ಹೊಸ ಆಡಿ Q3 ಬುಕಿಂಗ್ ಆರಂಭ: ₹1 ಲಕ್ಷಕ್ಕೆ ಈ ಐಷಾರಾಮಿ ಕಾರು ನಿಮ್ಮದಾಗಿಸಿಕೊಳ್ಳಿ, ಫೀಚರ್ಸ್ ನೋಡಿ ಫಿದಾ!
ಹೊಸ ಆಡಿ Q3 (Audi Q3) ಕಾರಿಗಾಗಿ ಬುಕಿಂಗ್‌ಗಳು ಸೆಪ್ಟೆಂಬರ್ 1, 2026 ರಿಂದಲೇ ಅಧಿಕೃತವಾಗಿ ಆರಂಭವಾಗಿವೆ. ಆಡಿ ಇಂಡಿಯಾ ವೆಬ್‌ಸೈಟ್, ಮೈಆಡಿ ಕನೆಕ್ಟ್ ಆ್ಯಪ್ ಹಾಗೂ ಅಧಿಕೃತ ಡೀಲರ್‌ಶಿಪ್‌ಗಳ ಮೂಲಕ ₹1 ಲಕ್ಷ ಮುಂಗಡ ಹಣ (ಟೋಕನ್ ಅಮೌಂಟ್) ಪಾವತಿಸಿ ಈ ಕಾರನ್ನು ಬುಕ್ ಮಾಡಿಕೊಳ್ಳಬಹುದು. ಇನ್ನು ಕೆಲವೇ ವಾರಗಳಲ್ಲಿ ಇದರ ಬೆಲೆ ಘೋಷಣೆಯಾಗಲಿದ್ದು, ದಸರಾ-ದೀಪಾವಳಿ ಹಬ್ಬದ ವೇಳೆಗೆ ಮೊದಲ ಹಂತದ ಗ್ರಾಹಕರಿಗೆ ಡೆಲಿವರಿ ನೀಡುವ ಗುರಿ ಹೊಂದಲಾಗಿದೆ. ಹಬ್ಬದ ಸೀಸನ್‌ನಲ್ಲಿ ಕಾರು ಖರೀದಿಸಲು ಕಾಯುತ್ತಿರುವ ಗ್ರಾಹಕರು ಇದರ ವೇರಿಯೆಂಟ್, ಫೀಚರ್ಸ್ ಮತ್ತು ಇಎಮ್‌ಐ ಆಫರ್‌ಗಳ ಬಗ್ಗೆ ತಿಳಿಯಲು ಭಾರೀ ಕುತೂಹಲ ತೋರುತ್ತಿದ್ದಾರೆ.
ಹೊಸ ಆಡಿ Q3 ಕಾರಿನಲ್ಲಿ 2.0-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಇರುವುದನ್ನು ಕಂಪನಿ ಸ್ಪಷ್ಟಪಡಿಸಿದೆ. ಇದು 204 PS ಪವರ್ ಹಾಗೂ 320 Nm ಟಾರ್ಕ್ ಉತ್ಪಾದಿಸುತ್ತದೆ. ಇದಕ್ಕೆ 7-ಸ್ಪೀಡ್ ಡುಯಲ್-ಕ್ಲಚ್ ಗೇರ್‌ಬಾಕ್ಸ್ ಮತ್ತು ಕ್ವಾಟ್ರೋ ಆಲ್-ವೀಲ್ ಡ್ರೈವ್ (quattro AWD) ಸಿಸ್ಟಮ್ ಜೋಡಿಸಲಾಗಿದೆ. ಈ ಕಾರು ಕೇವಲ 7.1 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದೆ ಎಂದು ಆಟೋಕಾರ್ ವರದಿ ಮಾಡಿದೆ. ಸಣ್ಣ 3-ಸಿಲಿಂಡರ್ ಎಂಜಿನ್ ಹೊಂದಿರುವ ಸ್ಪರ್ಧಿಗಳಿಗೆ ಹೋಲಿಸಿದರೆ, ಇದರ ಎಂಜಿನ್ ಪವರ್‌ಫುಲ್ ಆಗಿದೆ. ಜೊತೆಗೆ, ಹೈವೇ ಪ್ರಿಯರು ಮತ್ತು ಬೆಟ್ಟಗುಡ್ಡ ಪ್ರದೇಶಗಳಲ್ಲಿ ಡ್ರೈವ್ ಮಾಡುವವರಿಗೆ ಇದರ AWD ಸಿಸ್ಟಮ್ ಹೇಳಿಮಾಡಿಸಿದಂತಿದೆ.

ಆಡಿ Q3 ಭಾರತದಲ್ಲಿ ಬುಕಿಂಗ್, ವೇರಿಯೆಂಟ್, ಫೀಚರ್ಸ್ ಮತ್ತು ADAS
ಕಾರಿನ ವೇರಿಯೆಂಟ್‌ಗಳ ವಿವರ ಕಾರು ಲಾಂಚ್ ವೇಳೆ ತಿಳಿಯಲಿದೆ. ಆದರೆ, ಫೀಚರ್‌ಗಳಲ್ಲಿ ದೊಡ್ಡ ಬದಲಾವಣೆಗಳನ್ನೇ ಮಾಡಲಾಗಿದೆ. ಇದರಲ್ಲಿ ಹೊಸ 12.8-ಇಂಚಿನ ಟಚ್‌ಸ್ಕ್ರೀನ್, 11.9-ಇಂಚಿನ ಡ್ರೈವರ್ ಡಿಸ್‌ಪ್ಲೇ, ಪ್ಯಾನೊರಾಮಿಕ್ ಸನ್‌ರೂಫ್, ಪ್ರೀಮಿಯಂ ಆಡಿಯೋ ಸಿಸ್ಟಮ್ ಮತ್ತು 360-ಡಿಗ್ರಿ ಕ್ಯಾಮೆರಾ ಇರಲಿದೆ. ಜೊತೆಗೆ ಡಿಜಿಟಲ್ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್‌ಗಳು ಹಾಗೂ ಇಲ್ಯುಮಿನೇಟೆಡ್ ಲೋಗೋ ರಿಂಗ್‌ಗಳು ಇರಲಿವೆ. ಆಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್-ಅಸಿಸ್ಟ್ ಹೊಂದಿರುವ 'ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್' (ADAS) ಇರಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಭಾರತದ ಮಾಡೆಲ್‌ನಲ್ಲಿ ಏನೆಲ್ಲಾ ADAS ಫೀಚರ್‌ಗಳು ಸಿಗಲಿವೆ ಎಂಬುದನ್ನು ಆಡಿ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.
ಆಡಿ Q3 ನಿರೀಕ್ಷಿತ ಬೆಲೆ, ಆನ್-ರೋಡ್ ಮತ್ತು ಇಎಮ್‌ಐ ವಿವರ
ಹೊಸ ಆಡಿ Q3 ಎಕ್ಸ್-ಶೋರೂಮ್ ಬೆಲೆ ರಫ್ ಆಗಿ ₹55–60 ಲಕ್ಷ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬೆಲೆಯ ಆಧಾರದ ಮೇಲೆ ಅಂದಾಜು ಆನ್-ರೋಡ್ ಬೆಲೆ ನೋಡುವುದಾದರೆ: ದೆಹಲಿಯಲ್ಲಿ ಸುಮಾರು ₹64–70 ಲಕ್ಷ, ಮುಂಬೈನಲ್ಲಿ ₹66–72 ಲಕ್ಷ ಹಾಗೂ ಹೆಚ್ಚಿನ ರೋಡ್ ಟ್ಯಾಕ್ಸ್ ಇರುವ ಬೆಂಗಳೂರಿನಲ್ಲಿ ₹70–75 ಲಕ್ಷ ಗಡಿ ತಲುಪಬಹುದು. ಇಎಮ್‌ಐ ಲೆಕ್ಕಾಚಾರ ನೋಡುವುದಾದರೆ, ₹72 ಲಕ್ಷ ಆನ್-ರೋಡ್ ಬೆಲೆಯ ಕಾರಿಗೆ 20% ಡೌನ್ ಪೇಮೆಂಟ್ ಮಾಡಿ, 10% ಬಡ್ಡಿ ದರದಲ್ಲಿ 5 ವರ್ಷಗಳ ಅವಧಿಗೆ ಸಾಲ ಪಡೆದರೆ, ತಿಂಗಳಿಗೆ ಸುಮಾರು ₹1.22 ಲಕ್ಷ ಇಎಮ್‌ಐ ಬರಬಹುದು (ಇನ್ಶೂರೆನ್ಸ್ ಮತ್ತು ರಾಜ್ಯಗಳ ತೆರಿಗೆಗೆ ಅನುಗುಣವಾಗಿ ಇದು ಬದಲಾಗಬಹುದು).
| ಸ್ಪರ್ಧಿ ಕಾರುಗಳು | ಆರಂಭಿಕ ಎಕ್ಸ್-ಶೋರೂಮ್ ಬೆಲೆ | ಡ್ರೈವ್‌ಟ್ರೇನ್ | ವಿಶೇಷತೆ |
|---|---|---|---|
| ಬಿಎಮ್‌ಡಬ್ಲ್ಯೂ X1 LWB | ₹49.90 ಲಕ್ಷ | FWD, 3-ಸಿಲಿಂಡರ್ ಪೆಟ್ರೋಲ್ | ಹಿಂದಿನ ಸೀಟ್‌ನಲ್ಲಿ ಹೆಚ್ಚು ಜಾಗ, ಬೆಲೆಗೆ ತಕ್ಕ ಮೌಲ್ಯ |
| ಮರ್ಸಿಡಿಸ್-ಬೆಂಜ್ GLA | ₹51.80 ಲಕ್ಷ | FWD ಪೆಟ್ರೋಲ್; AWD ಡೀಸೆಲ್ | ಬ್ರಾಂಡ್ ಇಮೇಜ್, ವಿಶಾಲವಾದ ಡೀಲರ್ ನೆಟ್‌ವರ್ಕ್ |
| ಮರ್ಸಿಡಿಸ್-ಬೆಂಜ್ GLB | ~₹63.8 ಲಕ್ಷ (ಹಿಂದೆ) | FWD/AWD | 7 ಸೀಟರ್ ಕಾರು; ಪ್ರಸ್ತುತ ಮಾರಾಟದಲ್ಲಿಲ್ಲ |
| ವೋಲ್ವೋ EX40 (XC40 EV) | ₹54.95–57.90 ಲಕ್ಷ | ಎಲೆಕ್ಟ್ರಿಕ್, FWD/AWD | ಸೈಲೆಂಟ್ ರನ್, ಶರವೇಗದ ಪಿಕಪ್, ಕಡಿಮೆ ಮೇಂಟನೆನ್ಸ್ ವೆಚ್ಚ |
ಬಿಎಮ್‌ಡಬ್ಲ್ಯೂ X1, ಮರ್ಸಿಡಿಸ್ GLA, GLB ಮತ್ತು ವೋಲ್ವೋ EX40 ಕಾರುಗಳಿಗೆ ಪೈಪೋಟಿ ನೀಡಲು ಹೊರಟಿರುವ ಆಡಿ Q3ಗೆ ಮುಖ್ಯ ಶಕ್ತಿ ಎಂದರೆ ಇದರ ಪವರ್‌ಫುಲ್ 4-ಸಿಲಿಂಡರ್ ಎಂಜಿನ್, ಸ್ಟ್ಯಾಂಡರ್ಡ್ ಆಲ್-ವೀಲ್ ಡ್ರೈವ್ (quattro) ಮತ್ತು ಅತ್ಯಾಧುನಿಕ ಫೀಚರ್‌ಗಳು. ಆಡಿ ಈ ಕಾರನ್ನು ₹55–60 ಲಕ್ಷ ಆಸುಪಾಸಿನಲ್ಲಿ ಬಿಡುಗಡೆ ಮಾಡಿದರೆ, ಇದು X1 ಗಿಂತ ಕೊಂಚ ದುಬಾರಿಯಾಗಿದ್ದರೂ GLA ಕಾರಿಗೆ ನೇರ ಸ್ಪರ್ಧೆ ನೀಡಲಿದೆ. ಜೊತೆಗೆ ಲಕ್ಸುರಿ ಬ್ರಾಂಡ್ ಮತ್ತು ಆಲ್-ವೀಲ್ ಡ್ರೈವ್ (AWD) ಗ್ರಿಪ್ ಬಯಸುವ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ.


Click it and Unblock the Notifications