ಬಿಡುಗಡೆಯಾಗಿಯೇ ಆಗಿಲ್ಲ.. ನೂತನ VinFast VF6 ಎಲೆಕ್ಟ್ರಿಕ್ ಕಾರಿನ ಈ ಪ್ರಮುಖ ವಿವರಗಳು ಬಹಿರಂಗ, ಬೆಲೆ ಎಷ್ಟಿರಲಿದೆ?
ವಿಯೆಟ್ನಾಂಗೆ ಸೇರಿರುವ ವಿನ್‌ಫಾಸ್ಟ್ (VinFast) ನಂಬಿಕಾರ್ಹ ಕಾರು ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದೆ. ಅತಿ ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ವಿಎಫ್6 (VF6) ಮತ್ತು ವಿಎಫ್7 (VF7) ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಇವೆರೆಡು ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಗಳಾಗಿದ್ದು, ಪ್ರಿ ಬುಕ್ಕಿಂಗ್‌ನ್ನು ಪ್ರಾರಂಭ ಮಾಡಲಾಗಿದೆ. ಆಸಕ್ತರು ರೂ.21,000 ಮುಂಗಡ ಮೊತ್ತವನ್ನು ಪಾವತಿಸಿವುದರಿಂದಿಗೆ ಕಾಯ್ದಿರಿಸಬಹುದು. ಸದ್ಯ, ನೂತನ 'ವಿಎಫ್6' ಕಾರಿನ ಕುರಿತಂತೆ ಒಂದಷ್ಟು ವಿವರಗಳು ಕೂಡ ಬಹಿರಂಗಗೊಂಡಿವೆ.
ಈ ಕಾರು ಅರ್ಥ್ (Earth) ಹಾಗೂ ವಿಂಡ್ (Wind) ಎಂಬ ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿರಲಿದೆ. ಜೆಟ್ ಬ್ಲ್ಯಾಕ್, ಡೆಸಾಟ್ ಸಿಲ್ವರ್, ಇನ್ಫಿನಿಟಿ ಬ್ಲಾಂಕ್, ಕ್ರಿಮ್ಸನ್ ರೆಡ್, ಜೆನಿತ್ ಗ್ರೇ ಹಾಗೂ ಅರ್ಬನ್ ಮಿಂಟ್ ಎಂಬ 6 ಆಕರ್ಷಕ ಬಣ್ಣಗಳೊಂದಿಗೆ ದೊರೆಯಲಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಹೊಸ ವಿನ್‌ಫಾಸ್ಟ್ ವಿಎಫ್6 (VinFast VF6) ಎಲೆಕ್ಟ್ರಿಕ್ ಎಸ್‌ಯುವಿಯು, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ & ಟಾಟಾ ಹ್ಯಾರಿಯರ್ ಇವಿಗಳಿಂದ ಪ್ರಬಲವಾದ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಅದಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ಕನಿಷ್ಠ ರೂ.18 ಲಕ್ಷ ಹಾಗೂ ಗರಿಷ್ಠ ರೂ.24 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರಬಹುದು ಎನ್ನಲಾಗಿದೆ.
ಇದೇ ವಿಎಫ್6 ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸ ಹೊಂದಿದ್ದು, ನೋಡುಗರನ್ನು ಸೆಳೆಯುವಂತಿದೆ. 'ವಿ' ಆಕಾರಕ್ಕೆ ಹೋಲುವ ಸಿಗ್ನೇಚರ್ ಎಲ್ಇಡಿ ಹೆಡ್‌ಲೈಟ್‌ಗಳು, ಫುಲ್-ವಿಡ್ತ್ ಡಿಆರ್‌ಎಲ್‌ಗಳು ಮತ್ತು 19-ಇಂಚಿರುವ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. 4,238 ಎಂಎಂ ಉದ್ದ, 1,820 ಎಂಎಂ ಅಗಲ ಹಾಗೂ 1,594 ಎಂಎಂ ಎತ್ತರವು ಇದೆ. ಜೊತೆಗೆ 2,730 ಎಂಎಂ ಉದ್ದದ ವೀಲ್‌ಬೇಸ್‌ನ್ನು ಪಡೆದಿದೆ.

ನೂತನ ವಿಎಫ್6 ಎಲೆಕ್ಟ್ರಿಕ್ ಎಸ್‌ಯುವಿ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಭಾರತದಲ್ಲೂ ಇದೇ ಶಕ್ತಿ ಸಾಮರ್ಥ್ಯದೊಂದಿಗೆ ಮಾರಾಟಕ್ಕೆ ಬರುವ ಎಲ್ಲ ಲಕ್ಷಣಗಳಿವೆ. ಈ ಕಾರು 59.6 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 379 ರಿಂದ 410 ಕಿಲೋಮೀಟರ್ ಕ್ರಮಿಸುತ್ತದೆ.
ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗಲು ಪ್ಲ್ಯಾನ್ ಮಾಡಿದರೆ, ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 423 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ದೇಶೀಯವಾಗಿಯೂ ಪರಿಚಯಿಸುವ 'ವಿಎಫ್6' ಕಾರಿನಲ್ಲೂ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಹೇಳಲಾಗಿದೆ.

ಈ ಕಾರು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಭಾರತದಲ್ಲೂ ಹೆಚ್ಚು-ಕಮ್ಮಿ ಅದೇ ರೀತಿಯಲ್ಲಿ ಬಿಡುಗಡೆಯಾಗುವ ಎಲ್ಲ ರೀತಿಯ ಸಾಧ್ಯತೆಗಳಿವೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.9-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್-ಅಪ್ ಡಿಸ್‌ಪ್ಲೇ, ಡುಯಲ್-ಜೋನ್ ಕ್ಲೇಮೇಟ್ ಕಂಟ್ರೋಲ್ ಹಾಗೂ ರೇರ್ ಎಸಿ ವೆಂಟ್‌ಗಳನ್ನು ಪಡೆದುಕೊಂಡಿಲಿದೆ ಎಂದು ಅಂದಾಜಿಸಲಾಗಿದೆ.
ವಿದೇಶದಲ್ಲಿ ಲಭ್ಯವಿರುವ ನೂತನ 'ವಿನ್‌ಫಾಸ್ಟ್ ವಿಎಫ್6' ಎಲೆಕ್ಟ್ರಿಕ್ ಎಸ್‌ಯುವಿ ಸುರಕ್ಷತೆಗೂ ಹೆಸರುವಾಸಿಯಾಗಿದೆ. ದೇಶದಲ್ಲಿ ಬಿಡುಗಡೆಯಾಗುವ ಈ ಕಾರು, 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ - ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾದಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿರವ ನಿರೀಕ್ಷೆಯಿದೆ.


Click it and Unblock the Notifications








