Maruti: 543 ಕಿಲೋಮೀಟರ್ ರೇಂಜ್.. ಅತಿ ಶೀಘ್ರದಲ್ಲೇ ಹೊಸ ಮಾರುತಿ ಕಾರು ಬಿಡುಗಡೆ, ಬೆಲೆ ಎಷ್ಟು?
ನೂತನ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಕಾರಿನ ಬಿಡುಗಡೆಗಾಗಿ ಗ್ರಾಹಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ನೋಡಲು ಕೂಡ ತುಂಬಾ ಚೆನ್ನಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಕಾರು ಕೆಲವೇ ದಿನಗಳಲ್ಲಿ ಮಾರಾಟಕ್ಕೂ ಬರಲಿದೆ. ಅಧಿಕೃತ ದಿನಾಂಕದ ಬಗ್ಗೆ ಕಂಪನಿಯು ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಶೀಘ್ರದಲ್ಲೇ ಖರೀದಿದಾರರಿಗೆ ಸಿಹಿಸುದ್ದಿ ಸಿಗುವ ನಿರೀಕ್ಷೆಯಿದೆ.
ಹೊಚ್ಚ ಹೊಸ 'ಮಾರುತಿ ಇ-ವಿಟಾರಾ' ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ರೂ.15 ಲಕ್ಷದಿಂದ ರೂ.19 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಡೆಲ್ಟಾ (Delta), ಜಿಟಾ (Zeta) ಹಾಗೂ ಆಲ್ಫಾ (Alpha) ಎಂಬ ರೂಪಾಂತರಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಈ ಕಾರು ಹೊರಭಾಗದಲ್ಲಿ ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ನವೀನವಾದ ಬಂಪರ್ ಮತ್ತು ಗ್ರಿಲ್‌ನ್ನು ಪಡೆದಿದೆ. ಹೊಸದಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಫಾಗ್ ಲೈಟ್‌ಗಳು, ಎಲ್ಇಡಿ ಟೈಲ್ ಲೈಟ್‌ಗಳು, ಫೆಂಡರ್‌ನಲ್ಲಿ ಚಾರ್ಜಿಂಗ್ ಪೋರ್ಟ್, 19-ಇಂಚಿನ ಅಲಾಯ್ ವೀಲ್‌ಗಳು, ವಾಷರ್ & ಡಿಫಾಗರ್‌ಗಳೊಂದಿಗೆ ವೈಪರ್‌ನ್ನು ಒಳಗೊಂಡಿದೆ.
ಇದು ಸಾಕಷ್ಟು ದೊಡ್ಡ ಗಾತ್ರದಲ್ಲಿದೆ. 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,700 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಜೊತೆಗೆ ನೆಕ್ಸಾ ಬ್ಲೂ, ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಗ್ರ್ಯಾಂಡಿಯರ್ ಗ್ರೇ, ಬ್ಲ್ಯೂಯಿಶ್ ಬ್ಲ್ಯಾಕ್ ಮತ್ತು ಆಪ್ಯುಲೆಂಟ್ ರೆಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಹೊಸ 'ಮಾರುತಿ ಸುಜುಕಿ ಇ-ವಿಟಾರಾ' 5 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. ವಾರಾಂತ್ಯ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ ಸರಿ ಸಮಾರು 236 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.
ಈ ಎಲೆಕ್ಟ್ರಿಕ್ ಎಸ್‌ಯುವಿಯು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. ಬೃಹದಾಕಾರದ 49 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 61 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 543 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 150 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 9.6 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಇದರ ಕ್ಯಾಬಿನ್ ವಿನ್ಯಾಸವು ಅದ್ಬುತವಾಗಿದೆ. 10.1-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿರುವ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 2-ಸ್ಪೋಕ್ ಸ್ಟೀರಿಂಗ್ ವೀಲ್, ಫಿಕ್ಸೆಡ್ ಗ್ಲಾಸ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ನೂತನ 'ಮಾರುತಿ ಸುಜುಕಿ ಇ-ವಿಟಾರಾ' ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಭಾರತ್ ಎನ್‌ಸಿಎಪಿ ಪರೀಕ್ಷೆಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಹೊಂದುವಲ್ಲಿ ಸಫಲವಾಗಿದೆ. ವಯಸ್ಕರ ರಕ್ಷಣೆಗಾಗಿ 2ಕ್ಕೆ 31.49 ಅಂಕಗಳನ್ನು ಪಡೆದಿದೆ. ಮಕ್ಕಳ ರಕ್ಷಣೆಗಾಗಿ 49ಕ್ಕೆ 43 ಅಂಕಗಳನ್ನು ಗಳಿಸಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಈ ಎಲೆಕ್ಟ್ರಿಕ್ ಎಸ್‌ಯುವಿಗೆ ಸಾಲು - ಸಾಲು ಪ್ರತಿಸ್ಪರ್ಧಿಗಳಿವೆ. ಮಹೀಂದ್ರಾ ಬಿಇ 6 (Mahindra BE 6), ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ (Hyundai Creta Electric), ಎಂಜಿ ಜಡ್ಎಸ್ ಇವಿ (MG ZS EV), ಟಾಟಾ ಕರ್ವ್ ಇವಿ (Tata Curvv EV), ಟಾಟಾ ನೆಕ್ಸಾನ್ ಇವಿ (Tata Nexon EV), ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಇವಿ (Mahindra XUV 3XO EV) ಕಾರುಗಳು ಪ್ರಬಲವಾದ ಎದುರಾಳಿಯಾಗಿವೆ.


Click it and Unblock the Notifications








