ಟಾಟಾ ನ್ಯಾನೋ ಅಲ್ಲ.. ಈ ಪುಟ್ಟ ಕಾರಿಗೆ ಮುಗಿಬಿದ್ದ ವಿದೇಶಿಗರು, ಭಾರತದಲ್ಲೂ ಶೀಘ್ರ ಬಿಡುಗಡೆ.. ಕಡಿಮೆ ಬೆಲೆ?
ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast), ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಈ ಕಂಪನಿಯು ಭಾರತದ ಬೃಹತ್ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಹವಣಿಸುತ್ತಿದೆ. ಅದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದೆ. ತಮಿಳುನಾಡಿನ ತೂತುಕುಡಿಯಲ್ಲಿ ವಿಶಾಲವಾದ ಉತ್ಪಾದನಾ ಘಟಕವನ್ನು ನಿರ್ಮಿಸುತ್ತಿದೆ. ಇದೇ ಜನವರಿಯಲ್ಲಿ ಅದ್ದೂರಿಯಾಗಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಕಂಪನಿಯು ಹೊಚ್ಚ ಹೊಸ 'ವಿಎಫ್3' ಹೆಸರಿನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ್ನು ಅನಾವರಣಗೊಳಿಸಿತ್ತು. ಎಲ್ಲವು ಅಂದುಕೊಂಡಂತೆ ನಡೆದರೆ, 'ಟಾಟಾ ನ್ಯಾನೋ'ದಂತೆ ಗಾತ್ರದಲ್ಲಿ ಅತಿ ಚಿಕ್ಕದಾಗಿರುವ ಈ ಕಾರು, ಶೀಘ್ರದಲ್ಲೇ ಬಿಡುಗಡೆಯೂ ಆಗಲಿದೆ.
ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿನ್‌ಫಾಸ್ಟ್ ವಿಎಫ್3 (VinFast VF3) ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಖರೀದಿಗೆ ಲಭ್ಯವಿದ್ದು, ಭಾರೀ ಬೇಡಿಕೆಯನ್ನು ಹೊಂದಿದೆ. ಈ ಕಾರನ್ನು ಕೇವಲ ಎರಡು ತಿಂಗಳ ಹಿಂದೆಯಷ್ಟೇ ಇಂಡೋನೇಷ್ಯಾದಲ್ಲೂ ಮಾರಾಟಕ್ಕೆ ತರಲಾಗಿದ್ದು, ಬರೋಬ್ಬರಿ 400 ಯುನಿಟ್‌ಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಅಲ್ಲಿ ಐಡಿಆರ್ 227.65 ಮಿಲಿಯನ್ (11.98 ಲಕ್ಷ ಭಾರತೀಯ ರೂಪಾಯಿ) ಬೆಲೆಯನ್ನು ಹೊಂದಿದೆ.

ಭಾರತದ ಮಾರುಕಟ್ಟೆಯಲ್ಲಿ ಇದೇ ಅಕ್ಟೋಬರ್‌ನೊಳಗೆ ನೂತನ ವಿನ್‌ಫಾಸ್ಟ್ ವಿಎಫ್3 ಇವಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಅತಿ ಕಡಿಮೆ ದರದಲ್ಲೂ ಮಾರಾಟಕ್ಕೆ ಬರಬಹುದು ಎನ್ನಲಾಗಿದೆ. ಸರಿ ಸುಮಾರು ರೂ.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟವಾದ ವಿವರಗಳು ಲಭ್ಯವಾಗಲಿವೆ.
ಈ ವಿನ್‌ಫಾಸ್ಟ್ ವಿಎಫ್3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಚೆಂದದ ಹೆಡ್‌ಲೈಟ್‌ಗಳು, ಕಪ್ಪು ಬಣ್ಣದ ಬಂಪರ್ & 'ವಿ' ಅಕ್ಷರಕ್ಕೆ ಹೋಲಿಕೆಯಾಗಲಿರುವ ಟೈಲ್‌ಗೇಟ್‌ನ್ನು ಹೊಂದಿದೆ. 3,190 ಎಂಎಂ ಉದ್ದ, 1,679 ಎಂಎಂ ಅಗಲ ಮತ್ತು 1,652 ಎಂಎಂ ಎತ್ತರವಿದೆ. ಜೊತೆಗೆ 2,075 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

ಹೊಸ ವಿನ್‌ಫಾಸ್ಟ್ ವಿಎಫ್3 ಇವಿ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. ಈ ಕಾರು 18.64 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 215 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಉಪಯೋಗಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್, 43.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 110 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ನೂತನ ವಿನ್‌ಫಾಸ್ಟ್ ವಿಎಫ್3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, ಕೇವಲ 5.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಪಿಹೆಚ್ ವೇಗವನ್ನು ಪಡೆಯಲಿದೆ. ರೇರ್ ವೀಲ್ ಡ್ರೈವ್ ಟೆಕ್ನಾಲಜಿಯನ್ನು ಹೊಂದಿದೆ. ಈ ಕಾರಿನಲ್ಲಿ 4 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. 10-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಮ್ಯಾನುವಲ್ ಎಸಿ & ಫ್ರಂಟ್ ಪವರ್ ವಿಂಡೋಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ವಿನ್‌ಫಾಸ್ಟ್ ವಿಎಫ್3 ಎಲೆಕ್ಟ್ರಿಕ್ ಕಾರು ಪ್ರಯಾಣಿಕರ ರಕ್ಷಣೆಗೂ ಹೆಸರುವಾಸಿಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿದೆ. ದೇಶೀಯವಾಗಿ ಮುಂಬರಲಿರುವ ಇದೇ 'ವಿಎಫ್3' ಹ್ಯಾಚ್‌ಬ್ಯಾಕ್‌ಗೆ ಎಂಜಿ ಕಾಮೆಟ್ ಹಾಗೂ ಟಾಟಾ ಟಿಯಾಗೊ ಇವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications