್ಧಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications