Tata Nano ಅಲ್ಲ.. ಬೆಲೆಯೂ ಕಮ್ಮಿ, ಅತಿ ಶೀಘ್ರದಲ್ಲೇ ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನ VF3 ಕಾರು ಬಿಡುಗಡೆ.. ಹೇಗಿದೆ?
ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast), ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಳೆದ ವಾರವಷ್ಟೇ ದೇಶೀಯ ಮಾರುಕಟ್ಟೆಯಲ್ಲಿ ನೂತನ ವಿಎಫ್6 & ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಪರಿಚಯಿಸಿತ್ತು. ಈ ಕಾರುಗಳು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತವೆ. ಸದ್ಯ, ಕಂಪನಿಯು 3ನೇ ಎಲೆಕ್ಟ್ರಿಕ್ ಕಾರಾಗಿ 'ವಿಎಫ್3'ನ್ನು ಮಾರಾಟಕ್ಕೆ ತರಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಬನ್ನಿ.. ಈ ಕಾರಿಗೆ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಎಲ್ಲವು ಅಂದುಕೊಂಡಂತೆ ನಡೆದರೆ, ಹೊಚ್ಚ ಹೊಸ ವಿನ್‌ಫಾಸ್ಟ್ ವಿಎಫ್3 (VinFast VF3) ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, ಇದೇ ಅಕ್ಟೋಬರ್‌ನಲ್ಲಿ ಅದ್ದೂರಿಯಾಗಿಯೂ ಬಿಡುಗಡೆಗೊಳ್ಳಲಿದೆ. ಇದು ಟಾಟಾ ನ್ಯಾನೋದಂತೆ ಪುಟ್ಟ ಗಾತ್ರದ ಕಾರಾಗಿದೆ. ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದ್ದು, ರೂ.7.50 ಲಕ್ಷದಿಂದ ರೂ.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.

ಈ ಕಾರು ಜಾಗತಿಕವಾಗಿಯೂ ಸಿಗುತ್ತಿದ್ದು, ಹಲವು ದೇಶಗಳಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಹೊರಭಾಗದಲ್ಲಿ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಸೆಳೆಯುವಂತಿದೆ. ಉತ್ತಮವಾದ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ. ಎಲೆಕ್ಟ್ರಿಕ್ ಬ್ಲೂ, ಕ್ರಿಮ್ಸನ್ ರೆಡ್, ಐರಿಸ್ ಬೆರ್ರಿ, ಜೆನಿತ್ ಗ್ರೇ, ಅರ್ಬನ್ ಮಿಂಟ್, ಸಮ್ಮರ್ ಯೆಲ್ಲೋ, ರೋಸ್ ಪಿಂಕ್ ಹಾಗೂ ಇನ್ಫಿನಿಟಿ ಬ್ಲಾಂಕ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ.
ನೂತನ ವಿನ್‌ಫಾಸ್ಟ್ ವಿಎಫ್3 ಹ್ಯಾಚ್‌ಬ್ಯಾಕ್ 3,190 ಎಂಎಂ ಉದ್ದ, 1,679 ಎಂಎಂ ಅಗಲ ಹಾಗೂ 1,622 ಎಂಎಂ ಎತ್ತರವಿದೆ. 191 ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,075 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. ಬರೋಬ್ಬರಿ 1157 ಕೆಜಿ ತೂಕವು ಇದೆ.

ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 18.64 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 215 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಬಳಸಿರುವ ಎಲೆಕ್ಟ್ರಿಕ್ ಮೋಟಾರ್, 43.5 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 110 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಈ ಕಾರಿನಲ್ಲಿರುವ ಬ್ಯಾಟರಿಯು, ಫಾಸ್ಟ್ ಚಾರ್ಜರ್‌ನಲ್ಲಿ 36 ನಿಮಿಷಗಳಲ್ಲೇ 10% ರಿಂದ 70% ಚಾರ್ಜ್ ಆಗಿ ಬಿಡುತ್ತದೆ. 100 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 5.3 ಸೆಕೆಂಡುಗಳಲ್ಲಿ 0 ರಿಂದ 50 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಹೊಸ ವಿನ್‌ಫಾಸ್ಟ್ ವಿಎಫ್3 ಹ್ಯಾಚ್‌ಬ್ಯಾಕ್, ಒಟ್ಟು 4 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 285 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ಇದರ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದ್ದು, 2-ಡೋರ್ (ಬಾಗಿಲು) ಆಯ್ಕೆಯನ್ನು ಹೊಂದಿದೆ. 10 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಮ್ಯಾನುವಲ್ ಎಸಿ, ಕ್ರೂಸ್ ಕಂಟ್ರೋಲ್ ಹಾಗೂ ಫ್ರಂಟ್ ಪವರ್ ವಿಂಡೋಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಕೋ, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ತನ್ನದಾಗಿಸಿಕೊಂಡಿದೆ.
ಈ ವಿನ್‌ಫಾಸ್ಟ್ ವಿಎಫ್3 ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ರೇರ್ ವ್ಯೂ ಕ್ಯಾಮೆರಾ ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








