Toyota: ಟೊಯೊಟಾ ಹೊಸ ಎಸ್‌ಯುವಿ ಬಿಡುಗಡೆಗೆ ಸರ್ವಸಿದ್ಧ: ಇಂಟೀರಿಯರ್ ಮಾಹಿತಿ ಬಹಿರಂಗ!
ಎಲ್ಲರಿಗು ತಿಳಿದಿರುವಂತೆ ಟೊಯೋಟಾ (Toyota) ಹಾಗೂ ಮಾರುತಿ ಸುಜುಕಿ (Maruti) ಪಾಲುದಾರಿಕೆಯಲ್ಲಿವೆ. ಕೆಲವು ಜನಪ್ರಿಯ ಮಾದರಿಗಳನ್ನು ಬ್ಯಾಡ್ಜ್ ಬದಲಿಸಿ ಎರಡೂ ಕಂಪನಿಗಳು ಮಾರಾಟ ಮಾಡುತ್ತಿವೆ. ಇದೀಗ ಈ ಬ್ರಾಂಡ್‌ಗಳು ಭಾರತೀಯ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿವೆ. ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2025 ರಲ್ಲಿ ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಇ-ವಿಟಾರಾವನ್ನು ಅನಾವರಣಗೊಳಿಸಿತು. ಈ ವರ್ಷದ ಕೊನೆಯಲ್ಲಿ ಈ ಕಾರನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹಾಗೆಯೇ ಇದೇ ಎಸ್‌ಯುವಿಯ ಟೊಯೋಟಾ ಮಾದರಿ ಕೂಡ ಬರಲಿದೆ.
ಆದರೆ ಈ ಎಲೆಕ್ಟ್ರಿಕ್ ಟೊಯೊಟಾ ಎಸ್‌ಯುವಿ ಈವರೆಗೆ ಕಾಣಿಸಿಕೊಂಡಿರುವುದು ತೀರಾ ಕಡಿಮೆ. ಆಗೊಮ್ಮೆ ಈಗೊಮ್ಮೆ ಅರ್ಬನ್ ಬಿಇವಿ ಅಥವಾ ಅರ್ಬನ್ ಕ್ರೂಸರ್ ಇವಿಯ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದರೂ, ಇಂಟೀರಿಯರ್ ಮಾತ್ರ ಬಹಿರಂಗಗೊಂಡಿರಲಿಲ್ಲ. ಕೊನೆಗೂ ಇಂಟೀರಿಯರ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಲವು ಕುತೂಹಲಕಾರಿ ಅಂಶಗಳು ಬಹಿರಂಗವಾಗಿವೆ.

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಟೊಯೋಟಾ ಎಲೆಕ್ಟ್ರಿಕ್ ಎಸ್‌ಯುವಿ ಉತ್ಪಾದನೆಗೆ ಸಿದ್ಧವಾಗಿರುವ ಆವೃತ್ತಿಯಂತೆ ಕಾಣುತ್ತದೆ. ಟೊಯೊಟಾ ಇದನ್ನು ಅರ್ಬನ್ ಕ್ರೂಸರ್ ಇವಿ ಎಂದು ಕರೆಯುತ್ತಿದೆ. ಮೂಲಗಳ ಪ್ರಕಾರ ಟೊಯೋಟಾ ಹಾಗೂ ಮಾರುತಿಯ ಎರಡೂ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಭಾರತದಲ್ಲಿನ ಸುಜುಕಿಯ ಗುಜರಾತ್ ಘಟಕದಲ್ಲಿ ತಯಾರಿಸಲಾಗುತ್ತದೆ. ಎರಡೂ ಕಾರುಗಳು ನೋಡಲು ಒಂದೇ ರೀತಿ ಕಂಡರು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿರಲಿವೆ.
ಟೊಯೊಟಾದ ಇವಿ ಆವೃತ್ತಿಯು ನಯವಾದ ಹೆಡ್‌ಲ್ಯಾಂಪ್, ಡ್ಯುಯಲ್-ಫಂಕ್ಷನ್ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಬರುತ್ತದೆ. ಸೈಡ್ ಪ್ರೊಫೈಲ್‌ಗೆ ಬಂದರೆ, ಫೆಂಡರ್‌ನಲ್ಲಿ ಚಾರ್ಜಿಂಗ್ ಪೋರ್ಟ್, 19 - ಇಂಚಿನ ಅಲಾಯ್ ವೀಲ್‌ಗಳು ಎಸ್‌ಯುವಿ ನೋಟವನ್ನು ಹೆಚ್ಚಿಸಲು ದಪ್ಪವಾದ ಕ್ಲಾಡಿಂಗ್, ಸಿ-ಪಿಲ್ಲರ್‌ಗೆ ಸಂಯೋಜಿಸಲಾದ ಹಿಂಭಾಗದ ಡೋರ್ ಹ್ಯಾಂಡಲ್‌ಗಳನ್ನು ನೀಡಲಾಗಿದೆ.

