ಟೊಯೋಟಾ ಅರ್ಬನ್ ಕ್ರೂಸರ್ ಎಲೆಕ್ಟ್ರಿಕ್ SUV ಬಿಡುಗಡೆ: ಆಕರ್ಷಕ ಲುಕ್, ಅತ್ಯಾಧುನಿಕ ಫೀಚರ್ಸ್
ಟೊಯೋಟಾ ಯುರೋಪ್‌ನಲ್ಲಿ ತನ್ನ ಅರ್ಬನ್ ಕ್ರೂಸರ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದೇ ಅರ್ಬನ್ ಕ್ರೂಸರ್ ಇವಿ ಭಾರತದ ಆಟೋ ಎಕ್ಸ್‌ಪೋ 2025 ರಲ್ಲಿ ಒಂದು ಕಾನ್ಸೆಪ್ಟ್ ಮಾಡಲ್ ಆಗಿ ಕಾಣಿಸಿಕೊಂಡಿತ್ತು. ಇದರರ್ಥ ಭಾರತದಲ್ಲೂ ಇದು ಬಿಡುಗಡೆಯಾಗುವ ಸಾಧ್ಯತೆ ಇದೆ, ಆದರೆ ಉತ್ಪಾದನೆಯನ್ನು ಪ್ರಾರಂಭಿಸಿದ ನಂತರ ಜಾಗತಿಕ ಆರ್ಡರ್‌ಗಳು ಮತ್ತು ರೇರ್ ಅರ್ಥ್ ಮ್ಯಾಗ್ನೆಟ್ ಪೂರೈಕೆ ಸಮಸ್ಯೆಗಳಿಂದಾಗಿ ವಿಳಂಬವನ್ನು ಎದುರಿಸಿದೆ. ಇದು ಟೊಯೋಟಾ ಮತ್ತು ಸುಜುಕಿಯ ಜಾಗತಿಕ ಪಾಲುದಾರಿಕೆಯಡಿಯಲ್ಲಿ ಅಭಿವೃದ್ಧಿಪಡಿಸಲಾದ ಸುಜುಕಿ ಇ-ವಿಟಾರಾದ ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಳ್ಳುತ್ತದೆ.
ಟೊಯೋಟಾ ಅರ್ಬನ್ ಕ್ರೂಸರ್ ಇವಿ ಒಂದು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಇದನ್ನು ಮುಖ್ಯವಾಗಿ ನಗರ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ, ಆದರೆ ದೀರ್ಘ ಪ್ರಯಾಣಕ್ಕೂ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ಸದ್ಯಕ್ಕೆ, ಟೊಯೋಟಾ ಈ ಎಲೆಕ್ಟ್ರಿಕ್ SUV ಯನ್ನು ಯುರೋಪ್‌ನಲ್ಲಿ ಮಾತ್ರ ಬಿಡುಗಡೆ ಮಾಡಿದೆ. ಶೀಘ್ರದಲ್ಲೆ ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ, ಆದರೆ ಇದಕ್ಕೂ ಮುನ್ನ ಮಾರುತಿ ಇ-ವಿಟಾರಾ ಬಿಡುಗಡೆಯಾಗಬೇಕಿದೆ.

ಯುರೋಪ್‌ನಲ್ಲಿ ಬಿಡುಗಡೆಯಾಗಿರುವ ಟೊಯೋಟಾ ಅರ್ಬನ್ ಕ್ರೂಸರ್ ಎಸ್‌ಯುವಿಯ ಗಾತ್ರ, ವಿನ್ಯಾಸ ಮತ್ತು ವೈಶಿಷ್ಟ್ಯಗಳೆಲ್ಲವು ಕಾಂಪ್ಯಾಕ್ಟ್ SUV ಗಳು ಅತ್ಯಂತ ಜನಪ್ರಿಯವಾಗಿರುವ ಭಾರತದಂತಹ ಮಾರುಕಟ್ಟೆಗಳಿಗೆ ಸೂಕ್ತವಾಗಿವೆ. ಭಾರತದಲ್ಲಿ ಟೊಯೋಟಾ ಅರ್ಬನ್ ಕ್ರೂಸರ್ ಇವಿ ನಿರೀಕ್ಷಿತ ಬೆಲೆಯು 20 ಲಕ್ಷ ರೂ.ಗಳಿಂದ ಪ್ರಾರಂಭವಾಗಬಹುದು(ಎಕ್ಸ್ ಶೋ ರೂಂ) ಎಂದು ಹೇಳಲಾಗುತ್ತಿದೆ.
ಟೊಯೋಟಾ ಭಾರತದಲ್ಲಿ ಬಿಡುಗಡೆ ಮಾಡುವುದನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ, ಭಾರತದ ವೇಗವಾಗಿ ಬೆಳೆಯುತ್ತಿರುವ EV ಮಾರುಕಟ್ಟೆ ಮತ್ತು ಸುಜುಕಿಯೊಂದಿಗಿನ ಟೊಯೋಟಾದ ನಿಕಟ ಪಾಲುದಾರಿಕೆಯನ್ನು ಪರಿಗಣಿಸಿ, ಅರ್ಬನ್ ಕ್ರೂಸರ್ EV ಅನ್ನು ಶೀಘ್ರದಲ್ಲೆ ಬಿಡುಗಡೆ ಮಾಡಬಹುದು. ಭಾರತದಲ್ಲಿ ಇದು ಹ್ಯುಂಡೈ ಕ್ರೆಟಾ ಇವಿ ಮತ್ತು ಮುಂಬರುವ ಸುಜುಕಿ ಇ-ವಿಟಾರಾದಂತಹ ಎಲೆಕ್ಟ್ರಿಕ್ ಎಸ್‌ಯುವಿಗಳೊಂದಿಗೆ ಸ್ಪರ್ಧಿಸುತ್ತದೆ.

