ಐಟಿ ಅಲ್ಲ.. ಆಟೋಮೊಬೈಲ್‌ನಲ್ಲೂ ಕರ್ನಾಟಕ ಮುಂದು! ಬೆಂಗಳೂರು ಇವಿ ಹಬ್

ಕರ್ನಾಟಕವು ಮಾಹಿತಿ ತಂತ್ರಜ್ಞಾನ (IT) ಉದ್ಯಮದಲ್ಲಿ ದೊಡ್ಡ ಹೆಸರನ್ನು ಮಾಡಿದೆ. ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ದೊಡ್ಡ-ದೊಡ್ಡ ಕಚೇರಿಗಳಿದ್ದು, ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ರಾಜ್ಯವು ದೇಶದ ಆರ್ಥಿಕತೆಗೂ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಅದೇ ರೀತಿಯಲ್ಲಿ ಆಟೋಮೊಬೈಲ್ (Automobile) ಕ್ಷೇತ್ರದಲ್ಲೂ ಮುಂದಿದೆ. ಟೊಯೊಟಾ, ವೋಲ್ವೋ, ಮರ್ಸಿಡಿಸ್ ಹಾಗೂ ಸ್ಕ್ಯಾನಿಯಾದಂತಹ ಕಂಪನಿಗಳಿಗೆ ನೆಲೆಯಾಗಿದೆ.

ದೇಶದ ಒಟ್ಟು ಆಟೋಮೊಬೈಲ್ ಉತ್ಪಾದನೆಯಲ್ಲಿ ಕರ್ನಾಟಕ 4ನೇ ಅತಿ ದೊಡ್ಡ ರಾಜ್ಯವಾಗಿ ಹೊರಹೊಮ್ಮಿದ್ದು, ಶೇಕಡ 8.5% ಪಾಲನ್ನು ಹೊಂದಿದೆ. ಎಲೆಕ್ಟ್ರಿಕ್ ವಾಹನಗಳಿಗೆ (Electric Vehicle) ಸಂಬಂಧಿಸಿದ 45ಕ್ಕೂ ಅಧಿಕ ನವೋದ್ಯಮಗಳು (ಸ್ಟಾರ್ಟ್ಅಪ್‌) ರಾಜ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.

What is Karnataka s Contribution To The Country s Automobile Sector You Should Must Know

ಹಲವು ಉತ್ಪಾದನಾ ಘಟಕಗಳ ತವರೂರು

ಮೈಸೂರಿನಲ್ಲಿ ಟಿವಿಎಸ್ ಮೋಟಾರ್ ಹಾಗೂ ಕೋಲಾರದಲ್ಲಿ ಹೋಂಡಾ ಮೋಟಾರ್ ಸೈಕಲ್ಸ್ & ಸ್ಕೂಟರ್‌ ಇಂಡಿಯಾ ಕಂಪನಿಗಳು ಬೃಹತ್ ದ್ವಿಚಕ್ರ ವಾಹನಗಳ (Two Wheeler) ತಯಾರಿಕಾ ಘಟಕವನ್ನು ಹೊಂದಿವೆ. ರಾಮನಗರದ ಬಿಡದಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ಗೆ ಸೇರಿದ ಅತಿ ದೊಡ್ಡ ಉತ್ಪಾದನಾ ಘಟಕವಿದ್ದು, ವಿವಿಧ ಕಾರುಗಳನ್ನು ಸಿದ್ಧಪಡಿಸಲಾಗುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ವೋಲ್ವೋ, ಧಾರವಾಡದಲ್ಲಿ ಟಾಟಾ ಮೋಟಾರ್ಸ್ ಹಾಗೂ ಕೋಲಾರದಲ್ಲಿ ಸ್ಕ್ಯಾನಿಯಾ ಕಂಪನಿಗಳ ತಯಾರಿಕಾ ಘಟಕಗಳಿವೆ. ಇಲ್ಲಿ ಬಸ್ ಹಾಗೂ ಟ್ರಕ್ ಸೇರಿದಂತೆ ಹಲವು ವಾಣಿಜ್ಯ ವಾಹನಗಳನ್ನು (Commercial Vehicle) ಅಧಿವೃದ್ದಿಪಡಿಸಲಾಗುತ್ತದೆ.

What is Karnataka s Contribution To The Country s Automobile Sector You Should Must Know

ಬೃಹತ್ ವಹಿವಾಟು

2023-24ರಲ್ಲಿ ಕರ್ನಾಟಕವು ರೂ.3,700 ಕೋಟಿ ಮೌಲ್ಯದ ವಾಹನಗಳು ಹಾಗೂ 4,200 ಕೋಟಿ ಮೌಲ್ಯದ ಬಿಡಿ ಭಾಗಗಳನ್ನು (ಆಟೋ ಕಂಪೋನೆಂಟ್) ರಫ್ತು ಮಾಡಿದೆ. ಈ ಮೂಲಕ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಗುಜರಾತ್ ಹಾಗೂ ಹರಿಯಾಣ ರಾಜ್ಯಗಳಿಗೆ ದೊಡ್ಡ ಮಟ್ಟದಲ್ಲಿ ಪೈಪೋಟಿ ನೀಡುತ್ತಿದೆ.

