Mahindra: ಇಂಧನವಿಲ್ಲದೆ 200 ಕಿ.ಮೀ ಓಡಬಲ್ಲದು, ನಿನ್ನೆಯಷ್ಟೆ ಬಿಡುಗಡೆ: ಬೆಲೆಯೆಷ್ಟು, ವಿಶೇಷತೆಗಳೇನು?
ಎಲೆಕ್ಟ್ರಿಕ್ ವಾಣಿಜ್ಯ ವಾಹನ ತಯಾರಕ ಕಂಪನಿಯಾದ 'ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ', ನಿನ್ನೆಯಷ್ಟೆ ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನವಾದ 'ಮಹೀಂದ್ರಾ ಉಡೋ' (Mahindra UDO) ವನ್ನು ಬಿಡುಗಡೆ ಮಾಡಿದೆ. ಈ ವಾಹನವನ್ನು ವಿಮಾನದಿಂದ ಸ್ಫೂರ್ತಿ ಪಡೆದು ವಿನ್ಯಾಸಗೊಳಿಸಲಾಗಿದ್ದು "ಆಟೋಪ್ಲೇನ್" ಎಂದು ಕಂಪನಿ ಕರೆದಿದೆ. ಹಿಂದಿಯಲ್ಲಿ 'ಉಡೋ' ಎಂಬ ಪದದ ಅರ್ಥ ಹಾರುವುದು. ಮಹೀಂದ್ರಾ ಉಡೋ ಗ್ರಾಹಕರ ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡಿ, ಅವರು ಜೀವನದಲ್ಲಿ ಹೆಚ್ಚಿನ ಎತ್ತರಕ್ಕೆ ಏರಲು ಸಹಾಯ ಮಾಡುವುದು ಇದರ ಗುರಿಯಾಗಿದೆ ಎಂದು ಹೇಳಿದೆ.
ಹೊಸ ಮಹೀಂದ್ರಾ ಉಡೋ ಬೆಲೆಯು ರೂ. 3,84,299 (ಎಕ್ಸ್ - ಶೋರೂಂ) ಆಗಿದ್ದು, ಆರಂಭದಲ್ಲಿ ಸೀಮಿತ ಅವಧಿಗೆ ಉಡೋವನ್ನು ಕೇವಲ ರೂ. 3,58,999 (ಎಕ್ಸ್ - ಶೋರೂಂ) ಬೆಲೆಗೆ ನೀಡಲಾಗುವುದು ಎಂದು ಮಹೀಂದ್ರಾ ತಿಳಿಸಿದೆ. ಮಹೀಂದ್ರಾ ಉಡೋ ವಾಹನದ ಮೇಲೆ 1.5 ಲಕ್ಷ ಕಿ.ಮೀ ಅಥವಾ 6 ವರ್ಷಗಳವರೆಗೆ ವಾರೆಂಟಿ ನೀಡುತ್ತಿದೆ.

ಮತ್ತೊಂದು ಅಚ್ಚರಿಯ ವಿಷಯವೇನೆಂದರೆ ಮಹೀಂದ್ರಾ ಕಂಪನಿಯು, ವಾಹನಕ್ಕೆ 1 ಲಕ್ಷ ಕಿ.ಮೀವರೆಗೆ ಉಚಿತ ಸರ್ವಿಸ್ ನೀಡುವುದಾಗಿ ತಿಳಿಸಿದೆ. ಗ್ರಾಹಕರು ಉಡೋ ಖರೀದಿಸಿದಾಗ, ವಾಹನ ಮಾಲೀಕರಿಗೆ ರೂ. 20 ಲಕ್ಷ ಅಪಘಾತ ವಿಮೆ, ಹಣಕಾಸು ಸಮಾಲೋಚನೆ ಮತ್ತು ಹೆಚ್ಚಿನದನ್ನು ಒದಗಿಸುವ ಮಹೀಂದ್ರಾದ ಉದಯ್ NXT ಯೋಜನೆಗೆ ದಾಖಲಾಗುತ್ತಾರೆ ಎಂದು ಮಹೀಂದ್ರಾ ತಿಳಿಸಿದೆ.
ಮಹೀಂದ್ರಾ ಉಡೋ ವಿಶೇಷತೆಗಳು
ಮಹೀಂದ್ರಾ ಉಡೋವನ್ನು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 200 ಕಿ.ಮೀ (265 ಕಿ.ಮೀ ARAI - ಪ್ರಮಾಣೀಕೃತ ರೇಂಜ್) ಓಡಿಸಬಹುದು. ಈ ವಾಹನವನ್ನು IP67 - ರೇಟೆಡ್, 11.7 ಕಿಲೋವ್ಯಾಟ್ ಲೇಸರ್-ವೆಲ್ಡೆಡ್ ಲಿ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ನಿರ್ಮಾಣ ಮಾಡಲಾಗಿದೆ. ಇದರ PMS ಮೋಟಾರ್ 10 ಕಿಲೋವ್ಯಾಟ್ ಗರಿಷ್ಠ ಪವರ್ ಮತ್ತು 52 ಎನ್ಎಂ ಟಾರ್ಕ್ ಹೊರಹಾಕುತ್ತದೆ.

ರೇಂಜ್, ರೈಡ್ ಮತ್ತು ರೇಸ್ ಎಂಬ ಮೂರು ರೈಡ್ ಮೋಡ್‌ಗಳನ್ನು ಒದಗಿಸಲಾಗಿದ್ದು, ಈ ಡ್ರೈವ್ ಮೋಡ್‌ಗಳು ಚಾಲಕರಿಗೆ ಸಂಚಾರ ಪರಿಸ್ಥಿತಿಗಳನ್ನು ಅವಲಂಬಿಸಿ ದಕ್ಷತೆ ಮತ್ತು ಕಾರ್ಯಕ್ಷಮತೆಯ ನಡುವೆ ಬದಲಾಯಿಸಲು ನಮ್ಯತೆಯನ್ನು ನೀಡುತ್ತದೆ. ಗಂಟೆಗೆ 55 ಕಿ.ಮೀ (ರೇಸ್ ಮೋಡ್‌ನಲ್ಲಿ) ಟಾಪ್ ಸ್ಪೀಡ್ ಹೋಗಬಲ್ಲದು. ಚಾಲಕರು ತಮ್ಮ ಪ್ರಯಾಣಗಳನ್ನು ವೇಗವಾಗಿ ಪೂರ್ಣಗೊಳಿಸಲು ಮತ್ತು ಹೆಚ್ಚಿನ ಆದಾಯ ಗಳಿಸಲು ಸಹಾಯ ಮಾಡುತ್ತದೆ.
ವಾಹನದ ಒಳಗೆ ಚಾಲಕ ಮತ್ತು ಪ್ರಯಾಣಿಕರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಆರಾಮದಾಯಕ ಆಸನಗಳನ್ನು ಒದಗಿಸಲಾಗಿದೆ. ಇದರಲ್ಲಿ ಚಾಲಕನಿಗೆ ಪೈಲಟ್ ಸೀಟು ಸೇರಿದ್ದು, ಇದು ವರ್ಗದಲ್ಲಿನ ಇತರ ವಾಹನಗಳಿಗಿಂತ ಸುಮಾರು 20% ದಪ್ಪವಾಗಿರುತ್ತದೆ. ಪ್ರಯಾಣಿಕರಿಗೆ ಪ್ರಥಮ ದರ್ಜೆ ಆಸನಗಳು ಕೂಡ ಸೇರಿವೆ. ದೀರ್ಘ ಪ್ರಯಾಣದಲ್ಲೂ ಸಹ ಉದಾರವಾದ ಹೆಡ್‌ರೂಮ್ ಮತ್ತು ಲೆಗ್‌ರೂಮ್ ಫೋರಮ್ ಲೌಂಜ್ ತರಹದ ಸೌಕರ್ಯವಿದೆ.

ಹಿಂಭಾಗದಲ್ಲಿ ಇಂಡಿಪೆಂಡೆಂಟ್ ಸಸ್ಪೆನ್ಷನ್ ಮತ್ತು ಡ್ಯುಯಲ್ ಫೋರ್ಕ್ ಫ್ರಂಟ್ ಸಸ್ಪೆನ್ಷನ್ ಒರಟು ರಸ್ತೆಗಳಲ್ಲಿಯೂ ಸ್ಥಿರತೆ ಮತ್ತು ಸವಾರಿ ಸೌಕರ್ಯವನ್ನು ಹೆಚ್ಚಿಸುತ್ತವೆ. ಪೂರ್ಣ ಮಾನೋಕೋಕ್ ನಿರ್ಮಾಣದೊಂದಿಗೆ, ಮಹೀಂದ್ರಾ ಉಡೋ ಹೆಚ್ಚಿನ ರಚನಾತ್ಮಕ ಶಕ್ತಿ ಮತ್ತು ಅತ್ಯುತ್ತಮ - ದರ್ಜೆಯ ಸವಾರಿ ಗುಣಮಟ್ಟವನ್ನು ಹೊಂದಿದೆ ಎಂದು ಮಹೀಂದ್ರಾ ಭರವಸೆ ನೀಡಿದೆ.
ಮಹೀಂದ್ರಾ ಉಡೋ ಅನ್ನು ಜಹೀರಾಬಾದ್‌ನಲ್ಲಿರುವ ಮಹೀಂದ್ರಾದ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ನಿರ್ಮಿಸಲಾಗುತ್ತದೆ. ಮಹೀಂದ್ರಾ ಈ ಸ್ಥಾವರದಲ್ಲಿ ಗಮನಾರ್ಹವಾಗಿ ಹೂಡಿಕೆ ಮಾಡಿದ್ದು, ಇದರಲ್ಲಿ ಹೊಸ ಆಟೋಮ್ಯಾಟಿಕ್ ಬ್ಯಾಟರಿ ಜೋಡಣೆ ಮತ್ತು ರೋಬೋಟೈಸ್ಡ್ ಉತ್ಪಾದನಾ ಮಾರ್ಗಗಳು ಸೇರಿವೆ. ಮುಂಬರುವ ವರ್ಷಗಳಲ್ಲಿ ಇಲ್ಲಿಂದ ದಾಖಲೆಯ ಮಟ್ಟದಲ್ಲಿ ವಾಹನಗಳು ಹೊರಬರಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.


Click it and Unblock the Notifications