ಯುರೋಪ್ ಮಾಡಲ್ ಪ್ರಮುಖಾಂಶಗಳು
ಹೊಸ ಯುರೋಪ್ ಮಾಡಲ್ ಅನ್ನು ಮೂರು ಬ್ಯಾಟರಿ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. 49 kWh ಬ್ಯಾಟರಿಯೊಂದಿಗೆ ಫ್ರಂಟ್-ವೀಲ್ ಡ್ರೈವ್ ಮಾಡಲ್, 61 kWh ಬ್ಯಾಟರಿಯೊಂದಿಗೆ ಫ್ರಂಟ್ ಮತ್ತು ಆಲ್-ವೀಲ್ ಡ್ರೈವ್ ಆವೃತ್ತಿಗಳು ಸಿಗಲಿವೆ. 49 kWh ಬ್ಯಾಟರಿಯೊಂದಿಗೆ FWD ಮಾಡಲ್ ಸಿಂಗಲ್ ಚಾರ್ಜ್‌ನಲ್ಲಿ 344 ಕಿ.ಮೀ ಓಡಬಲ್ಲದು. 61 kWh ಬ್ಯಾಟರಿಯೊಂದಿಗೆ FWD ಮಾಡಲ್ ಸಿಂಗಲ್ ಚಾರ್ಜ್‌ನಲ್ಲಿ 426 ಕಿ.ಮೀ ಮತ್ತು AWD ಮಾಡಲ್ 395 ಕಿಮೀ ರೇಂಜ್ ನೀಡುತ್ತದೆ.
2,700 ಎಂಎಂ ವೀಲ್‌ಬೇಸ್‌ನ ಪ್ರಯೋಜನದೊಂದಿಗೆ, ಒಳಾಂಗಣವು ಮುಕ್ತ, ವಿಶಾಲ ಮತ್ತು ಬಹುಮುಖವಾಗಿದ್ದು, ಸ್ಲೈಡಿಂಗ್ ಮತ್ತು ಸ್ಪ್ಲಿಟ್-ಫೋಲ್ಡಿಂಗ್ ಹಿಂಭಾಗದ ವ್ಯವಸ್ಥೆಯನ್ನು ಹೊಂದಿದೆ. ಇದು ಪ್ರಯಾಣಿಕರ ಅಥವಾ ಲಗೇಜ್ ಜಾಗವನ್ನು ಸುಲಭವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ, ದೊಡ್ಡ ಎಸ್‌ಯುವಿಗಳ ಲೋಡ್ - ಸಾಗಿಸುವ ಸಾಮರ್ಥ್ಯಗಳಿಗೆ ಪ್ರತಿಸ್ಪರ್ಧಿಯಾಗಿದೆ ಎಂದು ಟೊಯೋಟಾ ಹೇಳಿದೆ.

ಇಂಟೀರಿಯರ್ ಫೀಚರ್ಸ್ ವಿಷಯಕ್ಕೆ ಬಂದರೆ ಪ್ಯಾನಲ್ 10.25 - ಇಂಚಿನ ಕಾಂಬಿಮೀಟರ್ ಮತ್ತು 10.1 - ಇಂಚಿನ ಮಲ್ಟಿಮೀಡಿಯಾ ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಒಂದೇ ಯುನಿಟ್ ಆಗಿ ನೀಡಲಾಗಿದೆ. ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಎರಡರ ಮೂಲಕ ಸ್ಮಾರ್ಟ್‌ಫೋನ್‌ಗಳನ್ನು ವಾಹನದೊಂದಿಗೆ ವೈರ್‌ಲೆಸ್ ಆಗಿ ಸಂಯೋಜಿಸಬಹುದು. ಟಾಪ್ ವೇರಿಯೆಂಟ್‌ಗಳಲ್ಲಿ ವೈರ್‌ಲೆಸ್ ಚಾರ್ಜರ್ ಒದಗಿಸಲಾಗಿದೆ.
ಸುರಕ್ಷತೆ ವಿಷಯಕ್ಕೆ ಬಂದರೆ ಬ್ರೇಕ್ ಸಪೋರ್ಟ್ ಸಿಸ್ಟಮ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಟ್ರಾಫಿಕ್ ಸೈನ್ ರೆಕಗ್ನಿಷನ್ ಒದಗಿಸಲಾಗಿದೆ. 360 - ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಹಿಂಭಾಗದ ಕ್ರಾಸ್ ಟ್ರಾಫಿಕ್ ಅಲರ್ಟ್, ಬ್ಲೈಂಡ್ ಸ್ಪಾಟ್ ಮಾನಿಟರ್‌ನಂತಹ ಚಾಲಕ ಸಹಾಯ ವೈಶಿಷ್ಟ್ಯಗಳ ಸಮಗ್ರ ಶ್ರೇಣಿಯೊಂದಿಗೆ ಬರುತ್ತದೆ.


Click it and Unblock the Notifications








