VinFast: ಸದ್ದಿಲ್ಲದೇ ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನ VF6 & VF7 ಕಾರುಗಳು ವಿತರಣೆ ಶುರು.. ಬೆಲೆ ಎಷ್ಟು, ವಿಶೇಷತೆಗಳೇನು?
ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ಇದೇ ಸೆಪ್ಟೆಂಬರ್ ತಿಂಗಳಲ್ಲಿ ಹೊಚ್ಚ ಹೊಸ ವಿಎಫ್6 ಹಾಗೂ ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈಗ ಮೊದಲ ಬ್ಯಾಚ್‍ನ ಕಾರುಗಳ ವಿತರಣೆ ಶುರು ಮಾಡಲಾಗಿದ್ದು, ನೂತನ ಎಸ್‌ಯುವಿಗಳನ್ನು ಕೊಚ್ಚಿ ಹಾಗೂ ಜೈಪುರ ಸೇರಿದಂತೆ ವಿವಿಧ ನಗರಗಳ ಗ್ರಾಹಕರಿಗೂ ತಲುಪಿಸಲಾಗುತ್ತಿದೆ. ಅವರು ಕೂಡ ಖುಷಿ ಖುಷಿಯಾಗಿ ವಿಎಫ್6 & ವಿಎಫ್7 ಕಾರುಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿವೆ.
ವಿನ್‌ಫಾಸ್ಟ್ ವಿಎಫ್6 (VinFast VF6) ವಿಶೇಷತೆಗಳೇನು:
ಇದು ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಕನಿಷ್ಠ ರೂ.16.49 ಲಕ್ಷ ಹಾಗೂ ಗರಿಷ್ಠ ರೂ.18.29 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅರ್ಥ್, ವಿಂಡ್ ಹಾಗೂ ವಿಂಡ್ ಇನ್ಫಿನಿಟಿ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಕ್ರಿಮ್ಸನ್ ರೆಡ್, ಜೆನಿತ್ ಗ್ರೇ, ಅರ್ಬನ್ ಮಿಂಟ್, ಜೆಟ್ ಬ್ಲ್ಯಾಕ್ ಹಾಗೂ ಡೆಸ್ಯಾಟ್ ಸಿಲ್ವರ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

ಈ ಕಾರು 59.6 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 470 ಕಿ.ಮೀವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 175 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 8.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ನೂತನ 'ವಿನ್‌ಫಾಸ್ಟ್ ವಿಎಫ್6' ಎಸ್‌ಯುವಿಯು 5 ಆಸನಗಳನ್ನು ತನ್ನದಾಗಿಸಿಕೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಸಂಚರಿಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 423 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. 190 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,730 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.9 ಇಂಚು), ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, 8-ಸ್ಪೀಕರ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್ ಹಾಗೂ ಯುಎಸ್‌ಬಿ ಸಿ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ವಿನ್‌ಫಾಸ್ಟ್ ವಿಎಫ್7 (VinFast VF7) ಹೇಗಿದೆ:
ಈ ರೂ.20.89 ಲಕ್ಷದಿಂದ ರೂ.25.49 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಅರ್ಥ್, ವಿಂಡ್, ವಿಂಡ್ ಇನ್ಫಿನಿಟಿ, ಸ್ಕೈ ಹಾಗೂ ಸ್ಕೈ ಇನ್ಫಿನಿಟಿ ಎಂಬ 5 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಡೆಸಾಟ್ ಸಿಲ್ವರ್, ಇನ್ಫಿನಿಟಿ ಬ್ಲಾಂಕ್, ಕ್ರಿಮ್ಸನ್ ರೆಡ್, ಜೆನಿತ್ ಗ್ರೇ ಹಾಗೂ ಅರ್ಬನ್ ಮಿಂಟ್ ಬಣ್ಣಗಳೊಂದಿಗೂ ದೊರೆಯುತ್ತದೆ.

ಹೊಸ 'ವಿನ್‌ಫಾಸ್ಟ್ ವಿಎಫ್7' ಎಸ್‌ಯುವಿಯು 59.6 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) 70.8 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 438 ರಿಂದ 532 ಕಿ.ಮೀವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 9.5 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಇದು 5 ಆಸನಗಳನ್ನು ಪಡೆದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.9 ಇಂಚು), ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಗ್ಲಾಸ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ಡುಯಲ್ ಜೋನ್ ಆಟೋ ಎಸಿ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ತನ್ನದಾಸಿಕೊಂಡಿದೆ.


Click it and Unblock the Notifications








