Tesla: ಅಬ್ಬರ ಶುರು.. ನಾಳೆ ಭಾರತದಲ್ಲಿ ಟೆಸ್ಲಾದ ಮೊದಲ ಶೋರೂಂ ಶುಭಾರಂಭ, Model Y ಕಾರು ಬಿಡುಗಡೆ?
ವಿಶ್ವದ ನಂಬರ್ 1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla) ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿದ್ದು, ವಿವಿಧ ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಹಾಗೂ ಸೈಬರ್‌ಟ್ರಕ್ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅಂತಿಮವಾಗಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಹಣಿಯಾಗುತ್ತಿದೆ.
ನಾಳೆ (ಜುಲೈ 15) ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಟೆಸ್ಲಾ ಕಂಪನಿಯು ಅಧಿಕೃತವಾಗಿ ದೇಶದ ಮೊದಲ ಶೋರೂಂನ್ನು ಲೋಕಾರ್ಪಣೆಗೊಳಿಸಿದೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸದ್ಯ ಭಾರತದಲ್ಲಿ ಯಾವುದೇ ತಯಾರಿಕಾ ಘಟಕವನ್ನು ಹೊಂದಿಲ್ಲ. ಬಹುಶಃ ಚೀನಾದಿಂದ ಆಮದು ಮಾಡಿಕೊಂಡ ಕಾರುಗಳನ್ನು ದೇಶೀಯವಾಗಿ ಮಾರಾಟ ಮಾಡಲಿದೆ ಎಂದು ವರದಿಯಾಗಿದೆ.

ಶೋರೂಂ ಶುಭಾರಂಭ ಮಾಡುತ್ತಿರುವ ಹಿನ್ನೆಲೆ, ಟೆಸ್ಲಾ ಕಂಪನಿಯು ಜನವರಿಯಿಂದ ಜೂನ್ ತಿಂಗಳವರೆಗೆ ಭಾರತಕ್ಕೆ 1 ಮಿಲಿಯನ್ ಡಾಲರ್ ಮೌಲ್ಯದ ಕಾರುಗಳು, ಚಾರ್ಜರ್‌ಗಳು ಹಾಗೂ ಅಕ್ಸೆಸೊರಿಗಳನ್ನು ಆಮದು ಮಾಡಿಕೊಂಡಿದೆ ಎಂಬ ವಿವರಗಳು ಲಭ್ಯವಾಗಿವೆ. ಟೆಸ್ಲಾ, ಮುಂಬೈ ಬಳಿಕ ನವದೆಹಲಿಯಲ್ಲಿಯೂ ನೂತನ ಶೋರೂಂನ್ನು ತೆರಯಲು ಉದ್ದೇಶಿಸಿದೆ ಎನ್ನಲಾಗಿದೆ.
ನಾಳೆಯೇ ಟೆಸ್ಲಾ ಮಾಡೆಲ್ ವೈ (Tesla Model Y) ಬಿಡುಗಡೆ ಸಾಧ್ಯತೆ:
ಈ ಎಲೆಕ್ಟ್ರಿಕ್ ಎಸ್‌ಯುವಿ ರೂ.50 ಲಕ್ಷದಿಂದ ರೂ.75 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ಇದೇ 'ಮಾಡೆಲ್ ವೈ'ನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸಲಾಗುತ್ತದೆ. ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿರಲಿದ್ದು, ಅದು ನೋಡುಗರನ್ನು ಸೆಳೆಯುವಂತಿದೆ. ಫುಲ್ ಎಲ್ಇಡಿ ಲೈಟಿಂಗ್ & ಕನೆಕ್ಟ್ಡ್ ಟೈಲ್‌ಲ್ಯಾಂಪ್‌ನ್ನು ಹೊಂದಿದೆ.
ನೂತನ ಮಾಡೆಲ್ ವೈ ಎಲೆಕ್ಟ್ರಿಕ್ ಎಸ್‌ಯುವಿ ಪರ್ಲ್ ವೈಟ್, ಸ್ಟೆಲ್ತ್ ಗ್ರೇ, ಡೀಪ್ ಬ್ಲೂ ಮೆಟಾಲಿಕ್, ಅಲ್ಟ್ರಾ ರೆಡ್, ಕ್ವಿಕ್‌ಸಿಲ್ವರ್ ಹಾಗೂ ಡೈಮಂಡ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. ಇದು 4,797 ಎಂಎಂ ಉದ್ದ, 1,982 ಎಂಎಂ ಅಗಲ ಹಾಗೂ 1,624 ಎಂಎಂ ಎತ್ತರವು ಇದೆ. 167 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 19 - ಇಂಚಿನ ವೀಲ್‌ಗಳನ್ನು ಒಳಗೊಂಡಿದೆ.
ಹೊಸ ಮಾಡೆಲ್ ವೈ ಕಾರು ದೊಡ್ಡ ಗಾತ್ರದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದುಕೊಂಡಿದೆ. ಇದರ ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಮಾಡೆಲ್, ಭರ್ತಿ ಚಾರ್ಜ್‌ನಲ್ಲಿ 574 ಕಿ.ಮೀವರೆಗೆ ಓಡುತ್ತದೆ. ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ಮಾಡೆಲ್ ಪೂರ್ತಿ ಚಾರ್ಜ್‌ನಲ್ಲಿ 526 ಕಿ.ಮೀವರೆಗೆ ಕ್ರಮಿಸುತ್ತದೆ. 200 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.
ಈ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಇದರ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದೆ. 15.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಪೈಲಟ್ ಮತ್ತು ಓವರ್-ದಿ-ಏರ್ ಅಪ್ಡೇಟ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಟೆಸ್ಲಾ ಮಾಡೆಲ್ 3 (Tesla Model 3) ಸಹ ಮಾರಾಟಕ್ಕೆ ಬರಲಿದೆ:
ಇದೊಂದು ಸೆಡಾನ್ ಆಗಿದ್ದು, 'ಮಾಡೆಲ್ ವೈ' ಬಳಿಕ ಬಿಡುಗಡೆಯಾಗಲಿದೆ. ರೂ.70 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿರುವ ನೀರಿಕ್ಷೆಯಿದೆ. ಬೃಹತ್ ಗಾತ್ರದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 511 ರಿಂದ 701 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 15.4-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರಿನಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದೆ.


Click it and Unblock the Notifications