ಹಿಂಭಾಗದ ವಿಷಯಕ್ಕೆ ಬಂದರೆ ಅರ್ಬನ್ ಕ್ರೂಸರ್ ಇವಿ ಮಾರುತಿಯ ಇ-ವಿಟಾರಾವನ್ನು ಹೋಲುತ್ತದೆ. ಕ್ಲಿಯರ್-ಲೆನ್ಸ್ ಎಲ್ಇಡಿ ಟೈಲ್ ಲ್ಯಾಂಪ್, ಎರಡೂ ಟೈಲ್ ಲೈಟ್‌ಗಳನ್ನು ಸಂಪರ್ಕಿಸುವ ಕ್ಲಿಯರ್ ಗ್ಲಾಸ್ ಪ್ಯಾನಲ್ ಹೊಂದಿದೆ. ಹಲವು ಜಾಗಗಳಲ್ಲಿ ಟೊಯೊಟಾ ಬ್ಯಾಡ್ಜಿಂಗ್ ಮತ್ತು ಹಿಂಭಾಗದಲ್ಲಿ AWD ಬ್ಯಾಡ್ಜ್ ಅನ್ನು ಸಹ ನೋಡಬಹುದು.
ಇಂಟೀರಿಯರ್ ವಿಷಯಕ್ಕೆ ಬಂದರೆ ಉದ್ದವಾದ ಎಸಿ ವೆಂಟ್‌ಗಳೊಂದಿಗೆ ಲೇಯರ್ಡ್ ವಿನ್ಯಾಸವನ್ನು ಹೊಂದಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಒಂದು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಇನ್ನೊಂದು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಎರಡು 10 - ಇಂಚಿನ ಸ್ಕ್ರೀನ್‌ಗಳನ್ನು ನೀಡಲಾಗಿದೆ. ಎಸಿ ಕಂಟ್ರೋಲ್ ಮತ್ತು ವಾಲ್ಯೂಮ್‌ಗಾಗಿ ಫಿಸಿಕಲ್ ಬಟನ್‌ಗಳ ಜೊತೆಗೆ ಫ್ಲೋಟಿಂಗ್ ಸೆಂಟರ್ ಕನ್ಸೋಲ್ ಅನ್ನು ಹೊಂದಿದೆ.

ಡ್ರೈವರ್ ಸೀಟ್ ಅನ್ನು ಎಲೆಕ್ಟ್ರಿಕ್ ಆಗಿ ಸರಿಹೊಂದಿಸಬಹುದು. ಇದು ಹಲವಾರು ಕಂಟ್ರೋಲ್‌ಗಳನ್ನು ಹೊಂದಿರುವ ಟ್ವಿನ್-ಸ್ಪೋಕ್ ಸ್ಟೀರಿಂಗ್ ವೀಲ್ ಹೊಂದಿದೆ. ಹಿಂಭಾಗದ ಸೀಟ್‌ಗಳನ್ನು ಹೆಚ್ಚು ಸ್ಥಳಾವಕಾಶಕ್ಕಾಗಿ ಮುಂದಕ್ಕೆ ಮತ್ತು ಹಿಂದಕ್ಕೆ ಎಳೆಯಬಹುದು. ಉಳಿದಂತೆ ಆಂಬಿಯೆಂಟ್ ಲೈಟಿಂಗ್, ಜೆಬಿಎಲ್ ಸ್ಪೀಕರ್, ಗ್ಲೋಸ್ ಬ್ಲ್ಯಾಕ್ ಸೆಂಟರ್ ಕನ್ಸೋಲ್, ಲೆವೆಲ್ 2 ಎಡಿಎಎಸ್ ಮತ್ತು ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








