Safest EV Cars: ಭಾರತದ ಟಾಪ್ ರೇಟಿಂಗ್ ಸುರಕ್ಷಿತ ಕಾರುಗಳು: BNCAP ಪ್ರಮಾಣೀಕರಣ!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಬೇಡಿಕೆ ಹೆಚ್ಚಾತ್ತಿದ್ದು, ಗ್ರಾಹಕರಿಂದ ಸುರಕ್ಷಿತ ಇವಿಗಳ ಅನ್ವೇಷಣೆ ಹೆಚ್ಚಾಗಿದೆ. ಉತ್ತಮ ನಿರ್ಮಾಣ ಗುಣಮಟ್ಟ ಹಾಗೂ ಸುರಕ್ಷತಾ ಫೀಚರ್ಸ್ ಹೊಂದಿರುವ ಕಾರುಗಳು ಯಾವುವು ಎಂಬುದನ್ನು ನಿರ್ಣಯಿಸಲು BNCAP (ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ) ಪ್ರಮುಖ ಪಾತ್ರ ವಹಿಸುತ್ತದೆ. ಈ BNCAP ಸಂಸ್ಥೆ ಕ್ರ್ಯಾಶ್ ಟೆಸ್ಟ್ ಸುರಕ್ಷತಾ ರೇಟಿಂಗ್‌ಗಳ ಆಧಾರದ ಮೇಲೆ ಭಾರತದಲ್ಲಿ ಟಾಪ್-ರೇಟೆಡ್ ಎಲೆಕ್ಟ್ರಿಕ್ ವಾಹನಗಳನ್ನು ಗ್ರಾಹಕರು ಅನ್ವೇಷಿಸಬಹುದು. ಅಲ್ಲದೇ ಮಾರುಕಟ್ಟೆಯಲ್ಲಿನ ಸುರಕ್ಷಿತ ಎಲೆಕ್ಟ್ರಿಕ್ ಕಾರುಗಳ (Safest EV Cars) ಬಗ್ಗೆ ನಿರ್ಣಾಯಕ ಒಳನೋಟಗಳನ್ನು ಒದಗಿಸುತ್ತದೆ.
ನೀವು ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಲೆಕ್ಟ್ರಿಕ್ ಕಾರನ್ನು ಹುಡುಕುತ್ತಿದ್ದರೆ, ಭಾರತ್ ಎನ್‌ಸಿಎಪಿ ಸುರಕ್ಷತಾ ರೇಟಿಂಗ್ ಪ್ರಕಾರ ಟಾಪ್ - ರೇಟೆಡ್ ಕಾರುಗಳನ್ನು ಇಲ್ಲಿ ನೋಡಬಹುದು. ಉನ್ನತ ದರ್ಜೆಯ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಈ ಇವಿ ಕಾರುಗಳು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತವೆ. ಭಾರತದ ಸುರಕ್ಷಿತ ಎಲೆಕ್ಟ್ರಿಕ್ ಕಾರುಗಳ ಪಟ್ಟಿ ಇಲ್ಲಿದೆ.

ಟಾಟಾ ಪಂಚ್ ಇವಿ (Tata Punch EV): ಟಾಟಾ ಮೋಟಾರ್ಸ್ ನೀಡುವ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿರುವ ಪಂಚ್ ಇವಿ, ಸದ್ಯ ಭಾರತದ ಸುರಕ್ಷಿತ ಎಲೆಕ್ಟ್ರಿಕ್ ಕಾರಾಗಿದೆ. ಇದು ಬಿಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಪರಿಪೂರ್ಣ ಐದು-ಸ್ಟಾರ್ ರೇಟಿಂಗ್ ಪಡೆದಿದೆ. ಈ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ32 ಅಂಕಗಳಲ್ಲಿ 31.46 ಅಂಕಗಳನ್ನು ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 49 ರಲ್ಲಿ 45 ಅಂಕಗಳನ್ನು ಪಡೆದುಕೊಂಡಿದೆ.
ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ರೂ. 9.99 ಲಕ್ಷದಿಂದ ರೂ. 14.29 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಈ ಕಾರಿನ ಎಂಟ್ರಿ ಲೆವೆಲ್ ವೇರಿಯೆಂಟ್ 6 - ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರೋಲ್ - ಓವರ್ ಮಿಟಿಗೇಶನ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ನೆಕ್ಸಾನ್ ಇವಿ (Tata Nexon EV): ಕಳೆದ ವರ್ಷದ ಮೊದಲಾರ್ಧದಲ್ಲಿ ಟಾಟಾ ನೆಕ್ಸಾನ್ ಭಾರತ್ ಎನ್‌ಸಿಎಪಿಯಿಂದ ಕ್ರ್ಯಾಶ್ ಪರೀಕ್ಷೆಗೆ ಒಳಗಾದ ನಂತರ 5-ಸ್ಟಾರ್ ರೇಟಿಂಗ್ ಅನ್ನು ಪಡೆಯಿತು. ಈ ಎಲೆಕ್ಟ್ರಿಕ್ ಎಸ್‌ಯುವಿ ಮಕ್ಕಳ ರಕ್ಷಣೆಯಲ್ಲಿ 49 ಪಾಯಿಂಟ್‌ಗಳಲ್ಲಿ 44.83 ಪಾಯಿಂಟ್‌ಗಳು ಮತ್ತು ವಯಸ್ಕರ ರಕ್ಷಣೆಯಲ್ಲಿ 32 ಪಾಯಿಂಟ್‌ಗಳಲ್ಲಿ 30.81 ಪಾಯಿಂಟ್‌ಗಳನ್ನು ಪಡೆದಿದೆ.
ಟಾಟಾ ನೆಕ್ಸಾನ್ ಇವಿ ಬೆಲೆಯು ರೂ. 12.49 ಲಕ್ಷದಿಂದ ಆರಂಭವಾಗಿ ರೂ. 17.19 ಲಕ್ಷದವೆರೆಗೆ (ಎಕ್ಸ್ ಶೋರೂಂ) ಇದೆ. ಇದರಲ್ಲಿ ಆರು ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟ್ರಾಕ್ಷನ್ ಕಂಟ್ರೋಲ್, ಹೈಡ್ರಾಲಿಕ್ ಬ್ರೇಕ್ ಫಾಡಿಂಗ್, ಆಫ್ಟರ್ ಇಂಪ್ಯಾಕ್ಟ್ ಬ್ರೇಕಿಂಗ್, ಪ್ಯಾನಿಕ್ ಬ್ರೇಕ್ ಅಲರ್ಟ್, ರೋಲ್ ಓವರ್ ತಗ್ಗಿಸುವಿಕೆ, ಸೆಕೆಂಡರಿ ಕೊಲಿಷನ್ ಮಿಟಿಗೇಶನ್ ಮತ್ತು ಬ್ರೇಕ್ ಡಿಸ್ಕ್ ವೈಪಿಂಗ್ ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಮಹೀಂದ್ರಾ ಎಕ್ಸ್‌ಯುವಿ 400 (Mahindra XUV400): ಭಾರತ್ ಎನ್‌ಸಿಎಪಿ ಮಹೀಂದ್ರಾ ಎಕ್ಸ್‌ಯುವಿ 400 ಇವಿಗೆ 5 - ಸ್ಟಾರ್ ಸುರಕ್ಷತಾ ಪ್ರಮಾಣಪತ್ರವನ್ನು ನೀಡಿದೆ. ಈ ಕಾರು ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಲ್ಲಿ 30.38 ಮತ್ತು ಮಕ್ಕಳ ರಕ್ಷಣೆಯಲ್ಲಿ 49 ರಲ್ಲಿ 43 ಅಂಕಗಳನ್ನು ದಕ್ಕಿಸಿಕೊಂಡಿದೆ. ಬೆಲೆಯ ವಿಷಯಕ್ಕೆ ಬಂದರೆ ರೂ.15.49 ಲಕ್ಷದಿಂದ ರೂ.19.39 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ.
ಮಹೀಂದ್ರಾ ಎಕ್ಸ್‌ಯುವಿ400 ಇವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್ ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ಟಾಟಾ ನೆಕ್ಸಾನ್ ಇವಿ (Tata Nexon EV) ನೇರ ಪ್ರತಿಸ್ಪರ್ಧಿಯಾಗಿದೆ.

