ಹೊಸ ಕಾರು ಬ್ರಾಂಡ್ ಜೋರು... ಇತ್ತೀಚೆಗಷ್ಟೆ 2 ಕಾರುಗಳ ಬಿಡುಗಡೆ... ಈಗ 7-ಸೀಟರ್ ಬಿಡುಗಡೆಗೆ ಸಜ್ಜು
ವಿಯೆಟ್ನಾಂ ಮೂಲದ ಬಹುದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ 'ವಿನ್‌ಫಾಸ್ಟ್' (Vinfast) ಭಾರತದಲ್ಲಿ ಇತ್ತೀಚೆಗೆ ಪಾದಾರ್ಪಣೆ ಮಾಡಿದೆ. ತನ್ನ ಮೊದಲೆರಡು ಕಾರುಗಳನ್ನು ಕೂಡ ದೇಶದಲ್ಲಿ ಪರಿಚಯಿಸಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ವಿನ್‌ಫಾಸ್ಟ್ ಭಾರತದಲ್ಲಿ ಮುಂದಿನ ದೊಡ್ಡ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ದೃಢಪಡಿಸಿದೆ. ಇದು ಭಾರತದಲ್ಲಿ ಕಂಪನಿಯ ಮೂರನೇ ಎಲೆಕ್ಟ್ರಿಕ್ ಕಾರಾಗಿರಲಿದ್ದು, ಇದರ ಹೆಸರು ವಿನ್‌ಫಾಸ್ಟ್ 'ಲಿಮೋ ಗ್ರೀನ್' (Limo Green) ಆಗಿದೆ. 7-ಸೀಟರ್ ಎಲೆಕ್ಟ್ರಿಕ್ ಕಾರಾಗಿ ಮಾರಾಟವಾಗಲಿದೆ.
ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ವಿನ್‌ಫಾಸ್ಟ್ ಲಿಮೋ ಗ್ರೀನ್ ವಿನ್ಯಾಸಕ್ಕೆ ವಾಹನ ತಯಾರಕರು ಈಗಾಗಲೇ ಪೇಟೆಂಟ್ ಪಡೆದಿದ್ದಾರೆ. ವಿನ್‌ಫಾಸ್ಟ್ ಕಂಪನಿಯು ಫೆಬ್ರವರಿ 2026 ರಲ್ಲಿ ಭಾರತದಲ್ಲಿ ಈ ಎಲೆಕ್ಟ್ರಿಕ್ MPV ಅನ್ನು ಬಿಡುಗಡೆ ಮಾಡಲು ಉದ್ದೇಶಿಸಿರುವುದಾಗಿ ತಿಳಿಸಿದೆ. ಕಂಪನಿಯು ಈಗಾಗಲೇ ವಿಎಫ್ 6 ಮತ್ತು ವಿಎಫ್ 7 ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಯಶಸ್ವಿಯಾಗಿ ಬಿಡುಗಡೆ ಮಾಡಿ ಉತ್ತಮ ಮಾರಾಟವನ್ನು ಕಾಣುತ್ತಿದೆ.

ಈಗ ಲಿಮೋ ಗ್ರೀನ್' 7-ಸೀಟರ್ ಎಲೆಕ್ಟ್ರಿಕ್ ಕಾರನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಲು ದೇಶದಲ್ಲಿ ಸ್ಥಳೀಯವಾಗಿ ಉತ್ಪಾದಿಸುತ್ತಿದ್ದಾರೆ. ಈ ಲಿಮೋ ಗ್ರೀನ್' 7-ಸೀಟರ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾದ ನಂತರ ಕಿಯಾ ಕಾರೆನ್ಸ್ ಕ್ಲಾವಿಸ್ ಇವಿ (Kia Carens Clavis EV), ಬಿವೈಡಿ ಇಮ್ಯಾಕ್ಸ್ 7 (BYD eMax 7) ನಂತಹ ಎಲೆಕ್ಟ್ರಿಕ್ ಕಾರುಗಳಿಗೆ ಸವಾಲು ಹಾಕಲಿದೆ. ವಿನ್‌ಫಾಸ್ಟ್ ಲಿಮೋ ಗ್ರೀನ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ನೀವು ತಿಳಿಯಬಹುದಾದ ಪ್ರಮುಖ ಸಂಗತಿಗಳು ಇಲ್ಲಿವೆ.
ಬ್ಯಾಟರಿ ಮತ್ತು ರೇಂಜ್: ವಿನ್ ಫಾಸ್ಟ್ ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲವಾದರೂ ಉನ್ನತ ಮೂಲಗಳ ಮಾಹಿತಿಯ ಪ್ರಕಾರ, ವಿಯೆಟ್ನಾಂ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟದಲ್ಲಿರುವ 'ಲಿಮೋ ಗ್ರೀನ್' ನಂತಯೇ ಅದೇ ಬ್ಯಾಟರಿ ಪ್ಯಾಕ್‌ನೊಂದಿಗೆ ಭಾರತಕ್ಕೆ ಬರುವ ಸಾಧ್ಯತೆ ಇದೆ. ಇದು 60.13 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದೇ ಚಾರ್ಜ್ ನಲ್ಲಿ 450 ಕಿ.ಮೀ ಓಡಿಸಬಹುದು.

ಬ್ಯಾಟರಿ ಪ್ಯಾಕ್ 11 kW AC ಮತ್ತು 80 kW DC ವೇಗದ ಚಾರ್ಜಿಂಗ್‌ಗೆ ಹೊಂದಿಕೊಳ್ಳುತ್ತದೆ. ವೇಗದ ಚಾರ್ಜರ್ ಬಳಸಿ ಶೇ 70 ವರೆಗೆ ಚಾರ್ಜ್ ಮಾಡಲು ಕೇವಲ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಕಾರಿನಲ್ಲಿ ಬ್ಯಾಟರಿ ಪ್ಯಾಕ್ ಅನ್ನು ಮುಂಭಾಗದ ಆಕ್ಸಲ್‌ಗೆ ಅಳವಡಿಸಲಾದ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಜೋಡಿಸಲಾಗಿದೆ. ಇದು 198 bhp ಗರಿಷ್ಠ ಪವರ್ ಮತ್ತು 280 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.
ವೈಶಿಷ್ಟ್ಯಗಳು: ವಿನ್ ಫಾಸ್ಟ್ ಲಿಮೋ ಗ್ರೀನ್ ಇಂಟೀರಿಯರ್ ಪ್ರೀಮಿಯಂ ಆಗಿದ್ದು, ಕ್ಯಾಬಿನ್ ಒಳಗಿನ ಪ್ರಮುಖ ವೈಶಿಷ್ಟ್ಯಗಳಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನಾಲ್ಕು ಸ್ಪೀಕರ್ ಆಡಿಯೊ ಸಿಸ್ಟಮ್, ಸಿಂಗಲ್-ಜೋನ್ ಎಸಿ ಮತ್ತು ಬಹು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು ಸೇರಿವೆ. ಕ್ಯಾಬಿನ್ 2+3+2 ಆಸನ ವಿನ್ಯಾಸವನ್ನು ಹೊಂದಿದ್ದು, ಮೂರು ಸಾಲುಗಳಲ್ಲಿ ಏಳು ಜನರಿಗೆ ಕೂರಲು ಅವಕಾಶ ನೀಡುತ್ತದೆ.

ಎಷ್ಟು ದೊಡ್ಡದು?: ವಿಯೆಟ್ನಾಂ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟದಲ್ಲಿರುವ ಲಿಮೋ ಗ್ರೀನ್ 4,740 ಮಿ.ಮೀ ಉದ್ದ, 1,872 ಮಿ.ಮೀ ಅಗಲ ಮತ್ತು 1,728 ಮಿ.ಮೀ ಎತ್ತರವನ್ನು ಹೊಂದಿದೆ. ಅಲ್ಲದೆ, ಇದು 2,840 ಎಂಎಂ ವೀಲ್‌ಬೇಸ್ ಹೊಂದಿದೆ. ಭಾರತದ ಮಾಡಲ್ ವಿನ್‌ಫಾಸ್ಟ್ ಲಿಮೋ ಗ್ರೀನ್ ಇದೇ ರೀತಿಯ ಆಯಾಮಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಸುರಕ್ಷತೆ: ಭಾರತೀಯ ಮಾರುಕಟ್ಟೆ - ಸ್ಪೆಕ್ ವಿನ್‌ಫಾಸ್ಟ್ ಲಿಮೋ ಗ್ರೀನ್ ಎಲೆಕ್ಟ್ರಿಕ್ MPV ಹಲವಾರು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರಲಿದೆ. ADAS ಪ್ಯಾಕೇಜ್‌ನ ಭಾಗವಾಗಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ನಾಲ್ಕು ಏರ್‌ಬ್ಯಾಗ್‌ಗಳು, ABS ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.


Click it and Unblock the Notifications








