Maruti Victoris: ಭಾರತದ ಎಸ್‌ಯುವಿಗೆ ವಿದೇಶದಲ್ಲೂ ಫುಲ್ ಡಿಮ್ಯಾಂಡ್! ಇಲ್ಲಿ 70,000 ಬುಕಿಂಗ್
ಮಾರುತಿ ಸುಜುಕಿ (Maruti Suzuki), ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ವಿಕ್ಟೋರಿಸ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದು, ಉತ್ತಮ ಬೇಡಿಕೆಯೊಂದಿಗೆ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಇದೀಗ ಕಂಪನಿಯು ರಫ್ತು ಕೂಡ ಆರಂಭಿಸಿದ್ದು, ಮುಂದ್ರಾ ಮತ್ತು ಪಿಪಾವಾವ್ ಬಂದರುಗಳಿಂದ 450 ಕ್ಕೂ ಹೆಚ್ಚು ಯುನಿಟ್ ಕಾರುಗಳನ್ನು ರವಾನಿಸಿದೆ. ಈ ಕಾರನ್ನು 'ಅಕ್ರಾಸ್' ಹೆಸರಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು ಎಂದು ಸುಜುಕಿ ತಿಳಿಸಿದೆ. ಈ 450 ಕ್ಕೂ ಹೆಚ್ಚು ಕಾರುಗಳನ್ನು ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.
ವಿಕ್ಟೋರಿಸ್ ಅನ್ನು 100 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಿಗೆ ರಫ್ತು ಮಾಡಲು ಯೋಜಿಸಲಾಗಿದೆ, ಇದರಲ್ಲಿ ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾವನ್ನು ಪ್ರಮುಖ ಕೇಂದ್ರ ಮಾರುಕಟ್ಟೆಗಳಾಗಿ ಗುರುತಿಸಲಾಗಿದೆ. ವಿಕ್ಟೋರಿಸ್ ಗ್ಲೋಬಲ್ NCAP ಮತ್ತು ಭಾರತ್ NCAP ಎರಡರಿಂದಲೂ 5-ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. ಜಾಗತಿಕವಾಗಿ ಸ್ಪರ್ಧಾತ್ಮಕ ಎಸ್‌ಯುವಿಯಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ.

ಮಾರುತಿ ಸುಜುಕಿಯ ಹರಿಯಾಣ ಉತ್ಪಾದನಾ ಸೌಲಭ್ಯದಲ್ಲಿ ತಯಾರಿಸಲಾದ ವಿಕ್ಟೋರಿಸ್ ಅನ್ನು ಸೆಪ್ಟೆಂಬರ್ 2025 ರಲ್ಲಿ ಭಾರತೀಯ ಮಾರುಕಟ್ಟೆಗೆ ಮೊದಲ ಬಾರಿಗೆ ಪರಿಚಯಿಸಲಾಯಿತು. ಹಾಗೆಯೇ ಜಪಾನ್ ಮೊಬಿಲಿಟಿ ಶೋ 2025 ರಲ್ಲಿ ಅಂತರರಾಷ್ಟ್ರೀಯ ಖರೀದಿದಾರರಿಗೆ ವಿಕ್ಟೋರಿಸ್ ಅನ್ನು ಪ್ರದರ್ಶಿಸಲಾಯಿತು. ಸದ್ಯ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಕಾರು, ಈಗಾಗಲೇ 70,000 ಬುಕಿಂಗ್‌ಗಳನ್ನು ಬಾಚಿಕೊಂಡಿದೆ.
ಅದರಲ್ಲಿ 35,000 ಯುನಿಟ್ ಕಾರುಗಳನ್ನು ಈಗಾಗಲೇ ರವಾನಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಭಾರತದಲ್ಲಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಲಾದ ಎಸ್‌ಯುವಿ, ಮಾರುತಿ ಸುಜುಕಿಯ ದೀರ್ಘಕಾಲದ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ತತ್ವಶಾಸ್ತ್ರದ ಅಡಿಯಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಕಾರುಗಳನ್ನು ನಿರ್ಮಿಸುವತ್ತ ಹೆಚ್ಚುತ್ತಿರುವ ಒತ್ತನ್ನು ಪ್ರತಿಬಿಂಬಿಸುತ್ತದೆ.

ಭಾರತದಲ್ಲಿ ಮಾರುತಿ ಸುಜುಕಿ 2025 ರಲ್ಲಿ 3.9 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ರಫ್ತು ಮಾಡಿದೆ, ಸತತ ಐದನೇ ವರ್ಷವೂ ಭಾರತದ ಅತಿದೊಡ್ಡ ಪ್ರಯಾಣಿಕ ವಾಹನ ರಫ್ತುದಾರನಾಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಕಂಪನಿಯು ಪ್ರಸ್ತುತ ಭಾರತದಲ್ಲಿ ತಯಾರಾದ ಸುಮಾರು 18 ಮಾಡಲ್‌ಗಳನ್ನು ರಫ್ತು ಮಾಡುತ್ತಿದ್ದು, ಈ ವರ್ಷ ನಮ್ಮ ಮೊದಲ ಎಲೆಕ್ಟ್ರಿಕ್ ವಾಹನ ಇ-ವಿಟಾರಾವನ್ನು ರಫ್ತು ಮಾಡುವ ಮೂಲಕ ಯುರೋಪ್‌ಗೆ ಮರು ಪ್ರವೇಶ ಮಾಡಲಿದ್ದೇವೆ ಎಂದು ಸುಜುಕಿ ಹೇಳಿದೆ.
ಮಾರುತಿ ಸುಜುಕಿ ವಿಕ್ಟೋರಿಸ್ ಎಸ್‌ಯುವಿಯನ್ನು ಯುವ ಖರೀದಿದಾರರನ್ನು ಗುರಿಯಾಗಿಟ್ಟುಕೊಂಡು ನಿರ್ಮಿಸಲಾಗಿದ್ದು, ಸ್ಪೋರ್ಟಿ ಡಿಸೈನ್, ಪ್ರೀಮಿಯಂ ಇಂಟೀರಿಯರ್ ಮತ್ತು ಕನೆಕ್ಟೆಡ್ ಟೆಕ್ ಒಳಗೊಂಡಿದೆ. ವಿಕ್ಟೋರಿಸ್, ಮಾರುತಿ ಸುಜುಕಿಯ ಅಂತರರಾಷ್ಟ್ರೀಯ ಬಂಡವಾಳವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಬಲವಾದ ಸ್ವೀಕಾರವನ್ನು ಪಡೆಯಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಮಾರುತಿ ಸುಜುಕಿ ವಿಕ್ಟೋರಿಸ್ ವಿಶೇಷತೆಗಳು:
ವಿಕ್ಟೋರಿಸ್ 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 10.01-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಎಕ್ಸ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಬಿಲ್ಟ್-ಇನ್ ಅಪ್ಲಿಕೇಶನ್‌ಗಳು, OTA ಅಪ್‌ಡೇಟ್‌ಗಳು ಮತ್ತು ಅಲೆಕ್ಸಾ ವಾಯಿಸ್ ಕಮಾಂಡ್‌ಗಳನ್ನು ಸಪೋರ್ಟ್ ಮಾಡುತ್ತದೆ. ಡಾಲ್ಬಿ ಅಟ್ಮಾಸ್‌ನೊಂದಿಗೆ ಹರ್ಮನ್‌ನ 8-ಸ್ಪೀಕರ್ ಆಡಿಯೊ ಸಿಸ್ಟಮ್ ಕೂಡ ಇದೆ.
ಸುರಕ್ಷತೆಯಲ್ಲು ಉತ್ತಮವಾಗಿದ್ದು, ಸ್ಟಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳು, ESP, EBD ಜೊತೆಗೆ ABS, ಹಿಲ್ ಹೋಲ್ಡ್ ಅಸಿಸ್ಟ್, TPMS ಮತ್ತು ಪಾರ್ಕಿಂಗ್ ಸೆನ್ಸರ್‌ಗಳು ಸಿಗುತ್ತವೆ. ಟಾಪ್ ವೇರಿಯೆಂಟ್‌ಗಳಲ್ಲಿ ಲೆವೆಲ್ 2 ADAS, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಹೈ-ಬೀಮ್ ಅಸಿಸ್ಟ್ ಮತ್ತು ಹಿಂಭಾಗದ ಕ್ರಾಸ್-ಟ್ರಾಫಿಕ್ ಅಲರ್ಟ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ.


Click it and Unblock the Notifications