Toyota: 30 ಕಿ.ಮೀ ಮೈಲೇಜ್.. 5-ಸೀಟರ್, 6.90 ಲಕ್ಷ.. ಅದೇಕೋ ಈ ಕಾರನ್ನು ಕೊಳ್ಳಲು ಗ್ರಾಹಕರಿಗೆ ಮನಸಿಲ್ಲ.. ಏಕೆ?
ಟೊಯೊಟಾ ಗ್ಲಾನ್ಜಾ (Toyota Glanza) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ಮಾರುತಿ ಸುಜುಕಿ ಬಲೆನೊದ ರೀ-ಬ್ಯಾಡ್ಜ್ ಮಾಡೆಲ್ ಆಗಿದ್ದು, ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಅದರ ಹೊರತಾಗಿಯೂ 'ಗ್ಲಾನ್ಜಾ' ಮಾರಾಟ ಸಂಖ್ಯೆ ಮಾತ್ರ ತಿಂಗಳಿಂದ ತಿಂಗಳಿಗೆ ಕುಸಿತವಾಗುತ್ತಿದೆ. ಈ ಏಪ್ರಿಲ್ ತಿಂಗಳಲ್ಲೂ ಅದು ಮುಂದುವರಿದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಳೆದ ತಿಂಗಳು (ಏಪ್ರಿಲ್-2025) ಟೊಯೊಟಾ ಕಂಪನಿಯು ಬರೋಬ್ಬರಿ 4,132 ಯುನಿಟ್ 'ಗ್ಲಾನ್ಜಾ' ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟ ಮಾಡಿದೆ. 2024ರ ಇದೇ ಅವಧಿಯಲ್ಲಿ 4,380 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ -6% ಇಳಿಕೆಯಾಗಿದೆ.

ಈ ವರ್ಷದ ಮೊದಲ 3 ತಿಂಗಳು ಕೂಡ 'ಟೊಯೊಟಾ ಗ್ಲಾನ್ಜಾ' ಮಾರಾಟ ಅಷ್ಟೊಂದು ಉತ್ತಮವಾಗಿರಲಿಲ್ಲ. ಮಾರ್ಚ್‌ನಲ್ಲಿ 3,501 ಯುನಿಟ್, ಫೆಬ್ರವರಿಯಲ್ಲಿ 4,596 ಯುನಿಟ್ ಹಾಗೂ ಜನವರಿಯಲ್ಲಿ 3,455 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ತಿಂಗಳಿಗೆ ಸರಾಸರಿ 3,500 ಯುನಿಟ್ ಗ್ಲಾನ್ಜಾ ಕಾರುಗಳನ್ನು ಮಾರಲಾಗಿದೆ.
ಟೊಯೊಟಾ ಗ್ಲಾನ್ಜಾ ಮಾರಾಟ ಸಂಖ್ಯೆ ಕುಸಿತವಾಗುತ್ತಿರುವ ಬಗ್ಗೆ ಕಂಪನಿಯು ಯಾವುದೇ ಸ್ಪಷ್ಟವಾದ ಕಾರಣವನ್ನು ಬಹಿರಂಗ ಪಡಿಸಿಲ್ಲ. ಇದೇ ಕಾರಿಗೆ ದರಕ್ಕೆ ಬೇರೆ ಕಂಪನಿಗಳು ಸಾಕಷ್ಟು ಉತ್ತಮವಾಗಿರುವ ಸೆಡಾನ್ ಹಾಗೂ ಎಸ್‌ಯುವಿಗಳನ್ನು ಮಾರಾಟಗೊಳಿಸುತ್ತಿವೆ. ಗ್ರಾಹಕರು ಅವುಗಳತ್ತ ಮುಖ ಮಾಡಿರುವುದರಿಂದ 'ಗ್ಲಾನ್ಜಾ' ಮಾರಾಟ ಪ್ರಮಾಣ ಕುಸಿತವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಟೊಯೊಟಾ ಗ್ಲಾನ್ಜಾ ಕಾರಿನ ವಿಶೇಷತೆಗಳೇನು..
ಇದೊಂದು ಹ್ಯಾಚ್‌ಬ್ಯಾಕ್ ಆಗಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ರೂ.6.90 ಲಕ್ಷದಿಂದ ರೂ.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 318 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ಈ ಕಾರು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 1.2-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಹೊಂದಿದ್ದು, ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 22 ರಿಂದ 30 ಕೆಎಂಪಿಎಲ್‌ವರೆಗೆ ಕೊಡುತ್ತದೆ. ಹೊರಭಾಗದಲ್ಲೂ ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ ಮತ್ತು ಸ್ಪೋರ್ಟಿನ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ ಟೊಯೊಟಾ ಗ್ಲಾನ್ಜಾ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್‌ನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications