ಒಂದೊಳ್ಳೆ ಫ್ಯಾಮಿಲಿ ಕಾರು ಖರೀದಿಸಲು ಗೊಂದಲವೇ? ತುಂಬಾ ಸಿಂಪಲ್... ಇವು ತಿಳಿದರೆ ನೀವೆ ಪಂಟರು!
ಭಾರತದಲ್ಲಿ ಅತ್ಯುತ್ತಮ ಫ್ಯಾಮಿಲಿ ಕಾರನ್ನು ಹುಡುಕುವುದು ಕಷ್ಟವೇನಲ್ಲ, ಎಲ್ಲಾ ಪ್ರಯಾಣಿಕರು ಮತ್ತು ಸರಕು - ಸಾಮಾನುಗಳನ್ನು ಸಾಗಿಸಲು ಸಾಕಷ್ಟು ಸ್ಥಳಾವಕಾಶ, ಪ್ರತಿ ಪ್ರಯಾಣವನ್ನು ಆನಂದದಾಯಕವಾಗಿಸುವ ಅನುಕೂಲಕರ ವೈಶಿಷ್ಟ್ಯಗಳನ್ನು ಒದಗಿಸುವ ಕಾರುಗಳು ಭಾರತದಲ್ಲಿ ತುಂಬಾನೇ ಇವೆ. ದೊಡ್ಡ ಕುಟುಂಬಗಳಿಗೆ 7 - ಸೀಟರ್ ಆಯ್ಕೆಗಳು, ಚಾಲನಾ ವೆಚ್ಚವನ್ನು ನಿರ್ವಹಿಸಲು ಇಂಧನ ದಕ್ಷತೆ, ಸೌಕರ್ಯ, ಮನರಂಜನೆಯನ್ನು ಹೆಚ್ಚಿಸುವ ಇತ್ತೀಚಿನ ಕಾರುಗಳನ್ನು ಹುಡುಕುಬೇಕಷ್ಟೆ. ನಿಮ್ಮ ಅಗತ್ಯೆಗಳಿಗೆ ತಕ್ಕ ಕಾರನ್ನು ಹುಡುಕುವ ಮುನ್ನ ಏನೆಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ.
ಮೊದಲು ಟೆಸ್ಟ್ ಡ್ರೈವ್ ಮಾಡಿ: ನಿಮ್ಮ ಕುಟುಂಬದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರಿನ ಸೌಕರ್ಯ, ನಿರ್ವಹಣೆ ಮತ್ತು ಬಳಕೆಯ ಸುಲಭತೆಯನ್ನು ನಿರ್ಣಯಿಸಲು ಮೊದಲು ಟೆಸ್ಟ್ ಡ್ರೈವ್ ಮಾಡಿ. ಆಸನ ಸೌಕರ್ಯ, ಶಬ್ದ ಮಟ್ಟಗಳು, ವೇಗವರ್ಧನೆ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ಗಮನ ಕೊಟ್ಟು ಪರಿಶೀಲಿಸಬೇಕು. ಆತ್ಮವಿಶ್ವಾಸದ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯಬೇಡಿ, ವಿವಿಧ ಮಾಡಲ್‌ಗಳನ್ನು ಟೆಸ್ಟ್ ಡ್ರೈವ್ ಮಾಡಿ ಒಳ್ಳೆಯ ಕಾರನ್ನು ಆಯ್ಕೆ ಮಾಡಿ.

ಸೂಕ್ತವಾದ ಆಸನ ಸಾಮರ್ಥ್ಯ: ನಿಮ್ಮ ಸ್ಥಳಾವಕಾಶದ ಅವಶ್ಯಕತೆಗಳನ್ನು ಮೊದಲು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ದೊಡ್ಡ ಕುಟುಂಬಗಳಿಗೆ 7 - ಆಸನಗಳ ಕಾರು ಅತ್ಯುತ್ತಮ ಆಯ್ಕೆಯಾಗಿದೆ. ಟೊಯೋಟಾ ಇನ್ನೋವಾ, ಹುಂಡೈ ಅಲ್ಕಜಾರ್, ಮಾರುತಿ ಎರ್ಟಿಗಾ, ರೆನಾಲ್ಟ್ ಟ್ರೈಬರ್, ಕಿಯಾ ಕಾರೆನ್ಸ್, ಮಹೀದ್ರಾ ಸ್ಕಾರ್ಪಿಯೋನಂತಹ ಕಾರುಗಳು ಈ ವರ್ಗದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಾಗಿವೆ. ವಿಶಾಲವಾದ ಆಸನ ಮತ್ತು ಸೌಕರ್ಯವನ್ನು ಒದಗಿಸುತ್ತವೆ, ನಿಮ್ಮ ಬಜೆಟ್ ನೋಡಿಕೊಂಡು ಖರೀದಿಸಬೇಕು.
ಸುರಕ್ಷತೆಗೆ ಆದ್ಯತೆ ನೀಡಿ: 7 - ಸೀಟರ್ ಕಾರನ್ನು ಆಯ್ಕೆಮಾಡುವಾಗ ಸುರಕ್ಷತೆಯು ನಿಮ್ಮ ಪ್ರಮುಖ ಆದ್ಯತೆಯಾಗಿರಬೇಕು. ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD) ಜೊತೆಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿರುವ ಕಾರಿಗೆ ಪ್ರಾಮುಖ್ಯತೆ ನೀಡಿ. ಎಲ್ಲಾ ಪ್ರಯಾಣಿಕರನ್ನು, ವಿಶೇಷವಾಗಿ ಮಕ್ಕಳನ್ನು ರಕ್ಷಿಸಲು ಇಂತಹ ವೈಶಿಷ್ಟ್ಯಗಳು ನಿರ್ಣಾಯಕವಾಗಿವೆ.

ಸ್ಥಳ ಮತ್ತು ಸೌಕರ್ಯ: ಸಾಕಷ್ಟು ಲೆಗ್‌ರೂಮ್, ಹೆಡ್‌ರೂಮ್ ಮತ್ತು ಸೊಂಟಕ್ಕೆ ಉತ್ತಮ ಬೆಂಬಲ ನೀಡುವ ಸೀಟ್‌ಗಳು ಇರಬೇಕು. ವಿಶೇಷವಾಗಿ ನೀವು ಆಗಾಗ್ಗೆ ಲಾಂಗ್ ಡ್ರೈವ್ ಓಡಿಸುವಾಗ ಈ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲಾ ಪ್ರಯಾಣಿಕರಿಗೆ ಉತ್ತಮ ಕ್ಯಾಬಿನ್ ಸ್ಥಳ ಮತ್ತು ದಿನಸಿ ವಸ್ತುಗಳು, ಸಾಮಾನುಗಳಿಗಾಗಿ ಉದಾರವಾದ ಬೂಟ್ ಜಾಗವನ್ನು ಪರಿಗಣಿಸಿ, ಇದು ಕುಟುಂಬದೊಂದಿಗೆ ಪ್ರಯಾಣಿಸುವಾಗ ಮುಖ್ಯವಾಗಿದೆ.
ವೈಶಿಷ್ಟ್ಯ - ಭರಿತವಾಗಿರಲಿ: ಫ್ಯಾಮಿಲಿ ಕಾರಿನಲ್ಲಿ ಎಸಿ, ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಮಾರ್ಟ್‌ಫೋನ್ ಸಂಪರ್ಕ, USB ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಹಿಂಭಾಗದ AC ವೆಂಟ್‌ಗಳು ಇರಬೇಕು. ಇವು ಬೇಸಿಕ್ ಫೀಚರ್ಸ್ ಆಗಿದ್ದು, ಮಕ್ಕಳೊಂದಿಗೆ ಚಾಲನೆ ಮತ್ತು ಪ್ರಯಾಣವನ್ನು ಸುಲಭಗೊಳಿಸುತ್ತದೆ. ಈ ಫೀಚರ್ಸ್ ಚಾಲಕ ಮತ್ತು ಪ್ರಯಾಣಿಕರಿಬ್ಬರಿಗೂ ಒಟ್ಟಾರೆ ಪ್ರಯಾಣ ಅನುಭವವನ್ನು ಸುಗಮವಾಗಿಸುತ್ತದೆ.

ಚಾಲನಾ ಸೌಕರ್ಯ: ನಗರ ಸಂಚಾರ ಮತ್ತು ಹೆದ್ದಾರಿಗಳಲ್ಲಿ ಚಾಲನೆ ಮಾಡಲು ಸುಲಭವಾಗಿರಬೇಕು. ಅಂದರೆ ಸುಗಮ ಸ್ಟೀರಿಂಗ್, ಉತ್ತಮ ಸಸ್ಪೆನ್ಷನ್ ಇದ್ದರೆ ಚೆನ್ನಾಗಿರುತ್ತದೆ. ಏಕೆಂದರೆ ಇವು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಗುಂಡಿಗಳು ಮತ್ತು ಅಸಮ ರಸ್ತೆಗಳನ್ನು ನಿರ್ವಹಿಸಲು ಆರಾಮದಾಯಕ ಸವಾರಿಯನ್ನು ನೀಡುತ್ತವೆ. ಇದು ಚಾಲಕನಿಗೂ ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ವಾಹನದಲ್ಲಿರುವ ಎಲ್ಲರಿಗೂ ಸೌಕರ್ಯವನ್ನು ನೀಡುತ್ತದೆ.
ಮಾರಾಟದ ನಂತರದ ಸೇವೆ ಮತ್ತು ವಾರೆಂಟಿ: ವಿಸ್ತೃತ ಸರ್ವಿಸ್ ನೆಟ್‌ವರ್ಕ್ ಹೊಂದಿರುವ ಬ್ರ್ಯಾಂಡ್ ಅನ್ನು ಆಯ್ಕೆ ಮಾಡುವುದು ತುಂಬಾ ಮುಖ್ಯ. ಭಾರತದಾದ್ಯಂತ ವ್ಯಾಪಕವಾದ ಸರ್ವಿಸ್ ನೆಟ್‌ವರ್ಕ್ ಬೆಂಬಲವು ನಿಮ್ಮ ಕಾರಿಗೆ ಸೇವಾ ಕೇಂದ್ರಗಳು, ಒರಿಜಿನಲ್ ಬಿಡಿ ಭಾಗಗಳು ಮತ್ತು ತ್ವರಿತ ದುರಸ್ತಿಗಳಿಗೆ ಸುಲಭ ಪ್ರವೇಶದೊಂದಿಗೆ ದೀರ್ಘ ಕಾಲ ಉತ್ತಮ ಸ್ಥಿತಿಯಲ್ಲಿ ಉಳಿಯುವುದನ್ನು ಖಚಿತಪಡಿಸುತ್ತದೆ.


Click it and Unblock the Notifications








