ಹೊಸ ಅಪ್‌ಡೇಟ್ ಪಡೆದ ಎರಡು ಹ್ಯಾಚ್‌ಬ್ಯಾಕ್‌ಗಳು: ಅಗ್ಗದ ಬೆಲೆಯಲ್ಲಿ ಯಾವುದು ಬೆಸ್ಟ್?
ಭಾರತೀಯ ಆಟೋ ಉದ್ಯಮದಲ್ಲಿ ಪ್ರಮುಖ ವಿಭಾಗವಾದ 'ಹ್ಯಾಚ್‌ಬ್ಯಾಕ್' ಪ್ರತಿಯೊಂದು ಬ್ರಾಂಡ್‌ನ ಮೂಲಾಧಾರವಾಗಿದೆ. ಈ ಪುಟ್ಟ ಕಾರುಗಳು ಅಗ್ಗದ ಬೆಲೆಯಲ್ಲಿ ಮಧ್ಯಮ ವರ್ಗದವರ ಕಾರು ಖರೀದಿಸುವ ಕನಸನ್ನು ನನಸು ಮಾಡುತ್ತವೆ. ಈ ವಿಭಾಗದಲ್ಲಿ ಪ್ರಮುಖ ಕಾರುಗಳಾಗಿ ಗುರ್ತಿಸಿಕೊಂಡಿರುವ ಟಾಟಾ ಟಿಯಾಗೋ ಹಾಗೂ ಮಾರುತಿ ಸುಜುಕಿ ಸೆಲೆರಿಯೋ ಸದ್ಯ ಹೊಸ ಅಪ್‌ಡೇಟ್‌ಗಳೊಂದಿಗೆ ಇತ್ತೀಚೆಗೆ ಬಿಡುಗಡೆಯಾಗಿವೆ. 2025 ರ ಹೊಸ ಮಾಡಲ್‌ಗಳನ್ನು ನೀವು ಖರೀದಿಸಲು ಬಯಸಿದರೆ ಯಾವೆಲ್ಲಾ ಅಪ್‌ಡೇಟ್‌ಗಳನ್ನು ಪಡೆದಿವೆ ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.
ಟಾಟಾ ಟಿಯಾಗೋ: ಟಾಟಾ ಟಿಯಾಗೋ (Tata Tiago) ಈಗ ಹೊಸ ವೈಶಿಷ್ಟ್ಯಗಳ ಪಟ್ಟಿ ಮತ್ತು ಹೊಸ ಬಣ್ಣಗಳನ್ನು ಪಡೆದಿದೆ. ಆದರೆ ಯಾವುದೇ ಯಾಂತ್ರಿಕ ಬದಲಾವಣೆಗಳಾಗಿಲ್ಲ, ಅದೇ ಪೆಟ್ರೋಲ್, ಸಿಎನ್‌ಜಿ ಮತ್ತು ಇವಿ ಆಯ್ಕೆಗಳೊಂದಿಗೆ ಬರುತ್ತದೆ. 2025ರಲ್ಲಿ ಟಾಟಾ ಟಿಯಾಗೊ ಪಡೆದುಕೊಂಡಿರುವ ನವೀಕರಣಗಳು ಈ ಕೆಳಗಿನಂತಿವೆ.

ಬಾಹ್ಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ, ಹೊಸ ಬಣ್ಣದ ಸ್ಕೀಮ್‌ಗಳನ್ನು ಸೇರಿಸಲಾಗಿದೆ. ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಫ್ರಂಟ್ ಫಾಗ್ ಲ್ಯಾಂಪ್‌ಗಳು, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ರಿಯರ್ ವೈಪರ್ ಅನ್ನು ಸೇರಿಸಲಾಗಿದೆ. ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂಗಾಗಿ 10 ಇಂಚಿನ ಫ್ಲೋಟಿಂಗ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಹೊಸ ಡಿಜಿಟಲ್ ಕ್ಲಸ್ಟರ್ ನೀಡಲಾಗಿದೆ.
ಇವಿಷ್ಟೇ ಅಲ್ಲದೇ ಕ್ರೂಸ್ ಕಂಟ್ರೋಲ್, TPMS, USB-C ಚಾರ್ಜಿಂಗ್ ಪೋರ್ಟ್‌ಗಳು, ಕ್ಲೈಮೆಟ್ ಕಂಟ್ರೋಲ್, ಸೀಟ್ ಬ್ಯಾಕ್ ಪಾಕೆಟ್, ಪವರ್ ಮಿರರ್‌ಗಳು (NRG), ರಿಮೋಟ್ ಓಪನಿಂಗ್ ಟೈಲ್ ಗೇಟ್ (EV) ನೀಡಲಾಗಿದೆ. ಸ್ಟ್ಯಾಂಡರ್ಡ್ ಪೆಟ್ರೋಲ್ ಶ್ರೇಣಿಯ ಬೆಲೆಗಳು ರೂ.5 ಲಕ್ಷದಿಂದ ಪ್ರಾರಂಭವಾಗಿ ರೂ.7.29 (ಎಕ್ಸ್ ಶೋರೂಂ) ಲಕ್ಷಗಳಾಗಿದೆ.

