ಪ್ರಮುಖ 10 ಕಾರುಗಳ ಮಾರಾಟ ಪಟ್ಟಿ.. ಪ್ರಾಬಲ್ಯ ಸಾಧಿಸಿದ ಮಾರುತಿ, ಆದರೂ ಹ್ಯುಂಡೈನ ಈ ಕಾರು ನಂ.1 ಗೊತ್ತಾ?
ಭಾರತವು ವಿಶ್ವದಲ್ಲೇ ಅತಿದೊಡ್ಡ ವಾಹನ ಮಾರುಕಟ್ಟೆಯನ್ನು ಹೊಂದಿದೆ. ಪ್ರತಿ ತಿಂಗಳು ಸಾವಿರಾರು ಕಾರುಗಳು ಮಾರಾಟವಾಗುತ್ತಿರುತ್ತವೆ. ಅದಕ್ಕೆ ಈ ಏಪ್ರಿಲ್ ತಿಂಗಳು ಕೂಡ ಹೊರತಾಗಿಲ್ಲ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಅತಿ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ವರದಿ ಪ್ರಕಟಗೊಂಡಿದ್ದು, ಎಂದಿನಂತೆ ಮಾರುತಿ ಸುಜುಕಿ ಕಂಪನಿಯು ತನ್ನ ಪಾಬಲ್ಯವನ್ನು ಮುಂದುವರಿಸಿದೆ. ಆದರೂ ಹ್ಯುಂಡೈ ಕಂಪನಿಯ ಈ ಕಾರು ಮೊದಲ ಸ್ಥಾನದಲ್ಲಿದೆ. ಹಾಗೆಯೇ ಟಾಟಾ ಹಾಗೂ ಮಹೀಂದ್ರಾ ಕಾರುಗಳು ಸಹ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿವೆ.
ಮೊದಲ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ (Hyundai Creta) ಎಸ್‌ಯುವಿ ಇದ್ದು, ಬರೋಬ್ಬರಿ 17,016 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಈ ಕಾರು ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದ್ದು, ಗ್ರಾಹಕರು ಕೂಡ ಸುಲಭವಾಗಿ ಖರೀದಿ ಮಾಡಬಹುದು. ಕನಿಷ್ಠ ರೂ.11 ಲಕ್ಷ ಹಾಗೂ ಗರಿಷ್ಠ ರೂ.20 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ.

ಈ ಕ್ರೆಟಾ ಎಸ್‌ಯುವಿ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 17 ರಿಂದ 21 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಇದ್ದು, ಸರಿ ಸುಮಾರು 16,996 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಕಾರು ಖರೀದಿದಾರರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತದೆ. ಇದು ರೂ.6.84 ಲಕ್ಷದಿಂದ ರೂ.10.19 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ.

ನೂತನ ಡಿಜೈರ್ ಸೆಡಾನ್ ಆಗಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 24.79 ರಿಂದ 33.73 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಆಸನಗಳಿವೆ. 7-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಸನ್‌ರೂಫ್ ಹಾಗೂ ಆಟೋ ಎಸಿ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ಪಡೆದಿದೆ.
ಮೂರನೇ ಸ್ಥಾನದಲ್ಲಿ ಮಾರುತಿ ಸುಜುಕಿ ಬ್ರೆಜಾ (Maruti Suzuki Brezza) ಎಸ್‌ಯುವಿ ಇದ್ದು, ಒಟ್ಟು 16,971 ಯುನಿಟ್ ಕಾರುಗಳನ್ನು ಮಾರಾಟಗೊಳಿಸಲಾಗಿದೆ. ಈ ಕಾರು ಭಾರೀ ಕಡಿಮೆ ಬೆಲೆಯಲ್ಲಿ ಸಿಗಲಿದ್ದು, ದೇಶೀಯ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ಇದು ರೂ.8 ಲಕ್ಷದಿಂದ ರೂ.14 ಲಕ್ಷವರೆಗೆ ಎಕ್ಸ್-ಶೋರೂಂ ದರವನ್ನು ಹೊಂದಿದೆ.

ಈ ಕಾರು 1.5-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 17.38 ರಿಂದ 25.51 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.
ನಾಲ್ಕನೇ ಸ್ಥಾನದಲ್ಲಿ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯಿದೆ. ಬರೋಬ್ಬರಿ 15,780 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದು ಫ್ಯಾಮಿಲಿ ಕಾರಾಗಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಈ ಕಾರು ರೂ.8.96 ಲಕ್ಷದಿಂದ ರೂ.13.25 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ.

