Tata: ಹೀಗೆ ಟೆಸ್ಟ್ ಮಾಡುವ ಧಮ್ ಇದೆಯೇ? ಕಾರು ಬಿಡುಗಡೆ ಮಾಡಿ ಟ್ರಕ್‌ನೊಂದಿಗೆ ಗುದ್ದಿಸಿದ ಟಾಟಾ!
ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (Tata Motors), ಇಂದು ಭಾರತದ ಅತ್ಯಂತ ಜನಪ್ರಿಯ ಪಂಚ್ ಎಸ್‌ಯುವಿಯನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಹೊಸ ಟಾಟಾ ಪಂಚ್ ಸಾಟಿಯಿಲ್ಲದ ಪವರ್, ಉನ್ನತ ಸೌಕರ್ಯ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮಸ್ಕುಲರ್ ಡಿಸೈನ್‌ನೊಂದಿಗೆ ಈ ಬಾರಿ ಎಂಟ್ರಿ ಕೊಟ್ಟಿದೆ. ಕೇವಲ ರೂ. 5.59 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ವಿಶೇಷತೆ ಏನೆಂದರೆ ಬಿಡುಗಡೆ ದಿನದಂದೆ ಟಾಟಾ ಪಂಚ್ ಅನ್ನು ಟ್ರಕ್‌ನೊಂದಿಗೆ ಗುದ್ದಿಸಿದ ವಿಡಿಯೋವನ್ನು ಹಂಚಿಕೊಂಡು ಗುಣಮಟ್ಟದಲ್ಲಿ ರಾಜಿಯೇ ಇಲ್ಲ ಎಂಬುದನ್ನು ಮತ್ತೇ ಸಾಭೀತುಪಡಿಸಿದೆ.
ಭಾರತ್ NCAP ಅಡಿಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿರುವ ಹೊಸ ಟಾಟಾ ಹೊಸ ಪಂಚ್‌ನೊಂದಿಗೆ ಸುರಕ್ಷತೆಯ ಮೇಲೆ ತನ್ನ ಬಲವಾದ ಗಮನವನ್ನು ಮತ್ತೊಮ್ಮೆ ಒತ್ತಿಹೇಳಿದೆ. ಈ ಸಾಧನೆಯು ಭಾರತದಲ್ಲಿನ ಸಬ್ - ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಅತ್ಯಂತ ಸುರಕ್ಷಿತ ವಾಹನಗಳಲ್ಲಿ ಒಂದಾಗಿ ಪಂಚ್‌ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.

ಟಾಟಾ ಮೋಟಾರ್ಸ್ ಹೊಸ ಪಂಚ್ ನಿಜವಾದ ಅಪಘಾತ ಸನ್ನಿವೇಶಗಳಲ್ಲಿ ಹೇಗೆ ಪ್ರಯಾಣಿಕರನ್ನು ರಕ್ಷಿಸಬಲ್ಲದು ಎಂಬುದನ್ನು ಪ್ರದರ್ಶಿಸಲು ಹಾಗೂ ಕಾರಿನ ಸುರಕ್ಷತಾ ಗುಣಮಟ್ಟವನ್ನು ಇಡೀ ವಿಶ್ವಕ್ಕೆ ತೋರಿಸಲು, ಟ್ರಕ್‌ಗೆ ಡಿಕ್ಕಿ ಹೊಡೆಸಲಾಗಿದೆ. ಇದು ಭಾರತೀಯ ರಸ್ತೆಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ಮತ್ತು ಅಪಾಯಕಾರಿ ಅಪಘಾತ ಸನ್ನಿವೇಶಗಳಲ್ಲಿ ಒಂದಾಗಿರುವ ಕಾರಣ ಹೀಗೆ ಮಾಡಲಾಗಿದೆ.
ಅಪಘಾತದಲ್ಲಿ ಹೊಸ ಪಂಚ್ ವೇಗವಾಗಿ ಹೋಗಿ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ಫಲಿತಾಂಶಗಳು ಟಾಟಾದ ಸುರಕ್ಷತಾ ಎಂಜಿನಿಯರಿಂಗ್‌ನ ದೃಢತೆಯನ್ನು ಎತ್ತಿ ತೋರಿಸಿವೆ. ಡಿಕ್ಕಿಯ ನಂತರ, ಕಾರಿನ ಕ್ಯಾಬಿನ್‌ಗೆ ಯಾವುದೇ ಹಾನಿಯಾಗಿಲ್ಲ. ಮುಖ್ಯವಾಗಿ, ಅಪಘಾತದ ನಂತರ ಎಲ್ಲಾ ಬಾಗಿಲುಗಳನ್ನು ತೆರೆಯಬಹುದಿತ್ತು, ಇದು ಕಾರಿನ ರಚನಾತ್ಮಕ ಸ್ಥಿರತೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಎತ್ತಿತೋರಿಸಿದೆ.

