ಗುಡ್‌ನ್ಯೂಸ್: ಶೀಘ್ರ 2 ಹೊಸ 'Toyota Suv'ಗಳು ಬಿಡುಗಡೆ.. ಯಾವುವು, ವಿಶೇಷತೆಗಳೇನು?
ಭಾರತದ ಪ್ರಮುಖ ಕಾರು ತಯಾರಕ ಕಂಪನಿಯಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಹ್ಯಾಚ್‌ಬ್ಯಾಕ್, ಎಸ್‌ಯುವಿ ಹಾಗೂ ಎಂಪಿವಿಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯದೊಳಗೆ ಹೆಚ್ಚು ಅತ್ಯಾಧುನಿಕವಾಗಿರುವ ಎರಡು ಹೊಚ್ಚ ಹೊಸ 'ಎಸ್‌ಯುವಿ'ಗಳನ್ನು ಕೂಡ ಕಂಪನಿಯು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಟೊಯೊಟಾ ಅರ್ಬನ್ ಕ್ರೂಸರ್ ಬಿಇವಿ (Toyota Urban Cruiser BEV): ಇದು 'ಮಾರುತಿ ಸುಜುಕಿ ಇ ವಿಟಾರಾ' ಆಧಾರಿತ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಕಳೆದ ಜನವರಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಕಾರಿನ ಕಾನ್ಸೆಪ್ಟ್ ಮಾಡೆಲ್‌ನ್ನು ಪ್ರದರ್ಶಿಸಲಾಗಿತ್ತು. ಅದು ಹೊರಭಾಗದಲ್ಲಿ ಅತ್ಯುತ್ತಮವಾದ ವಿನ್ಯಾಸವನ್ನು ಪಡೆದಿದ್ದು, ಚೆಂದದ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಚಾರ್ಜಿಂಗ್ ಪೋರ್ಟ್ ಮತ್ತು ಅಲಾಯ್ ವೀಲ್‌ಗಳನ್ನು ಒಳಗೊಂಡಿತ್ತು.

ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಬಿಇವಿ ಎಲೆಕ್ಟ್ರಿಕ್ ಎಸ್‌ಯುವಿ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದುಕೊಂಡಿರುವ ಸಾಧ್ಯತೆಯೂ ಹೆಚ್ಚಿದೆ. ಇದು 49 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 61 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 550 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡಬಹುದು ಎಂದು ಹೇಳಲಾಗಿದೆ.
ಈ ಎಲೆಕ್ಟ್ರಿಕ್ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚರಿಸಬಹುದು. ಇನ್ಸ್ಟ್ರೋಮೆಂಟ್ ಕ್ಲಸ್ಟರ್ & ಇನ್ಫೋಟೈನ್ಮೆಂಟ್ ಸಿಸ್ಟಮ್‌ಗಾಗಿ ಡುಯಲ್ ಡಿಸ್‌ಪ್ಲೇ ಸೆಟಪ್, ಟೂ-ಸ್ಪೋಕ್ ಸ್ಟೀರಿಂಗ್ ವೀಲ್‌ಗಳು, ಸ್ಕ್ವೇರ್ ಎಸಿ ವೆಂಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ.

ನೂತನ 'ಟೊಯೊಟಾ ಅರ್ಬನ್ ಕ್ರೂಸರ್ ಬಿಇವಿ' ಎಲೆಕ್ಟ್ರಿಕ್ ಎಸ್‌ಯುವಿ, ಇದೇ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾವ ನಿರೀಕ್ಷೆಯಿದೆ. ಜೊತೆಗೆ ಈ ಕಾರು ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯಲ್ಲಿಯೂ ಮಾರಾಟಕ್ಕೆ ಬರಬಹುದು ಎನ್ನಲಾಗಿದ್ದು, ರೂ.18 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಟೊಯೊಟಾ ಫಾರ್ಚುನರ್ (Toyota Fortuner): ಇದೊಂದು ಫುಲ್-ಸೈಜ್ ಎಸ್‌ಯುವಿಯಾಗಿದೆ. ಒಂದಷ್ಟು ನವೀಕರಣದೊಂದಿಗೆ ಈ ಕಾರಿನ ಫೇಸ್‌ಲಿಫ್ಟ್ ಮಾಡೆಲ್, ಇದೇ ವರ್ಷಾಂತ್ಯದೊಳಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಹುಮುಖ್ಯವಾಗಿ ನೂತನ ಎಸ್‌ಯುವಿ, ಮೈಲ್ಡ್ ಹೈಬ್ರಿಡ್ (ಪೆಟ್ರೋಲ್/ಡೀಸೆಲ್ + ಎಲೆಕ್ಟ್ರಿಕ್) ಪವರ್‌ಟ್ರೇನ್ ಆಯ್ಕೆಯನ್ನು ಪಡೆದುಕೊಂಡು ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಅದರ ಹೊರತಾಗಿ ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.
ಸದ್ಯ ದೇಶೀಯವಾಗಿ ಗ್ರಾಹಕರ ಖರೀದಿಗೆ ಲಭ್ಯವಿರುವ ಹೊಚ್ಚ ಹೊಸ 'ಫಾರ್ಚುನರ್' ಎಸ್‌ಯುವಿ, ರೂ.35 ಲಕ್ಷದಿಂದ ರೂ.51 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ & 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ನ್ನು ಪಡೆದಿದ್ದು, 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








