VinFast: 500+ ಕಿ.ಮೀ ರೇಂಜ್.. ಹೊಸ ವಿನ್‌ಫಾಸ್ಟ್ ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿ ಮಾರಾಟಕ್ಕೆ, ಬೆಲೆ ಎಷ್ಟು, ವಿಶೇಷತೆಗಳೇನು?
ಬಹುನೀರಿಕ್ಷಿತ ವಿನ್‌ಫಾಸ್ಟ್ ವಿಎಫ್7 (VinFast VF7) ಎಲೆಕ್ಟ್ರಿಕ್ ಎಸ್‌ಯುವಿ, ಶನಿವಾರ ಮಾರಾಟಕ್ಕೆ ಬಂದಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಮತ್ತು ವಿವಿಧ ಅತುತ್ತಮವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಈ ಕಾರು ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9e) ಹಾಗೂ ಟಾಟಾ ಹ್ಯಾರಿಯರ್ (Tata Harrier EV) ಮಾಡೆಲ್‌ಗಳಿಗೂ ಪ್ರಬಲವಾದ ಪ್ರತಿಸ್ಪರ್ಧಿಯಾಗಲಿದೆ. ಬನ್ನಿ, ಈ ನೂತನ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಹೊಚ್ಚ ಹೊಸ ವಿನ್‌ಫಾಸ್ಟ್ ವಿಎಫ್7 ಎಲೆಕ್ಟ್ರಿಕ್ ಕಾರು, ರೂ.20.89 ಲಕ್ಷದಿಂದ ರೂ.25,49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅರ್ಥ್, ವಿಂಡ್, ವಿಂಡ್ ಇನ್ಫಿನಿಟಿ, ಸ್ಕೈ ಹಾಗೂ ಸ್ಕೈ ಇನ್ಫಿನಿಟಿ ಎಂಬ 5 ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್‌ಗಳು, 'ವಿ' ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಫ್ಲಶ್ - ಡೋರ್ ಹ್ಯಾಂಡಲ್‌ಗಳು ಹಾಗೂ 18 ಇಂಚಿರುವ ಅಲಾಯ್ ವೀಲ್‌ಗಳನ್ನು ಪಡೆದಿದೆ. ಜೆಟ್ ಬ್ಲ್ಯಾಕ್, ಡೆಸಾಟ್ ಸಿಲ್ವರ್, ಇನ್ಫಿನಿಟಿ ಬ್ಲಾಂಕ್, ಕ್ರಿಮ್ಸನ್ ರೆಡ್, ಜೆನಿತ್ ಗ್ರೇ ಹಾಗೂ ಅರ್ಬನ್ ಮಿಂಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.
ನೂತನ ವಿನ್‌ಫಾಸ್ಟ್ ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿ ದೊಡ್ಡ ಗಾತ್ರದಲ್ಲಿದೆ. 4,545 ಎಂಎಂ ಉದ್ದ, 1,890 ಎಂಎಂ ಅಗಲ & 1,636 ಎಂಎಂ ಎತ್ತರ ಕೂಡ ಇದೆ. ಹಾಗೆಯೇ 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,840 ವೀಲ್‌ಬೇಸ್‌ನ್ನು ಪಡೆದಿದೆ.

ಈ ಕಾರು 5 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ದೂರದ ಊರುಗಳಿಗೆ ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ತೆಗದುಕೊಂಡು ಹೋಗಲು 537 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ಹೊಸ ವಿನ್‌ಫಾಸ್ಟ್ ವಿಎಫ್7 ಕಾರು ಬಲಿಷ್ಠವಾದ ಎರಡು ಪವರ್‌ಟ್ರೇನ್‌ನ್ನು ಹೊಂದಿದೆ. 59.6 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ಭರ್ತಿ ಚಾರ್ಜ್‌ನಲ್ಲಿ 438 ಕಿಲೋಮೀಟರ್ ಓಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್, 175 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 250 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ಮತ್ತೊಂದು 70.8 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಪಡೆದಿರುವ ಮಾಡೆಲ್, ಪೂರ್ತಿ ಚಾರ್ಜ್‌ನಲ್ಲಿ 532 ಕಿಲೋಮೀಟರ್ ಕ್ರಮಿಸುತ್ತದೆ. ಇದರೊಳಗೆ ಉಪಯೋಗಿಸಿರುವ ಡುಯಲ್ ಎಲೆಕ್ಟ್ರಿಕ್ ಮೋಟಾರ್, 201 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 310 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ.
ವಿನ್‌ಫಾಸ್ಟ್ ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಯ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 12.9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಗ್ಲಾಸ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 8-ವೇ ಪವರ್ ಅಡ್ಜಸ್ಟೇಬಲ್ ಡ್ರೈವರ್ ಸೀಟ್ ಹಾಗೂ ಡುಯಲ್ - ಜೋನ್ ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 7 ಏರ್‌ಬ್ಯಾಗ್‌ಗಳು, ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆಯುವ ಹಾದಿಯಲ್ಲಿಯೂ ಇದೆ.


Click it and Unblock the Notifications