ಸೇಫ್ಟಿ ಫೀಚರ್ಸ್
ಆಲ್ಫಾ-ಆರ್ಕ್ ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾದ ಮತ್ತು ಅಲ್ಟ್ರಾ ಹೈ ಸ್ಟ್ರೆಂತ್ ಸ್ಟೀಲ್‌ನಿಂದ ನಿರ್ಮಿಸಲಾದ ಹೊಸ ಪಂಚ್, 95 ಕ್ಕೂ ಹೆಚ್ಚು ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಆಟೋ ಹೆಡ್‌ಲ್ಯಾಂಪ್‌ಗಳು, ರೈನ್-ಸೆನ್ಸಿಂಗ್ ವೈಪರ್, ಎಲ್ಲಾ ಸೀಟ್‌ಗಳಲ್ಲಿ ರಿಮೈಂಡರ್ ಹೊಂದಿರುವ 3-ಪಾಯಿಂಟ್ ELR ಸೀಟ್‌ಬೆಲ್ಟ್‌ಗಳು ಪ್ರತಿಯೊಬ್ಬ ಪ್ರಯಾಣಿಕರನ್ನು ಸುರಕ್ಷಿತವಾಗಿರಿಸುತ್ತವೆ.
ಈಗಾ ಭಾರತದಲ್ಲಿನ ಪ್ರತಿಯೊಂದು ಭೂಪ್ರದೇಶಕ್ಕೂ ಸಿದ್ಧವಾಗಿರುವ ಹೊಸ ಪಂಚ್, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಪಡೆಯುವ ಮೂಲಕ ಚಾಲಕನಿಗೆ ಸಾಟಿಯಿಲ್ಲದ ವಿಶ್ವಾಸವನ್ನು ಒದಗಿಸುತ್ತದೆ. ಇದಕ್ಕೆ ಹಿಂಭಾಗದ ಡಿಫೋಗರ್, ಹಿಂಭಾಗದ ವೈಪರ್ ಮತ್ತು ವಾಶ್‌ನ ಅನುಕೂಲತೆಯನ್ನು ಸೇರಿಸಿ ಹೊಸ ಪಂಚ್ ಯಾವುದೇ ಹವಾಮಾನಕ್ಕೂ ಸಿದ್ಧ ಎಂಬುದನ್ನು ಖಚಿತಪಡಿಸಲಾಗಿದೆ.
ಎಂಜಿನ್: ಹೊಸ ಟಾಟಾ ಪಂಚ್ 3 ಪವರ್ ಟ್ರೇನ್‌ನ್ನು ಒಳಗೊಂಡಿದ್ದು, ಇದರ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 120 ಬಿಹೆಚ್ ಪವರ್ ಹಾಗೂ 170 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಮತ್ತೊಂದು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 88 ಬಿಹೆಚ್ ಪವರ್ ಮತ್ತು 115 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ.
ಇನ್ನೊಂದು 1.2-ಲೀಟರ್ ಸಿಎನ್‌ಜಿ ಎಂಜಿನ್ ಆಯ್ಕೆಯಾಗಿದ್ದು, ಇದು 73.4 ಬಿಹೆಚ್ ಪವರ್ ಹಾಗೂ 103 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ.


Click it and Unblock the Notifications