ಭಾರೀ ಸಂಖ್ಯೆಯಲ್ಲಿ ಉದ್ಯೋಗಿಗಳು & ದೊಡ್ಡ ಸಂಖ್ಯೆಯಲ್ಲಿ ವಾಹನಗಳ ನೋಂದಣಿ

ಕರ್ನಾಟಕದ ಆಟೋಮೊಬೈಲ್ ವಲಯದಲ್ಲಿ ಪ್ರತ್ಯಕ್ಷವಾಗಿ 55,000ಕ್ಕೂ ಅಧಿಕ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರೋಕ್ಷವಾಗಿಯೂ ಸಾವಿರಾರು ಜನರಿಗೆ ಉದ್ಯೋಗಗಳು ಲಭಿಸಿವೆ. ಆಂತರಿಕವಾಗಿಯೂ ಕರ್ನಾಟಕ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಇದೇ ವರ್ಷದ ಮೇ ಹೊತ್ತಿಗೆ ರಾಜ್ಯದಲ್ಲಿ ಒಟ್ಟು 3.37 ಕೋಟಿ ವಾಹನಗಳು ನೋಂದಣಿಯಾಗಿವೆ. ಅದರಲ್ಲಿ ಬೆಂಗಳೂರು ನಗರ ಒಂದರಲೇ 1.24 ಕೋಟಿ ವಾಹನಗಳಿವೆ.

What is Karnataka s Contribution To The Country s Automobile Sector You Should Must Know

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ವ್ಯಾಪಕ ಬೆಂಬಲ

ಬೆಂಗಳೂರು ಇವಿ ಹಬ್: ರಾಜ್ಯ ರಾಜಧಾನಿಯು ಇವಿ (ಎಲೆಕ್ಟ್ರಿಕ್ ವೆಹಿಕಲ್) ಹಬ್ ಆಗಿ ಖ್ಯಾತಿ ಗಳಿಸುತ್ತಿದೆ. ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ, ಅಲ್ಟ್ರಾವೈಲೆಟ್ ಆಟೋಮೋಟಿವ್, ಒಬೆನ್ ಎಲೆಕ್ಟ್ರಿಕ್, ರಿವರ್ ಮೊಬಿಲಿಟಿ, ಇಂಗೋ ಎಲೆಕ್ಟ್ರಿಕ್, ಸಿಂಪಲ್ ಎನರ್ಜಿಗಳು ನಗರದಲ್ಲೇ ಮುಖ್ಯ ಕಚೇರಿಯನ್ನು ಹೊಂದಿವೆ.

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ: 2025ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾರುವಲ್ಲಿ ಕರ್ನಾಟಕವು 3ನೇ ಸ್ಥಾನದಲ್ಲಿದೆ. ಒಟ್ಟು 1,73,559 ಯುನಿಟ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟಲಾಗಿದೆ. ಇದರೊಂದಿಗೆ ಶೇಕಡ 2% ಬೆಳವಣಿಗೆ ಸಾಧಿಸಲಾಗಿದೆ. 2024 ಹಣಕಾಸು ವರ್ಷದಲ್ಲಿ 1,70,475 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಚಾರ್ಜಿಂಗ್ ಮೂಲಸೌಕರ್ಯಕ್ಕೆ ಒತ್ತು: ದೇಶದಲ್ಲೇ ಕರ್ನಾಟಕವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದೆ. ಒಟ್ಟು 5,765 ಚಾರ್ಜಿಂಗ್ ಸ್ಟೇಷನ್‌ಗಳಿವೆ. 5,479 ಚಾರ್ಜಿಂಗ್ ಸ್ಟೇಷನ್‌ಗಳ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಕಂಪನಿಗಳು ಹೊತ್ತಿವೆ. 195 ಸ್ಟೇಷನ್‌ಗಳನ್ನು ಬೆಸ್ಕಾಂ ನಿರ್ವಹಣೆ ಮಾಡುತ್ತಿದೆ.

ರಾಜ್ಯ ಸರ್ಕಾರದಿಂದಲೂ ಉತ್ತೇಜನ: ಕರ್ನಾಟಕ ಸರ್ಕಾರವು 'ಸ್ವಚ್ಛ ಚಲನಶೀಲತೆ ನೀತಿ 2025-30'ನ್ನು ಘೋಷಿಸಿದೆ. ಇದರೊಂದಿಗೆ ಸ್ವಚ್ಛ ಚಲನಶೀಲತಾ ಕ್ಷೇತ್ರದಲ್ಲಿ ರೂ.50,000 ಕೋಟಿ ಹೊಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹಾಕಿಕೊಂಡಿದೆ. ಎಲೆಕ್ಟ್ರಿಕ್ ವಾಹನೋದ್ಯಮದಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಸಲು ಸಹ ಉದ್ದೇಶಿಸಿದೆ.

ಒಟ್ಟಾರೆಯಾಗಿ ಆಟೋಮೊಬೈಲ್ ವಲಯದಲ್ಲೂ ಕರ್ನಾಟಕ ಮುನ್ನುಗುತ್ತಿದೆ. ಈ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ವಿವಿಧ ರಾಜ್ಯಗಳಿಗೂ ಸವಾಲೆಸೆಯುತ್ತಿದೆ. ಮುಂಬರುವ ಕೆಲವೇ ವರ್ಷಗಳಲ್ಲಿ ದೇಶೀಯ ವಾಹನೋದ್ಯಮದಲ್ಲಿ ಮೊದಲ ಸ್ಥಾನಕ್ಕೆ ಬಂದರು ಅಚ್ಚರಿಯಿಲ್ಲ. ಜೊತೆಗೆ ಲಕ್ಷಾಂತರ ಜನರಿಗೂ ಉದ್ಯೋಗ ದೊರೆಯುವ ನಿರೀಕ್ಷೆಯಿದೆ.

Article Published On: Wednesday, August 20, 2025, 11:35 [IST]
English summary
What is karnatakas contribution to the countrys automobile sector you should must know
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+