Maruti: ಮಾರುತಿ ಇ-ವಿಟಾರಾ ಬಿಡುಗಡೆ: 11 ಲಕ್ಷ ಕೊಟ್ಟು ಖರೀದಿಸಿ ಪ್ರತಿ ಕಿ.ಮೀ.ಗೆ 4 ರೂ. ಪಾವತಿಸಬೇಕು!
ಭಾರತದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಒಂದು ಪರಿವರ್ತನಾತ್ಮಕ ಮೈಲಿಗಲ್ಲನ್ನು ಗುರುತಿಸುತ್ತಾ, ಮಾರುತಿ ಸುಜುಕಿ (Maruti Suzuzki) ಕೊನೆಗೂ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಇ-ವಿಟಾರಾ (e-VITARA) ವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆಸಕ್ತ ಗ್ರಾಹಕರು ನೆಕ್ಸಾ ಶೋ ರೂಂಗಳಲ್ಲಿ ಅಥವಾ ನೆಕ್ಸಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ರೂ. 21 000 ಆರಂಭಿಕ ಪಾವತಿಯೊಂದಿಗೆ ಕಾರನ್ನು ಬುಕ್ ಮಾಡಬಹುದು. ಜೊತೆಗೆ ಈ ಕಾರಿಗಾಗಿ ಕಂಪನಿಯು 'BaaS' ಪರಿಚಯಿಸಿದ್ದು, ಇದರಡಿ ರೂ. 10.99 ಲಕ್ಷ ಪಾವತಿಸಿ ಕಾರನ್ನು ಮನೆಗೆ ಕೊಂಡೊಯ್ಯಬಹುದು, ಆದರೆ ಬ್ಯಾಟರಿಗೆ ಮಾತ್ರ EMI ರೂ. 3.99/km ಪಾವತಿಸಬೇಕಾಗುತ್ತದೆ.
ಏನಿದು BaaS?: ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಇದೊಂದು ವಿಶಿಷ್ಟ ಮಾಲೀಕತ್ವ ಯೋಜನೆಯಾಗಿದ್ದು, ಗ್ರಾಹಕರು ವಾಹನದಿಂದ ಪ್ರತ್ಯೇಕವಾಗಿ ಬ್ಯಾಟರಿಯನ್ನು ಬಾಡಿಗೆಗೆ ಪಡೆಯಲು ಅನುವು ಮಾಡಿಕೊಡುತ್ತದೆ. ಏಕೆಂದರೆ ಬ್ಯಾಟರಿಯೊಂದಿಗೆ ಕಾರನ್ನು ಖರೀದಿಸಬೇಕೆಂದರೆ ತುಂಬಾ ದುಬಾರಿಯಾಗುತ್ತದೆ. ಹಾಗಾಗಿ BaaS ಯೋಜನೆ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಆರಂಭಿಕ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಇನ್ನೂ ವಿವರವಾಗಿ ಹೇಳಬೇಕೆಂದರೆ ಗ್ರಾಹಕರು ಬ್ಯಾಟರಿಗೆ ಮಾಸಿಕವಾಗಿ ಬಾಡಿಗೆಯನ್ನು ಪಾವತಿಸುತ್ತಾರೆ, ಇದನ್ನು ಚಾಲನೆ ಮಾಡುವ ದೂರವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. ಚಾರ್ಜಿಂಗ್ ವೆಚ್ಚವನ್ನು ಹೊರತುಪಡಿಸಿ ಪ್ರತಿ ಕಿ.ಮೀ.ಗೆ ರೂ.3.99 ಪಾವತಿಸಬೇಕು. ಒಂದು ವೇಳೆ ಬ್ಯಾಟರಿಯೊಂದಿಗೆ ಕಾರನ್ನು ಖರೀದಿಸಬೇಕೆಂದರೆ ಕಾರಿನ ಬೆಲೆ ಸುಮಾರು 18 ಲಕ್ಷ ರೂ. ದಾಟುತ್ತದೆ. ಈ ವೆಚ್ಚವನ್ನು ಕಡಿಮೆ ಮಾಡಲು ಮಾರುತಿ BaaS ಅನ್ನು ಪರಿಚಯಿಸಿದೆ.
ಹೊಸ ಮಾರುತಿ ಇ-ವಿಟಾರಾ ವಿಶೇಷತೆಗಳು
ಮಾರುತಿ ಸುಜುಕಿ ಇ-ವಿಟಾರಾ 61kWh ಮತ್ತು 49kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ. ಕಾರನ್ನು ಸಿಂಗಲ್ ಚಾರ್ಜ್‌ನಲ್ಲಿ 543 ಕಿ.ಮೀ ಓಡಿಸಬಹುದು, ಬ್ಯಾಟರಿ ಮೇಲೆ 8 ವರ್ಷ ಅಥವಾ 1,60,000 ಕಿ.ಮೀವರೆಗೆ ವಾರೆಂಟಿ ನೀಡಲಾಗುತ್ತದೆ (ಯಾವುದು ಮೊದಲೋ ಅದು). ವಾಹನದ ಮೇಲೆ ಪ್ರಮಾಣಿತವಾಗಿ 3 ವರ್ಷ ವಾರೆಂಟಿ ನೀಡಲಾಗುತ್ತದೆ. ವಾರೆಂಟಿ ಅವಧಿಯನ್ನು ಹೆಚ್ಚಿಸುವ ಆಯ್ಕೆ ಕೂಡ ಇದ್ದು, ಹಣ ಪಾವತಿಸುವ ಮೂಲಕ 8 ವರ್ಷಕ್ಕೆ ವಿಸ್ತರಿಸಬಹುದು.

ಮಾರುತಿ ಸುಜುಕಿ ಇ-ವಿಟಾರಾ ಸುರಕ್ಷತೆ ಬಗ್ಗೆ ಹೇಳುವುದಾದ್ರೆ, ಅತ್ಯಾಧುನಿಕ ವ್ಯವಸ್ಥೆಯ ವೈಶಿಷ್ಟ್ಯಗಳೊಂದಿಗೆ ಲೆವೆಲ್ 2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ನೀಡಲಾಗಿದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ (AEB) ಸೇರಿದಂತೆ 7 ಏರ್‌ಬ್ಯಾಗ್‌ಗಳನ್ನು (ಚಾಲಕ ಬದಿಯ ಮೊಣಕಾಲು ಏರ್‌ಬ್ಯಾಗ್ ಸೇರಿದಂತೆ) ಪ್ರಮಾಣಿತವಾಗಿ ನೀಡಲಾಗಿದೆ.
ಜೊತೆಗೆ ಹೊಸ ಮಾರುತಿ ಸುಜುಕಿ ಇ-ವಿಟಾರಾವು 60 ಕ್ಕೂ ಹೆಚ್ಚು ವೈಶಿಷ್ಟ್ಯಗಳೊಂದಿಗೆ ಮುಂದಿನ-ಜನ್ ಸುಜುಕಿ ಕನೆಕ್ಟ್, HEARTECT-e ಪ್ಲಾಟ್‌ಫಾರ್ಮ್‌ನೊಂದಿಗೆ ಸಮಗ್ರ 5-ಸ್ಟಾರ್ ಭಾರತ್ NCAP ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಇದರಲ್ಲಿ 60% ಕ್ಕಿಂತ ಹೆಚ್ಚು ಅಲ್ಟ್ರಾ-ಹೈ-ಟೆನ್ಸೈಲ್ ಮತ್ತು ಹೈ-ಟೆನ್ಸೈಲ್ ಸ್ಟೀಲ್ ಸ್ಟ್ರೆಂತ್ ಸ್ಟೀಲ್ ನಿರ್ಮಾಣ ಮತ್ತು ವರ್ಧಿತ ಸುರಕ್ಷತೆಗಾಗಿ ಸುಧಾರಿತ ಬ್ಯಾಟರಿ ರಕ್ಷಣಾ ವ್ಯವಸ್ಥೆ ಇದೆ.

ಫೀಚರ್ಸ್ ವಿಷಯಕ್ಕೆ ಬಂದರೆ ಮಾರುತಿ ಸುಜುಕಿ ಇ-ವಿಟಾರಾ ಮುಂದಿನ ಸಾಲಿನ ವೆಂಟಿಲೇಟೆಡ್ ಸೀಟ್‌ಗಳು ಮತ್ತು 10 - ವೇ ಪವರ್ ಅಡ್ಜಸ್ಟಬಲ್ ಟ್ರೈವರ್ ಸೀಟ್, ಹಿಂಭಾಗದ ಸೀಟ್‌ಗಳಲ್ಲಿ ಪ್ರಯಾಣಿಕರಿಗೆ ಸ್ಲೈಡಿಂಗ್ ಮತ್ತು ಒರಗಿಕೊಳ್ಳುವ ಸೌಕರ್ಯವನ್ನು ನೀಡಲಾಗಿದೆ. ಸಂಪೂರ್ಣ ಆಟೋಮ್ಯಟಿಕ್ ಕ್ಲೈಮೆಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜರ್ ಮತ್ತು ಇನ್ನೂ ಹಲವು ಸುಧಾರಿತ ಫೀಚರ್ಸ್ ಹೊಂದಿದೆ.
ಕಾರು ಸಂಪೂರ್ಣ ಎಲ್ಇಡಿ ಹೆಡ್‌ಲೈಟ್‌ಗಳು, ಡಿಆರ್‌ಎಲ್‌ಗಳು, ಫಾಗ್ ಲೈಟ್‌ಗಳು, ಟೈಲ್ ಲೈಟ್‌ಗಳನ್ನು ಹೊಂದಿದೆ. 19-ಇಂಚಿನ ಅಲಾಯ್ ವೀಲ್‌ಗಳು ಕಾರಿಗೆ ಮುಖ್ಯ ಆಕರ್ಷಣೆಯಾಗಿವೆ. ಇದು 4,275 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,640 ಎಂಎಂ ಎತ್ತರ, 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,700 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.


Click it and Unblock the Notifications








