ಟಾಪ್ 5 ಹೊಸ ಕಾರುಗಳ ಬಿಡುಗಡೆ ಸನ್ನಿಹಿತ.. ಟಾಟಾ, ಮಾರುತಿ ವಿರುದ್ಧ ತೊಡೆ ತಟ್ಟಿದ ವಿನ್‌ಫಾಸ್ಟ್!
ವಿಶ್ವದಲ್ಲೇ ಭಾರತವು ಸಹ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಈ 2025 ಹಲವು ವಾಹನ ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಾಗಿದ್ದು, ವಿವಿಧ ಹೊಸ ಕಾರುಗಳನ್ನು ಮಾರಾಟಕ್ಕೆ ತರಲು ಸಿದ್ಧವಾಗಿವೆ. ಆದರಲ್ಲೂ ಟಾಟಾ ಸಿಯೆರಾ, ಮಾರುತಿ ಸುಜುಕಿ ಇ ವಿಟಾರಾ, ರೆನಾಲ್ಟ್ ಕಿಗರ್ ಫೇಸ್‌ಲಿಫ್ಟ್, ವಿನ್‌ಫಾಸ್ಟ್‌ನ ವಿಎಫ್6 ಹಾಗೂ ವಿಎಫ್7 ಕಾರುಗಳು ಬಿಡುಗಡೆಗೊಳ್ಳಲು ಹಣಿಯಾಗಿವೆ. ಇವುಗಳು ಒಂದಕ್ಕಿಂತ ಒಂದು ಅದ್ಬುತವಾಗಿವೆ. ನಾವಿಲ್ಲಿ ಈ ಕಾರುಗಳ ನಿರೀಕ್ಷಿತ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
ಟಾಟಾ ಸಿಯೆರಾ (Tata Sierra):
ಇದೊಂದು ಎಸ್‌ಯುವಿಯಾಗಿದೆ. ಇಂಧನ (ಪೆಟ್ರೋಲ್/ಡೀಸೆಲ್) & ಎಲೆಕ್ಟ್ರಿಕ್ ಚಾಲಿತ ರೂಪದಲ್ಲಿ ಮಾರಾಟಕ್ಕೆ ಬರಲಿದೆ. ಈ ಅಕ್ಟೋಬರ್‌ನಲ್ಲಿ ಅಂದರೆ ದಸರಾ ಹಬ್ಬದ ಸಂದರ್ಭದಲ್ಲಿ ಇಂಧನ ಚಾಲಿತ ಮಾಡೆಲ್‌ನ್ನು ಪರಿಚಯಿಸಬಹುದು ಎಂದು ಅಂದಾಜಿಸಲಾಗಿದೆ. ರೂ.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿರುವ ಸಾಧ್ಯತೆಯಿದೆ. ಹಾಗೆಯೇ 2026ರಲ್ಲಿ ಎಲೆಕ್ಟ್ರಿಕ್ ಚಾಲಿತ ಮಾಡೆಲ್ ಬಿಡುಗಡೆಯಾಗಬಹುದು ಎನ್ನಲಾಗಿದ್ದು, ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಹೊಸ ಸಿಯೆರಾ ಕಾರಿನ ಇಂಧನ ಚಾಲಿತ ಮಾಡೆಲ್ 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿರಲಿದೆ. ಎಲೆಕ್ಟ್ರಿಕ್ ಚಾಲಿತ ಮಾಡೆಲ್ 65 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿರಲಿದ್ದು, ಪೂರ್ತಿ ಚಾರ್ಜ್‌ನಲ್ಲಿ 538 ರಿಂದ 627 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಬಹುದು ಎಂದು ಹೇಳಲಾಗಿದೆ. 5 ಆಸನಗಳನ್ನು ಹೊಂದಿರಲಿದ್ದು, 14.5-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ.
ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara):
ಈ ಎಲೆಕ್ಟ್ರಿಕ್ ಎಸ್‌ಯುವಿಯು ಇದೇ ಸೆಪ್ಟೆಂಬರ್ 3 ರಂದು ಬಿಡುಗಡೆಯಾಗಲಿದೆ. ರೂ.17 ಲಕ್ಷದಿಂದ ರೂ.22.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರುವ ಎಲ್ಲ ಲಕ್ಷಣಗಳಿವೆ. ಇದು 49 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 61 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡಬಹುದು ಎಂದು ಹೇಳಲಾಗಿದೆ.

ನೂತನ ಇ-ವಿಟಾರಾ ಕುರಿತ ಒಂದಷ್ಟು ವಿವರಗಳು ಕೂಡ ಬಹಿರಂಗಗೊಂಡಿವೆ. ಇದು ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ನೆಕ್ಸಾ ಬ್ಲೂ, ಗ್ರ್ಯಾಂಡಿಯರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಬ್ಲ್ಯೂಯಿಸ್ ಬ್ಲ್ಯಾಕ್ ಮತ್ತು ಒಪ್ಯುಲೆಂಟ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ರೆನಾಲ್ಟ್ ಕಿಗರ್ ಫೇಸ್‌ಲಿಫ್ಟ್ (Renault Kiger Facelift):
ಇದೊಂದು ಎಸ್‌ಯುವಿಯಾಗಿದೆ. ಆಗಸ್ಟ್ 24ರಂದು ಮಾರಾಟಕ್ಕೆ ಬರಲಿದೆ. ರೂ.6.50 ಲಕ್ಷದಿಂದ ರೂ.11.23 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರಬಹುದು ಎನ್ನಲಾಗಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಹೊಂದಿರಲಿದೆ. 20 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ಹೊಸ ರೆನಾಲ್ಟ್ ಕಿಗರ್ ಫೇಸ್‌ಲಿಫ್ಟ್ 5 ಆಸನಗಳನ್ನು ಪಡೆದಿರಲಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿಲಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ.
ವಿನ್‌ಫಾಸ್ಟ್ ವಿಎಫ್7 (Vinfast VF7):
ಈ ಎಲೆಕ್ಟ್ರಿಕ್ ಎಸ್‌ಯುವಿಯು ಇದೇ ಸೆಪ್ಟೆಂಬರ್ ತಿಂಗಳಲ್ಲಿಯೇ ಬಿಡುಗಡೆಯಾಗಲಿದೆ. ರೂ.23 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ) ದರ ದರದಲ್ಲಿ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಖರೀದಿಗೂ ಲಭ್ಯವಿದೆ. 75.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 431 ರಿಂದ 450 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 5 ಆಸನಗಳನ್ನು ಪಡೆದಿದೆ. 15-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ವಿನ್‌ಫಾಸ್ಟ್ ವಿಎಫ್6 (VinFast VF6):
ಇದು ಕೂಡ ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, ಸೆಪ್ಟೆಂಬರ್‌ನಲ್ಲಿಯೇ ಮಾರಾಟಕ್ಕೆ ಬರಲಿದೆ. ರೂ.18 ಲಕ್ಷದಿಂದ ರೂ.24 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಕಾರು ವಿದೇಶದಲ್ಲೂ ಸಿಗಲಿದ್ದು, 59.6 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 381 ರಿಂದ 399 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಿತ್ತದೆ. 5 ಆಸನಗಳನ್ನು ಒಳಗೊಂಡಿದ್ದು, 12.9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಒಟ್ಟಾರೆಯಾಗಿ ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್ ಕೂಡ ಪ್ರಮುಖ ವಾಹನ ತಯಾರಕ ಕಂಪನಿಗಳಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಸಿದ್ದವಾಗುತ್ತಿದೆ.


Click it and Unblock the Notifications