ಈ ತಿಂಗಳು ಬಿಡುಗಡೆಯಾಗಲಿವೆ 3 ಹೊಸ SUVಗಳು: ನಾಳೆಯೇ ಬ್ರಹ್ಮಾಸ್ತ್ರ ಮಾರಾಟಕ್ಕೆ.. ಮಾರುತಿ & ಟಾಟಾ ಮಧ್ಯೆ ತೀವ್ರ ಸ್ಪರ್ಧೆ!
2025ರ ವರ್ಷಾಂತ್ಯಕ್ಕೆ ದಿನಗಣನೆ ಶುರುವಾಗಿದ್ದು, ಡಿಸೆಂಬರ್ ಬಂದೇ ಬಿಟ್ಟಿದೆ. ಈ ತಿಂಗಳು ಮಾರುತಿ ಸುಜುಕಿಯ 1 ಹಾಗೂ ಟಾಟಾದ 2 ಎಸ್‌ಯುವಿಗಳು ಅದ್ದೂರಿಯಾಗಿ ಮಾರಾಟಕ್ಕೆ ಬರಲಿವೆ. ನೂತನ ಕಾರುಗಳ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಇವು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹೊಂದಿರಲಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿರಲಿವೆ. ಬನ್ನಿ.. ಈ ಎಸ್‌ಯುವಿಗಳ ವಿಶೇಷತೆ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara):
ಹೊಚ್ಚ ಹೊಸ 'ಇ-ವಿಟಾರಾ' ಡಿಸೆಂಬರ್ 2 ರಂದು, ಅಂದರೆ ನಾಳೆ ಬಿಡುಗಡೆಯಾಗಲಿದೆ. ರೂ.17 ಲಕ್ಷದಿಂದ ರೂ.22 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ನೆಕ್ಸಾ ಬ್ಲೂ, ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಗ್ರ್ಯಾಂಡಿಯರ್ ಗ್ರೇ, ಬ್ಲ್ಯೂಯಿಶ್ ಬ್ಲ್ಯಾಕ್ ಮತ್ತು ಆಪ್ಯುಲೆಂಟ್ ರೆಡ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 49 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 61 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ ಸರಿ ಸುಮಾರು 500 ಕಿ.ಮೀವರೆಗೆ ರೇಂಜ್ (ಮೈಲೇಜ್) ಕೊಡಬಹುದು ಎಂದು ಅಂದಾಜಿಸಲಾಗಿದೆ.

ಈ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸುಲಭವಾಗಿ ಓಡಾಟ ನಡೆಸಬಹುದು. 10.25 ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಆಟೋ ಎಸಿಗಳನ್ನು ಒಳಗೊಂಡಿದೆ.
ನೂತನ 'ಮಾರುತಿ ಇ-ವಿಟಾರಾ' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಅದಕ್ಕಾಗಿ 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಪೆಟ್ರೋಲ್ ಟಾಟಾ ಸಫಾರಿ & ಹ್ಯಾರಿಯರ್ (Petrol Tata Safari & Harrier):
ಇದೇ ಡಿಸೆಂಬರ್ 9 ರಂದು ಸಫಾರಿ ಹಾಗೂ ಹ್ಯಾರಿಯರ್ ಎಸ್‌ಯುವಿಗಳು, ನೂತನ ಎಂಜಿನ್ ಆಯ್ಕೆಯೊಂದಿಗೆ ಮಾರಾಟಕ್ಕೆ ಬರಲಿವೆ. ಇವು 1.5-ಲೀ. ಟರ್ಬೊ 'ಪೆಟ್ರೋಲ್' ಪವರ್‌ಟ್ರೇನ್‌ನ್ನು ಹೊಂದಿರಲಿವೆ. ಅದು 170 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ ಪವರ್) & 280 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕಲಿದೆ. ಹಾಗೆಯೇ 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿರಲಿವೆ.
ಸದ್ಯ ಲಭ್ಯವಿರುವ ಟಾಟಾ ಸಫಾರಿ ವಿಶೇಷತೆಗಳೇನು:
ಈ ಕಾರು ರೂ.14.66 ಲಕ್ಷದಿಂದ ರೂ.25.96 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 2-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 14 ರಿಂದ 16 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 6/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್ ಹಾಗೂ 7-ಏರ್‌ಬ್ಯಾಗ್‌ಗಳನ್ನು ತನ್ನದಾಗಿಸಿಕೊಂಡಿದೆ.
ಪ್ರಸ್ತುತ ಸಿಗುವ ಟಾಟಾ ಹ್ಯಾರಿಯರ್ ಹೇಗಿದೆ:
ಇದು ರೂ.14 ಲಕ್ಷದಿಂದ ರೂ.25.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2-ಲೀ. ಡೀಸೆಲ್ ಎಂಜಿನ್‌ನ್ನು ಪಡೆದಿದೆ. 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 17 ಕಿಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮೆಟಿಕ್ ಎಸಿ, ಸನ್‌ರೂಫ್ ಮತ್ತು 7-ಏರ್‌ಬ್ಯಾಗ್‌ಗಳನ್ನು ಹೊಂದಿದೆ.


Click it and Unblock the Notifications