ಟಾಟಾ ಕರ್ವ್ ಇವಿ (Tata Curvv EV): ಅಕ್ಟೋಬರ್ 2024 ರಲ್ಲಿ ನಡೆದ ಕ್ರ್ಯಾಶ್ ಟೆಸ್ಟ್ ಸಮಯದಲ್ಲಿ ಟಾಟಾ ಕರ್ವ್ ಇವಿ ಭಾರತ್ ಎನ್‌ಸಿಎಪಿಯಿಂದ 5 - ಸ್ಟಾರ್ ಸುರಕ್ಷತಾ ಪಡೆಯಿತು. ವಯಸ್ಕರ ರಕ್ಷಣೆಯಲ್ಲಿ 32 ರಲ್ಲಿ 30.81 ಅಂಕಗಳನ್ನು ಪಡೆದರೆ, ಮಕ್ಕಳ ರಕ್ಷಣೆಯಲ್ಲಿ 49 ರಲ್ಲಿ 44.83 ಅಂಕಗಳನ್ನು ಪಡೆಯಿತು. ದೇಶೀಯವಾಗಿ ಖರೀದಿಗೆ ದೊರೆಯುವ ಟಾಟಾ ಕರ್ವ್ ಇವಿ ರೂ.17.49 ಲಕ್ಷದಿಂದ ರೂ.21.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಟಾಟಾ ಕರ್ವ್ ಇವಿ 6 ಏರ್‌ಬ್ಯಾಗ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಹಾಗೂ 360 - ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಮಹೀಂದ್ರಾ ಬಿಇ 6 (Mahindra BE 6): ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಮಹೀಂದ್ರಾ ಬಿಇ 6 ಕಾರಿಗೆ 5 - ಸ್ಟಾರ್ ಸುರಕ್ಷತಾ ಶ್ರೇಣಿಯನ್ನು ನೀಡಿದೆ. ವಯಸ್ಕರ ರಕ್ಷಣೆಯಲ್ಲಿ 32 ಪಾಯಿಂಟ್‌ಗಳಲ್ಲಿ 31.97 ಪಾಯಿಂಟ್‌ಗಳು ಹಾಗೂ ಮಕ್ಕಳ ರಕ್ಷಣೆಯಲ್ಲಿ 49 ರಲ್ಲಿ 45 ಅಂಕಗಳನ್ನು ಪಡೆದಿದೆ. ಇದರ ಬೆಲೆಯು ರೂ. 18.9 ಲಕ್ಷದಿಂದ ರೂ. 26.90 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ.
ಹೊಸ ಮಹೀಂದ್ರಾ ಬಿಇ 6 ಎಲೆಕ್ಟ್ರಿಕ್ ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360 ಡಿಗ್ರಿ ಕ್ಯಾಮೆರಾದಂತಹ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9E): ಮಹೀಂದ್ರಾ ಎಕ್ಸ್ಇವಿ 9ಇ ಬಿಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಮಾಡಿದ ನಂತರ ವಯಸ್ಕರ ರಕ್ಷಣೆ ಸುರಕ್ಷತೆಯಲ್ಲಿ 32 ಪಾಯಿಂಟ್‌ಗಳ ಪರಿಪೂರ್ಣ ಸ್ಕೋರ್ ಪಡೆದ ಮೊದಲ ವಾಹನವಾಗಿದೆ. ಎಲೆಕ್ಟ್ರಿಕ್ ಎಸ್‌ಯುವಿ 49 ಪಾಯಿಂಟ್‌ಗಳಲ್ಲಿ 45 ಅಂಕಗಳನ್ನು ಗಳಿಸುವ ಮೂಲಕ ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲು ಪರಿಪೂರ್ಣ ಐದು-ಸ್ಟಾರ್ ಪ್ರಮಾಣಪತ್ರವನ್ನು ಗಳಿಸಿದೆ.
ಇತರ ಸುರಕ್ಷತಾ ಫೀಚರ್ಸ್‌ನಲ್ಲಿ ಮಹೀಂದ್ರಾ ಎಕ್ಸ್ಇವಿ 9 ಇ ಏಳು ಏರ್ ಬ್ಯಾಗ್‌ಗಳು ಮತ್ತು ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಎಡಿಎಎಸ್) ಹೊಂದಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ರೂ.21.90 ಲಕ್ಷದಿಂದ ರೂ.30.50 ಲಕ್ಷ ಎಕ್ಸ್- ಶೋರೂಂ ಬೆಲೆಯನ್ನು ಹೊಂದಿದೆ. ಈ ಎಲ್ಲಾ ಸುರಕ್ಷಿತ ಕಾರುಗಳಲ್ಲಿ ನಿಮ್ಮಿಷ್ಟದ ಕಾರನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications
