Tata Nexon EV: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮತ್ತಷ್ಟು ಸುರಕ್ಷಿತ.. ADAS ಫೀಚರ್‌ನೊಂದಿಗೆ ಬಿಡುಗಡೆ.. ಬೆಲೆ ಎಷ್ಟು?
ಟಾಟಾ ಮೋಟಾರ್ಸ್ ಒಡೆತನದ ಟಾಟಾ.ಇವಿ (Tata.ev), ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿ ಎಂದೇ ಹೆಸರುವಾಸಿಯಾಗಿರುವ 'ನೆಕ್ಸಾನ್ ಇವಿ'ಯನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ಸಖತ್ ಸ್ಟೈಲಿಶ್ ಆಗಿದ್ದು, ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇದೇ ಕಾರು ಸುರಕ್ಷತೆಗಾಗಿ ಗ್ಲೋಬಲ್ ಎನ್‌ಸಿಎಪಿ (Global NCAP) ಮತ್ತು ಭಾರತ್ ಎನ್‌ಸಿಎಪಿ (Bharat NCAP) ಪರೀಕ್ಷೆಯಲ್ಲಿ 5-ಸ್ಟಾರ್ ರೇಟಿಂಗ್‌ನ್ನು ಪಡೆದಿದೆ.
ಸದ್ಯ, ಹೊಸ ಟಾಟಾ ನೆಕ್ಸಾನ್ (Tata Nexon) ಎಲೆಕ್ಟ್ರಿಕ್ ಎಸ್‌ಯುವಿಯನ್ನು ನವೀಕರಿಸಲಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಸುರಕ್ಷತಾ ವೈಶಿಷ್ಟ್ಯದೊಂದಿಗೆ ಬಿಡುಗಡೆಗೊಳಿಸಲಾಗಿದೆ. ಈ ಎಡಿಎಎಸ್ ಪ್ಯಾಕೇಜ್, 45 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿರುವ 'ಎಂಪವರ್ಡ್ ಎ ಪ್ಲಸ್' ರೂಪಾಂತರದೊಂದಿಗೆ (ವೇರಿಯೆಂಟ್) ಲಭ್ಯವಿದೆ. ರೂ.17.29 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹೆಚ್ಚುವರಿಯಾಗಿ ರೇರ್ ವಿಡೋ ಸನ್‌ಶೇಡ್ & ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಎಡಿಎಎಸ್ ಪ್ಯಾಕೇಜ್ ಎಂಬುದು ಹತ್ತಾರು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿರುವ ಗುಚ್ಛವಾಗಿದೆ. ಬಹುಮುಖ್ಯವಾಗಿ ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್, ಲೈನ್ ಸೆಂಟರಿಂಗ್ ಸಿಸ್ಟಮ್, ಲೈನ್ ಡಿಪಾರ್ಚರ್ ವಾರ್ನಿಂಗ್, ಲೈನ್ ಕೀಪ್ ಅಸಿಸ್ಟ್, ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್ ಹಾಗೂ ಹೈ - ಬೀಮ್ ಅಸಿಸ್ಟ್‌ನ್ನು ಒಳಗೊಂಡಿದೆ.
ಡಾರ್ಕ್ & ರೆಡ್ ಡಾರ್ಕ್ ಎಡಿಷನ್‌ಗಳು ಮಾರಾಟಕ್ಕೆ:
ಇದರೊಂದಿಗೆ ಟಾಟಾ ಕಂಪನಿಯು ನೆಕ್ಸಾನ್ ಇವಿಗಾಗಿ ಡಾರ್ಕ್ & ರೆಡ್ ಡಾರ್ಕ್ ಎಡಿಷನ್‌ನ್ನು ಪರಿಚಯಿಸಿದೆ. ಈ ಹೊಸ ಎಡಿಷನ್‌ಗಳು ಸಹ 45 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಪಡೆದಿರುವ 'ಎಂಪವರ್ಡ್ ಎ ಪ್ಲಸ್' ರೂಪಾಂತರದೊಂದಿಗೆ ಗ್ರಾಹಕರ ಖರೀದಿಗೆ ದೊರೆಯಲಿವೆ. ರೂ.17.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿವೆ.
ನೂತನ ನೆಕ್ಸಾನ್ ಇವಿಯ ಡಾರ್ಕ್ ಹಾಗೂ ರೆಡ್ ಡಾರ್ಕ್ ಎಡಿಷನ್‌ಗಳು ಹೊರಭಾಗದಲ್ಲಿ ಆಲ್-ಬ್ಲ್ಯಾಕ್ ಪೈಂಟ್ ಸ್ಕೀಮ್‌ನ್ನು ಪಡೆದಿವೆ. ಒಳಭಾಗಕ್ಕೆ ಬಂದರೆ, ಡಾರ್ಕ್ ಎಡಿಷನ್ ಆಲ್-ಬ್ಲ್ಯಾಕ್ ಪೈಂಟ್ ಥೀಮ್ ಹಾಗೂ ರೆಡ್ ಡಾರ್ಕ್ ಎಡಿಷನ್ ಬ್ಲ್ಯಾಕ್-ರೆಡ್ ಥೀಮ್‌ನ್ನು ಒಳಗೊಂಡಿದೆ.
ಕಾರ್ಯಕ್ಷಮತೆ:
ಇವೆಲ್ಲ ರೂಪಾಂತರಗಳು 45 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದಿವೆ. ಸಂಪೂರ್ಣ ಚಾರ್ಜ್‌ನಲ್ಲಿ 489 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತವೆ. ಶಕ್ತಿಯುತವಾದ ಎಲೆಕ್ಟ್ರಿಕ್ ಮೋಟಾರ್‌ನ್ನು ಹೊಂದಿವೆ. 143 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 215 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಕಾರಿನ ಬ್ಯಾಟರಿಯು 120 ಕೆಡಬ್ಲ್ಯೂ ಡಿಸಿ ಫಾಸ್ಟ್ ಚಾರ್ಜರ್ ಬಳಕೆಯಲ್ಲಿ 40 ನಿಮಿಷಗಳಲ್ಲಿ ಶೇಕಡ 20 ರಿಂದ 80% ಚಾರ್ಜ್ ಆಗುತ್ತದೆ.
ಆಸನ ಆಯ್ಕೆ & ಬೂಟ್ ಸ್ಪೇಸ್:
ನೆಕ್ಸಾನ್ ಇವಿಯ ಈ ಹೊಸ ರೂಪಾಂತರಗಳು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 350 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇನ್‌ನ್ನು ತನ್ನಾದಾಗಿಸಿಕೊಂಡಿವೆ.
ವೈಶಿಷ್ಟ್ಯಗಳು:
ಇವು ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿವೆ. 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ 9 ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋ ಎಸಿ, ಕ್ರೂಸ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಹಾಗೂ ಸನ್‌ರೂಫ್‌ನ್ನು ಹೊಂದಿವೆ.
ಸುರಕ್ಷತಾ ವೈಶಿಷ್ಟ್ಯಗಳು:
ಈ ರೂಪಾಂತರಗಳು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾನ್ನು ಪಡಿದಿವೆ.


Click it and Unblock the Notifications








