Volvo: 490 ಕಿ.ಮೀ ರೇಂಜ್.. ಬಹುನಿರೀಕ್ಷಿತ ವೋಲ್ವೋ ಇಎಕ್ಸ್30 ಎಲೆಕ್ಟ್ರಿಕ್ ಕಾರು ಬಿಡುಗಡೆ, ಬೆಲೆ ಎಷ್ಟು, ವಿಶೇಷತೆಗಳೇನು?
ದೇಶೀಯ ಮಾರುಕಟ್ಟೆಯಲ್ಲಿ ಮಂಗಳವಾರ ಹೊಚ್ಚ ಹೊಸ ವೋಲ್ವೋ ಇಎಕ್ಸ್30 (Volvo EX30) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ಈ ಕಾರಿನ ದರವೆಷ್ಟು.. ವಿಶೇಷೆತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ನೂತನ ವೋಲ್ವೋ ಇಎಕ್ಸ್30 ಎಲೆಕ್ಟ್ರಿಕ್ ಎಸ್‌ಯುವಿ, ಬರೋಬ್ಬರಿ ರೂ.41 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಆದರೆ, ಅಕ್ಟೋಬರ್ 19ರ ಮೊದಲು ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ರೂ.39.99 ಲಕ್ಷ ಬೆಲೆಯಲ್ಲಿ ಸಿಗಲಿದೆ. ನವೆಂಬರ್ ಮೊದಲ ವಾರದಿಂದ ವಿತರಣೆಗಳು ಶುರುವಾಗಲಿದೆ ಎಂದು ಕಂಪನಿಯು ಹೇಳಿದೆ.

ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಗೀಲಿಸ್ ಎಸ್ಇಎ ಪ್ಲಾಟ್‌ಫಾರ್ಮ್‌ನ್ನು ಆಧರಿಸಿದೆ. ಕ್ಲೋಸ್ಡ್-ಆಫ್ ಗ್ರಿಲ್, 'ಥಾರ್ಸ್ ಹ್ಯಾಮರ್' ಎಲ್ಇಡಿ ಹೆಡ್‌ಲೈಟ್‌ಗಳು, ಸ್ಪ್ಲಿಟ್ ಎಲ್ಇಡಿ ಟೈಲ್‌ಲೈಟ್‌ಗಳು ಹಾಗೂ 19 ಇಂಚಿನ ಏರೋ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಮಾಸ್ ಯೆಲ್ಲೋ, ಕ್ರಿಸ್ಟಲ್ ವೈಟ್, ಓನಿಕ್ಸ್ ಬ್ಲ್ಯಾಕ್ ಹಾಗೂ ವೇಪರ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಪಡೆದಿದೆ.
ಇದು ಹೆಚ್ಚು ವಿಶಾಲ ಗಾತ್ರದಲ್ಲಿದೆ. 4,233 ಎಂಎಂ ಉದ್ದ, 1,838 ಎಂಎಂ ಅಗಲ ಹಾಗೂ 1,550 ಎಂಎಂ ಎತ್ತರ ಕೂಡ ಇದೆ. ಜೊತೆಗಿದು 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,650 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,900 ಕೆಜಿ ತೂಕವಿದೆ.

ಹೊಸ ವೋಲ್ವೋ ಇಎಕ್ಸ್30 ಎಲೆಕ್ಟ್ರಿಕ್ ಕಾರು 5 ಆಸನ ಆಯ್ಕೆ ವ್ಯವಸ್ಥೆ ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 318 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ಈ ಕಾರು ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. 69 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 490 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಸ್ಟ್ಯಾಂಡರ್ಡ್ ಆಗಿ 11 ಕೆಡಬ್ಲ್ಯೂ ಸಾಮರ್ಥ್ಯದ ಚಾರ್ಜರ್ ಆಯ್ಕೆಯನ್ನು ಹೊಂದಿದೆ.
ಇದು ರೇರ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ನ್ನು ಹೊಂದಿದೆ. 268 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 343 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 5.3 ಸೆಕೆಂಡುಗಳಲ್ಲಿ 0 ರಿಂದ 100 ವೇಗವನ್ನು ಪಡೆಯಲಿದೆ.
ಹೊಸ ವೋಲ್ವೋ ಇಎಕ್ಸ್30 ಎಲೆಕ್ಟ್ರಿಕ್ ಎಸ್‌ಯುವಿ ವಿನ್ಯಾಸವು ಉತ್ತಮವಾಗಿದೆ. 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 2-ಜೋನ್ ಅಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಆಂಬಿಯೆಂಟ್ ಲೈಟಿಂಗ್, 1040 ಡಬ್ಲ್ಯೂ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಹಾಗೂ ಡಿಜಿಟಲ್ ಕೀ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಕ್ರೂಸ್ ಕಂಟ್ರೋಲ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಇದಕ್ಕೆ ಹುಂಡೈ ಐಯೋನಿಕ್ 5, ಬಿವೈಡಿ ಸೀಲಿಯನ್ 7, ಬಿಎಂಡಬ್ಲ್ಯೂ ಐಎಕ್ಸ್1, ಕಿಯಾ ಇವಿ6 ಹಾಗೂ ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