ಸಿಎನ್‌ಜಿ ಶ್ರೇಣಿಯ ಬೆಲೆಯು ರೂ.6 ಲಕ್ಷದಿಂದ ಪ್ರಾರಂಭವಾಗಿ ರೂ.8.74 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಅಂತಿಮವಾಗಿ, ಇವಿ ಶ್ರೇಣಿಯು 7.99 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 11.14 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ. ಈಗ ಟಿಯಾಗೊ ತನ್ನ ಎಲ್ಲಾ ಪ್ರತಿಸ್ಪರ್ಧಿಗಳಿಗಿಂತ ಗಮನಾರ್ಹ ಅಪ್‌ಡೇಟ್‌ಗಳನ್ನು ಪಡೆದು ವಿಭಾಗದಲ್ಲಿ ಹೆಚ್ಚು ವೈಶಿಷ್ಟ್ಯಗಳಿಂದ ತುಂಬಿದ ಕಾರಾಗಿದೆ.
ಮಾರುತಿ ಸೆಲೆರಿಯೋ: ಮಾರುತಿ ಸುಜುಕಿ (Maruti suzuki) ಕಂಪನಿಯು ತನ್ನ ಸೆಲೆರಿಯೊ ಹ್ಯಾಚ್ ಬ್ಯಾಕ್‌ಗಾಗಿ ಎರಡು ಪ್ರಮುಖ ಅಪ್‌ಡೇಟ್‌ಗಳನ್ನು ಹೊರತಂದಿದೆ. ಈ ಹಿಂದೆ ಎರಡು ಏರ್ ಬ್ಯಾಗ್‌ಗಳೊಂದಿಗೆ ನೀಡಲಾಗುತ್ತಿದ್ದ ಮಾರುತಿ ಸೆಲೆರಿಯೊ (Maruti Celerio) ಈಗ ಆರು ಏರ್ ಬ್ಯಾಗ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಕಾರು ತಯಾರಕರು ಕಾರಿನ ಸುರಕ್ಷತೆಯನ್ನು ಹೆಚ್ಚಸಿ ಬೆಲೆಯನ್ನು ಏರಿಸಿದ್ದಾರೆ.

ಈ ಪುಟ್ಟ ಕಾರಿನಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 313 ಲೀಟರ್‌ನ ಬೂಟ್ ಸ್ಪೇಸ್‌ನ್ನು ನೀಡಲಾಗಿದೆ. ಇದರ ಜೊತೆಗೆ ಹೊಸ ಸೆಲೆರಿಯೊ ಹ್ಯಾಚ್‌ಬ್ಯಾಕ್‌ನಲ್ಲಿ 5 ಜನರು ಸುಲಭವಾಗಿ ಪ್ರಯಾಣಿಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (7-ಇಂಚು), ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್, ಕೀಲೆಸ್ ಎಂಟ್ರಿ ಮತ್ತು ಮ್ಯಾನುವಲ್ ಎಸಿಯಂತಹ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಬೆಲೆ ಏರಿಕೆಯ ವಿಷಯಕ್ಕೆ ಬಂದರೆ, ಸೆಲೆರಿಯೊ 32,500 ರೂ.ಗಳವರೆಗೆ ದುಬಾರಿಯಾಗಿದೆ. ಟಾಪ್-ಸ್ಪೆಕ್ ZXI+ ಎಎಂಟಿ ರೂಪಾಂತರಕ್ಕೆ ಇದು ಅನ್ವಯಿಸುತ್ತದೆ. ಎಂಟ್ರಿ ಲೆವೆಲ್ LXI (MT), ZXI (MT) ಮತ್ತು ZXI+ (MT) ವೇರಿಯೆಂಟ್‌ಗಳು ಈಗಿರುವ ಬೆಲೆಗಳಿಗಿಂತ ತಲಾ 27,500 ರೂ.ಗಳ ಏರಿಕೆಯನ್ನು ಪಡೆದಿವೆ.
ಅದೇ ಸಮಯದಲ್ಲಿ, ಸೆಲೆರಿಯೊದ VXI (AMT) ರೂಪಾಂತರವು 21,000 ರೂ.ಗಳ ಬೆಲೆ ಏರಿಕೆ, VXI (MT) ಮತ್ತು VXI CNG (MT) ತಲಾ 16,000 ರೂ.ಗಳ ಏಕರೂಪದ ಹೆಚ್ಚಳವನ್ನು ಪಡೆದಿವೆ. ವಿಶೇಷವೆಂದರೆ, ZXI AMT ರೂಪಾಂತರದ ಬೆಲೆಗಳು ಬದಲಾಗದೆ ಉಳಿದಿವೆ. ಸದ್ಯ ಮಾರುತಿ ಸೆಲೆರಿಯೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.64 ಲಕ್ಷದಿಂದ ರೂ.7.37 ಲಕ್ಷಗಳಾಗಿದೆ.


Click it and Unblock the Notifications