ಹೊಸ ಮಾರುತಿ ಎರ್ಟಿಗಾ ಕಾರು 1.5-ಲೀಟರ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 20.3 ರಿಂದ 26.11 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 7 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್, ಕ್ರೂಸ್ ಕಂಟ್ರೋಲ್ ಹಾಗೂ ಆಟೋ ಎಸಿಯಂತಹ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಐದನೇ ಸ್ಥಾನದಲ್ಲಿ ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಎಸ್‌ಯುವಿಯಿದೆ. ಒಟ್ಟು 15,534 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇದು ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಎಂಬ ಎರಡು ವಿಧದಲ್ಲಿ ಖರೀದಿ ದೊರೆಯಲಿದ್ದು, ತುಂಬು ಕುಟುಂಬ ದೂರದ ಊರುಗಳಿಗೆ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು.

ಮಹೀಂದ್ರಾ ಸ್ಕಾರ್ಪಿಯೋ ಎನ್ ರೂ.14 ಲಕ್ಷದಿಂದ ರೂ.25 ಲಕ್ಷವರೆಗೆ ಎಕ್ಸ್-ಶೋರೂಂ ದರವನ್ನು ಪಡೆದಿದೆ. 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 12.12 ರಿಂದ 15.94 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಈ ಕಾರು 6/ 7 ಆಸನಗಳನ್ನು ಹೊಂದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಕೂಡ ಖರೀದಿ ಲಭ್ಯವಿದೆ. ರೂ.13.62 ಲಕ್ಷದಿಂದ ರೂ.17.50 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. 2.2-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 16 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಆರನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿ ಇದ್ದು, ಬರೋಬ್ಬರಿ 15,457 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಕಾರು ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ರೂಪದಲ್ಲಿ ಖರೀದಿಗೆ ದೊರೆಯುತ್ತದೆ. ಸಾಮಾನ್ಯ ನೆಕ್ಸಾನ್ ಕನಿಷ್ಠ ರೂ.8 ಲಕ್ಷ ಮತ್ತು ಗರಿಷ್ಠ ರೂ.15.60 ಲಕ್ಷ ಎಕ್ಸ್-ಶೋರೂಂ ದರವನ್ನು ಹೊಂದಿದೆ.
ಟಾಟಾ ನೆಕ್ಸಾನ್ ಇವಿಯು ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಇದು ರೂ.12.49 ಲಕ್ಷದಿಂದ ರೂ.17.19 ಲಕ್ಷ ಎಕ್ಸ್-ಶೋರೂಂ ದರವನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಕಾರು 45 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 46.08 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 275 ರಿಂದ 489 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

ಏಳನೇ ಸ್ಥಾನವನ್ನು ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಹ್ಯಾಚ್‌ಬ್ಯಾಕ್ ತನ್ನದಾಗಿಕೊಂಡಿದೆ. ಸರಿ ಸುಮಾರು 14,592 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇದು ಕೂಡ ಅಗ್ಗದ ದರದಲ್ಲಿ ಖರೀದಿಗೆ ದೊರೆಯುತ್ತದೆ. ರೂ.6.49 ಲಕ್ಷದಿಂದ ರೂ.9.64 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ.
ಈ ಸ್ವಿಫ್ಟ್ ಕಾರು 1.2-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 24.8 ರಿಂದ 32.85 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಮಂದಿ ಪ್ರಯಾಣ ಮಾಡಬಹುದು. ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್-ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ವೈರ್‌ಲೆಸ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇನ್ನುಳಿದಂತೆ ಎಂಟನೇ ಸ್ಥಾನದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಎಸ್‌ಯುವಿ ಇದೆ. ಬರೋಬ್ಬರಿ 14,345 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಕಾರು ರೂ.7.54 ಲಕ್ಷದಿಂದ ರೂ.13 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಒಂಬತ್ತನೇ ಸ್ಥಾನದಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ (13,413 ಯುನಿಟ್) ಮತ್ತು ಹತ್ತನೇ ಸ್ಥಾನದಲ್ಲಿ ಮಾರುತಿ ಬಲೆನೊ (13,180 ಯುನಿಟ್) ಕಾರಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications