Maruti Suzuki: ಮತ್ತೆ ಸಿಡಿದೆದ್ದ ಮಾರುತಿ.. ಥಾರ್ ವಿರುದ್ಧ ತೊಡೆ ತಟ್ಟಿಯೇ ಬಿಡ್ತು.. ಭಾರೀ ಸಂಖ್ಯೆಯಲ್ಲಿ ಜಿಮ್ನಿ ಸೇಲ್ಸ್!
ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಜನಮೆಚ್ಚಿದ ಆಫ್-ರೋಡ್ ಎಸ್‌ಯುವಿಯಾಗಿದೆ. ಇದಕ್ಕೆ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ನೇರವಾದ ಎದುರಾಳಿಯಾಗಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ಕುಸಿತವಾಗುತ್ತಿತ್ತು. ಸದ್ಯ, ಇದೇ 'ಜಿಮ್ನಿ' ಮಾರಾಟವು ದಿಢೀರನೇ ಅಧಿಕಗೊಂಡಿದೆ. ಕಳೆದ ತಿಂಗಳು (ಜನವರಿ - 2026) ಒಟ್ಟು 591 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2025ರ ಜನವರಿಯಲ್ಲಿ 163 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 263% ಪ್ರಗತಿಯಾಗಿದೆ.
'ಮಾರುತಿ ಜಿಮ್ನಿ' ವಿಶೇಷತೆಗಳೇನು:
ಈ ಎಸ್‌ಯುವಿಯು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಿದೆ. ಕನಿಷ್ಠ ರೂ.12.32 ಲಕ್ಷ ಹಾಗೂ ಗರಿಷ್ಠ ರೂ.14.45 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಮಧ್ಯಮ ಹಾಗೂ ಶ್ರೀಮಂತ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ಆಲ್ಫಾ (Zeta) ಹಾಗೂ ಡೆಲ್ಟಾ (Alpha) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 15-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಎವರೆಸ್ಟ್ ವೈಟ್, ಸ್ಟೆಲ್ತ್ ಬ್ಲ್ಯಾಕ್, ನೆಬ್ಯುಲಾ ಬ್ಲೂ, ಬ್ಯಾಟಲ್‌ಶಿಪ್ ಗ್ರೇ, ಡೀಪ್ ಫಾರೆಸ್ಟ್, ಟ್ಯಾಂಗೋ ರೆಡ್ ಮತ್ತು ಬರ್ನ್ಟ್ ಸಿಯೆನ್ನಾ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ನೂತನ 'ಜಿಮ್ನಿ' ಸಾಕಷ್ಟು ವಿಶಾಲವಾಗಿದೆ. 3,985 ಮಿ.ಮೀ ಉದ್ದ, 1,645 ಮಿ.ಮೀ ಅಗಲ ಮತ್ತು 1,720 ಮಿ.ಮೀ ಎತ್ತರವಿದೆ. 210 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,590 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಬರೋಬ್ಬರಿ 1545 ಕೆಜಿ ತೂಕವಿದೆ.

ಈ ಕಾರು 4-ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ 208 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ಇದು ಬೆಲೆಗೆ ತಕ್ಕಂತೆ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 1.5-ಲೀ. ಪೆಟ್ರೋಲ್ ಎಂಜಿನ್ ಪಡೆದಿದ್ದು, 6,000 ಆರ್‌ಪಿಎಂನಲ್ಲಿ 105 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 4,000 ಆರ್‌ಪಿಎಂನಲ್ಲಿ 134.2 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 4-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಹೊಸ 'ಮಾರುತಿ ಸುಜುಕಿ ಜಿಮ್ನಿ' ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. 16 ರಿಂದ 17 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 40 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. 155 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಬರೀ 4.5 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಈ ಎಸ್‌ಯುವಿಯ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 4-ಸ್ಪೀಕರ್ ಅರ್ಕಾಮಿಸ್ ಸೌಂಡ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋ ಎಸಿ ಹಾಗೂ ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ನೂತನ 'ಮಾರುತಿ ಜಿಮ್ನಿ' ಸುರಕ್ಷತೆಯಿಂದಲೂ ಮನೆ ಮಾತಾಗಿದೆ. 6-ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್-ಪಾರ್ಕಿಂಗ್ ಸೆನ್ಸರ್ಸ್, ರೇರ್ ವ್ಯೂ ಕ್ಯಾಮೆರಾ, ಹಿಲ್ ಹೋಲ್ಡ್ ಕಂಟ್ರೋಲ್ ಹಾಗೂ 3-ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಒಳಗೊಂಡಿದೆ.


Click it and Unblock the Notifications








